ADVERTISEMENT

ಸೇತುವೆ ವಿಸ್ತರಣೆಗೆ ಒತ್ತಾಯಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 5:55 IST
Last Updated 24 ಏಪ್ರಿಲ್ 2017, 5:55 IST

ರಾಯಬಾಗ: ಪಟ್ಟಣದ ಸಂತುಬಾಯಿ ದೇವಸ್ಥಾನದ ಬಳಿಯ ರಾಯಬಾಗ–ಬೆಕ್ಕೇರಿ ರಸ್ತೆಯ ಮೇಲಿನ ಕಿರಿದಾದ ಸೇತುವೆಯಿಂದಾಗಿ ಮೇಲಿಂದ ಮೇಲೆ ಅಪಘಾತಗಳಾಗಿದ್ದು, ಅನೇಕರು ಸಾವಿಗೀಡಾಗಿದ್ದಾರೆ. ಹೀಗಾಗಿ, ಕೂಡಲೇ ಸೇತುವೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿ ಭಾನುವಾರ ಪಟ್ಟಣ ಪಂಚಾಯ್ತಿ ಸದಸ್ಯ ಚಂದು ಕೋರೆ ನೇತೃತ್ವದಲ್ಲಿ ರಸ್ತೆ, ಸೇತುವೆ ಮೇಲೆ ಅಡ್ಡಲಾಗಿ ಕಲ್ಲು ಬಂಡೆಗಳನ್ನು ಹಾಕಿ ರಸ್ತೆಯನ್ನು ಬಂದ್ ಮಾಡಲಾಗಿದೆ.

ಶನಿವಾರ ರಾತ್ರಿ 9.30ರ ಸುಮಾರಿಗೆ ಯಡೂರದಿಂದ ಬೆಕ್ಕೆರಿಗೆ ಹೋಗುತ್ತಿದ್ದ ಇಬ್ಬರು ಬೈಕ್ ಸವಾರರು ಸೇತುವೆ ಮೇಲಿಂದ ಬಿದ್ದು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧ ಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೊಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಈ ಸೇತುವೆಯನ್ನು ಎತ್ತರಿಸಿ ವಿಸ್ತರಣೆ ಮಾಡುವವರೆಗೂ ನಾವು ರಸ್ತೆ ತಡೆ ನಿಲ್ಲಿಸುವುದಿಲ್ಲ. ಕಾಮಗಾರಿ ಪ್ರಾರಂಭಿಸುವರೆಗೂ ನಾವು ರಸ್ತೆ ತಡೆ ನಡೆಸುತ್ತೇವೆ ಎಂದು ಚಂದು ಹೇಳಿದರು.

ಹಳ್ಳದ ಸೇತುವೆಗೆ ಸಣ್ಣ ನಿರಾವರಿ ಇಲಾಖೆಯವರು ಬಾಂದಾರ ಕಮ್ ಸೇತುವೆ ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲರು ಈ ಬಗ್ಗೆ ಸೇತುವೆ ನಿರ್ಮಾಣಕ್ಕಾಗಿ ಅಂದಾಜ ಪತ್ರಿಕೆ ತಯಾರಿಸಲು ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.ಗೋವಿಂದ ಕುಲಗುಡೆ, ಅಜ್ಜಪ್ಪ ಕುಲಗುಡೆ, ಮಹೇಶ ಕುಲಗುಡೆ, ಶಂಕರ ಮೇತ್ರಿ, ದುಂಡಪ್ಪ ಮೆತ್ರಿ, ಶಿವಲಿಂಗ ಮೇತ್ರಿ, ರತ್ನಪ್ಪ ಕುಲಗುಡೆ, ಮಹವೀರ ಬಂತೆ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.