ADVERTISEMENT

ಅಕಾಡೆಮಿ ನೇಮಕದಲ್ಲಿ ಅನಾಗರಿಕ ನಡೆ ಬೇಡ

ಸಂವಾದ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 14 ಮೇ 2017, 19:27 IST
Last Updated 14 ಮೇ 2017, 19:27 IST
ಪ್ರೊ.ಎಂ.ಎಚ್‌.ಕೃಷ್ಣಯ್ಯ ಮಾತನಾಡಿದರು. (ಎಡದಿಂದ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಎಂ.ಎಸ್‌.ಅರ್ಚನಾ, ಡಾ.ಗಿರಡ್ಡಿ ಗೋವಿಂದರಾಜ, ಕೆ.ಎಚ್‌.ಶ್ರೀನಿವಾಸ್‌, ಸಾಹಿತಿ ಡಾ.ಪ್ರಧಾನ ಗುರುದತ್‌ ಇದ್ದರು  ----ಪ್ರಜಾವಾಣಿ ಚಿತ್ರ
ಪ್ರೊ.ಎಂ.ಎಚ್‌.ಕೃಷ್ಣಯ್ಯ ಮಾತನಾಡಿದರು. (ಎಡದಿಂದ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಎಂ.ಎಸ್‌.ಅರ್ಚನಾ, ಡಾ.ಗಿರಡ್ಡಿ ಗೋವಿಂದರಾಜ, ಕೆ.ಎಚ್‌.ಶ್ರೀನಿವಾಸ್‌, ಸಾಹಿತಿ ಡಾ.ಪ್ರಧಾನ ಗುರುದತ್‌ ಇದ್ದರು ----ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸರ್ಕಾರ ಬದಲಾದ ತಕ್ಷಣ ಅಕಾಡೆಮಿಗಳ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೊಗೆದು, ಅನಾಗರಿಕವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದು ಯಾವುದೇ ಸರ್ಕಾರಕ್ಕೆ ಶೋಭೆ ತರುವುದಿಲ್ಲ’ ಎಂದು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಹರಿಹಾಯ್ದರು.

‘ಐವತ್ತು ಮೀರಿದ ರವೀಂದ್ರ ಕಲಾಕ್ಷೇತ್ರ’ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ‘ನೆನಪಿನೋಕುಳಿ– ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳ ಹಿಂದಿನ ಅಧ್ಯಕ್ಷರೊಂದಿಗೆ ಸಂವಾದ’  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಜ್ಜನ ಮುಖ್ಯಮಂತ್ರಿ ಇದ್ದರೆ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಮುಂದುವರಿಸುತ್ತಾರೆ. ಇಲ್ಲದಿದ್ದರೆ ಸರ್ಕಾರಕ್ಕೆ ಹತ್ತಿರದಲ್ಲಿರುವವರ ಸಲಹೆಯಂತೆ ಎಡ, ಬಲ ಪಂಥದ ಹಣೆಪಟ್ಟಿ ಕಟ್ಟಿ ಕಿತ್ತೊಗೆಯುತ್ತಾರೆ. ಅಕಾಡೆಮಿಗಳಿಗೆ ನೇಮಕ ವಿಷಯದಲ್ಲಿ ಅತ್ಯಂತ ಅಸಹಿಷ್ಣುತೆ ವಾತಾವರಣ ಸೃಷ್ಟಿಸುತ್ತಿರುವುದು ದುರ್ದೈವದ ಸಂಗತಿ’ ಎಂದು ವಿಷಾದಿಸಿದರು.

ADVERTISEMENT

‘ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಿಸಲು ವರ್ಷ ಸಮಯ ತೆಗೆದುಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಅಕಾಡೆಮಿಗಳು ಚಲನಶೀಲವಾಗಬೇಕಾದರೆ ತಕ್ಷಣ ಅಧ್ಯಕ್ಷರನ್ನು ನೇಮಿಸಬೇಕು. ಈಗ ಇರುವ 3 ವರ್ಷಗಳ ಅಧಿಕಾರ ಅವಧಿ ಅಕಾಡೆಮಿಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಲದು. ಅವಧಿ ವಿಸ್ತರಿಸಲು ಸರ್ಕಾರ ಆಲೋಚಿಸಬೇಕು’ ಎಂದರು.

ಸಾಹಿತ್ಯ ಅಕಾಡೆಮಿ ಮತ್ತು ಪ್ರಾಧಿಕಾರಗಳ ಹಿನ್ನೋಟ–ಮುನ್ನೋಟ ಕುರಿತು ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಎಂ.ಎಚ್‌.ಕೃಷ್ಣಯ್ಯ, ‘ಸಾಹಿತ್ಯವನ್ನು ಜನರಿಗೆ ಹೇಗೆ ಮುಟ್ಟಿಸಬೇಕೆಂದು ಅಕಾಡೆಮಿಗಳು ಯೋಚಿಸಬೇಕು’ಎಂದು  ಸಲಹೆ ನೀಡಿದರು.

ಸಂವಾದದಲ್ಲಿ ದಕ್ಷಿಣಾಮೂರ್ತಿ ಎಂಬುವವರು, ‘ಪ್ರಶಸ್ತಿಗಳ ಮೊತ್ತ ಹೆಚ್ಚಿಸುತ್ತಿರುವುದು ಎಷ್ಟು ಸರಿ?’ ಎಂಬ ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ ಕವಿ ಡಾ.ಸಿದ್ದಲಿಂಗಯ್ಯ, ‘ಪ್ರಶಸ್ತಿಗಳ ಮೊತ್ತ ಹೆಚ್ಚಿಸುತ್ತಿರುವುದು ಸೂಕ್ತವಾಗಿದೆ. ಸಾಹಿತಿಗಳನ್ನು ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರೆದು ಅವರಿಗೆ ಬಸ್‌ ಚಾರ್ಜ್‌ ನೀಡದೆಯೂ ಕಳುಹಿಸಿರುವ ಪ್ರಸಂಗಗಳಿವೆ. ಪ್ರಶಸ್ತಿಗೆ ಶ್ರೇಷ್ಠರನ್ನೇ ಆಯ್ಕೆ ಮಾಡುವಾಗ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು’ ಎಂದರು.

‘ಸೃಜನಶೀಲತೆ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆ’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿದ ಪ್ರೊ.ಕೆ.ಇ.ರಾಧಾಕೃಷ್ಣ , ‘ಸೃಜನಶೀಲ ಸಾಹಿತ್ಯದಲ್ಲಿ ಎಡ ಮತ್ತು ಬಲ ಪಂಥಗಳಿಲ್ಲ. ಪ್ರಭುತ್ವದ ಹತ್ತಿರಕ್ಕೆ ಹೋಗಿ ಆಡಳಿತ ನಡೆಸುವವರನ್ನು ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುವವರು ಎಡ, ಬಲ ಪಂಥದವರಲ್ಲ. ಅವರು ಸ್ವಾರ್ಥ ಪಂಥದವರು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.