ADVERTISEMENT

ಅಧಿಕಾರಯುಕ್ತ ಸಮಿತಿ ರದ್ದುಗೊಳಿಸಲು ಸಿದ್ಧತೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ನಿಯಮ ಉಲ್ಲಂಘಿಸಿ ಮಂಜೂರಾತಿ

​ಪ್ರಜಾವಾಣಿ ವಾರ್ತೆ
Published 29 ಮೇ 2016, 20:14 IST
Last Updated 29 ಮೇ 2016, 20:14 IST

ಬೆಂಗಳೂರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಈ ಕುರಿತ ಪರಿಷ್ಕೃತ ಅಂದಾಜು ಪಟ್ಟಿಗಳಿಗೆ  ಆಡಳಿತಾತ್ಮಕ ಅನುಮೋದನೆ ನೀಡಲು ರಚಿಸಿದ್ದ ರಾಜ್ಯಮಟ್ಟದ ಅಧಿಕಾರಯುಕ್ತ ಸಮಿತಿಯನ್ನು (ಎಸ್‌ಎಲ್‌ಇಸಿ) ರದ್ದುಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಿದ್ಧತೆ ನಡೆಸಿದೆ.

ಎಸ್‌ಎಲ್‌ಇಸಿಯನ್ನು ರದ್ದುಗೊಳಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ  ಮಂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ  ಎಚ್‌.ಕೆ.ಪಾಟೀಲ ಅವರು ಶನಿವಾರ ಆದೇಶಿಸಿದ್ದಾರೆ.  ಮುಂದಿನ ಆದೇಶದವರೆಗೆ ಸಮಿತಿ ಸಭೆ ನಡೆಸುವಂತಿಲ್ಲ ಎಂದೂ ಸಚಿವರು ಸೂಚನೆ ನೀಡಿದ್ದಾರೆ.

ರಾಜ್ಯಮಟ್ಟದ ಯೋಜನಾ ಮಂಜೂರಾತಿ ಸಮಿತಿ ಹಾಗೂ ಎಸ್‌ಎಲ್‌ಇಸಿ ನಿರ್ಣಯ ಕೈಗೊಂಡಿರುವ  ಎಲ್ಲ ಕಡತಗಳನ್ನು ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಬೇಕು. ಹಾಗೂ ಈ ಎಲ್ಲ ಕಡತಗಳನ್ನು ನೋಡಲ್‌ ಅಧಿಕಾರಿ ಉಸ್ತುವಾರಿಯಲ್ಲಿ ಸಂರಕ್ಷಿಸಬೇಕು ಎಂದೂ ಸಚಿವರು ಹೇಳಿದ್ದಾರೆ.

ಸಮಿತಿ ರದ್ದುಪಡಿಸಲು ಕಾರಣ: 2013ರ ಫೆಬ್ರುವರಿಯಲ್ಲಿ ಸಚಿವ ಸಂಪುಟ ನಿರ್ಣಯದಂತೆ ಈ ಸಮಿತಿ ರಚಿಸಲಾಗಿತ್ತು. ಆದರೆ, ರಚನೆ ಆದೇಶಕ್ಕೆ  ರಾಜ್ಯಪಾಲರ ಅಂಕಿತ ಬಿದ್ದಿದ್ದು 2014 ಡಿಸೆಂಬರ್‌ 17ರಂದು.  ಅಲ್ಲಿಯವರೆಗೆ ಈ ಸಮಿತಿಗೆ ಕಾನೂನು ಪ್ರಕಾರ ಅಸ್ತಿತ್ವವೇ ಇರಲಿಲ್ಲ. ಆದರೂ ಈ ಅವಧಿಯಲ್ಲಿ ಏಳು ಸಭೆಗಳನ್ನು ನಡೆಸಲಾಗಿದೆ.

ಈ ಸಭೆಗಳ ನಿರ್ಣಯ ಸಿಂಧುವೇ ಎಂಬ ಬಗ್ಗೆ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯುವಂತೆ ಸಚಿವರು ಸೂಚಿಸಿದ್ದಾರೆ.

 ಕೋರಂ ಇಲ್ಲದೇ ನಿರ್ಣಯ: ಎಸ್‌ಎಲ್ಇಸಿಗೆ ಟೆಂಡರ್‌ ಅನುಮೋದನೆ ನೀಡುವ ಅಧಿಕಾರ ಇಲ್ಲ. ಆಡಳಿತಾತ್ಮಕ ಅನುಮೋದನೆಯನ್ನು ಕೇವಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸೀಮಿತವಾಗಿ ನೀಡಬಹುದು ಎಂದು ಸ್ಪಷ್ಟಪಡಿಸಲಾಗಿತ್ತು.

ಅಧ್ಯಕ್ಷರು ಹಾಗೂ ಐವರು ಸದಸ್ಯರ ಪೈಕಿ ನಾಲ್ವರು ಹಾಜರಿದ್ದರೆ ಮಾತ್ರ ನಿರ್ಣಯ ಕೈಗೊಳ್ಳಬಹುದು. ಆದರೆ ಕೋರಂ ಇಲ್ಲದಿದ್ದರೂ ಸಮಿತಿ ನಿರ್ಣಯ ಕೈಗೊಂಡಿದೆ.  ಕೋರಂ ಇಲ್ಲದೆಯೇ ಸಮಿತಿ ಏಳು ಸಭೆಗಳನ್ನು ನಡೆಸಿದೆ. ಈ ಸಭೆಗಳಲ್ಲಿ ಒಟ್ಟು  110 ಯೋಜನೆಗಳಿಗೆ ಮಂಜೂರಾತಿ ನೀಡಿದೆ.

ಅಧಿಕಾರ ಮೀರಿ ಮಂಜೂರಾತಿ: ಸಮಿತಿಯು ವ್ಯಾಪ್ತಿ ಮೀರಿ, ಸಚಿವ ಸಂಪುಟದ ನಿರ್ಣಯಗಳನ್ನು ಉಲ್ಲಂಘಿಸಿ ಯೋಜನೆಗಳಿಗೆ ಮಂಜೂರಾತಿ ನೀಡಿದೆ.ಆಡಳಿತಾತ್ಮಕ ಮಂಜೂರಾತಿ ಜತೆಗೆ ಟೆಂಡರ್‌ಗಳಿಗೆ, ಪರಿಷ್ಕೃತ ಅಂದಾಜುಗಳಿಗೂ ಅನುಮೋದನೆ ನೀಡಿದೆ.  ಅನೇಕ ಯೋಜನೆಗಳಿಗೆ ಘಟನೋತ್ತರ ಮಂಜೂರಾತಿ ನೀಡಿದ್ದು,  ಅವುಗಳಿಗೂ ಹಣ ಪಾವತಿ ಮಾಡಲಾಗಿದೆ.

ಕೆಟಿಟಿಪಿ ಕಾಯ್ದೆ ಉಲ್ಲಂಘನೆ: ಟೆಂಡರ್‌ ಪ್ರಕ್ರಿಯೆ ಸಮರ್ಪಕವಾಗಿರದಿದ್ದರೂ ಪಾವತಿಗೆ ಸಮಿತಿ ಅನುಮೋದನೆ ನೀಡಿದೆ.ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಯನ್ನೂ  ಉಲ್ಲಂಘಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಇಲಾಖೆಯಿಂದ ಆದೇಶ ಹೊರಡಿಸದೆಯೇ ಟೆಂಡರ್‌ ಆಹ್ವಾನಿಸಲಾಗಿದೆ. 

ಪಾವತಿಯನ್ನೂ ಮಾಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಲೋಪಗಳ ಕುರಿತ ಎಚ್ಚರಿಕೆಗಳನ್ನು ಹಾಗೂ ಸಲಹೆಗಳನ್ನು ಕಡೆಗಣಿಸಿ ಸಮಿತಿ ನಿರ್ಣಯ ಕೈಗೊಂಡಿದೆ. ಯೋಜನೆಯ ದೊಡ್ಡ ಮೊತ್ತದ ಹಣವನ್ನು ಸರ್ಕಾರದ ಗಮನಕ್ಕೆ ತಾರದೆಯೇ ಅಕ್ರಮವಾಗಿ ಕೆಲವು ಬ್ಯಾಂಕ್‌ ಖಾತೆಗಳಲ್ಲಿ  ಠೇವಣಿ ಇಡಲಾಗಿದೆ.

ಅಧಿಕಾರಿಗಳ ಸಹಿಯೇ ಇಲ್ಲ: ಕೆಲವು ಟೆಂಡರ್‌ ಪರಿಶೀಲನಾ ಸಮಿತಿ ಸಭೆಗಳಲ್ಲಿ ಭಾಗವಹಿಸಿದ್ದರು ಎನ್ನಲಾದ ಅಧಿಕಾರಿಗಳ ಸಹಿಗಳೇ ಇಲ್ಲ. ಸರ್ಕಾರಿ ಆದೇಶ ಇಲ್ಲದೆಯೇ 35  ಯೋಜನೆಗಳಿಗೆ ಗುತ್ತಿಗೆ ನೀಡಿರುವುದು ಹಾಗೂ ಬ್ಯಾಂಕ್‌ ಖಾತೆಗಳಲ್ಲಿ ಯೋಜನೆಯ ಹಣವನ್ನು  ಠೇವಣಿ ಇಟ್ಟಿರುವುದು ಅಕ್ರಮ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.

ನೀತಿ ಸಂಹಿತೆ ನಡುವೆ ಮಂಜೂರಾತಿ
2013 ಮಾರ್ಚ್‌ 15ರಿಂದ ಏಪ್ರಿಲ್ 29ರ ನಡುವೆ ಸಮಿತಿ ಎರಡು ಸಭೆಗಳನ್ನು ನಡೆಸಿತ್ತು. ಈ ಸಭೆಗಳಲ್ಲಿ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆಯ ನಡುವೆಯೇ ಘಟನೋತ್ತರ ಮಂಜೂರಾತಿ ಸೇರಿ ಒಟ್ಟು ₹ 474.15 ಕೋಟಿ ಮೊತ್ತದ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ.  ಇಂತಹ ಅಕ್ರಮಗಳ ಕುರಿತು ಸಚಿವರು ತನಿಖೆಗೆ ಆದೇಶಿಸಿದ್ದಾರೆ.

ಏನಿದು ಅಧಿಕಾರಯುಕ್ತ ಸಮಿತಿ?
ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ 2013 ಫೆಬ್ರುವರಿ 25ರಂದು ನಡೆದ ಸಂಪುಟ ಸಭೆಯಲ್ಲಿ  ಎಸ್‌ಎಲ್‌್ಇಸಿ ರಚಿಸುವ ನಿರ್ಣಯ ಕೈಗೊಳ್ಳಲಾಗಿತ್ತು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ಈ ಸಮಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಯೋಜನಾ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಣಕಾಸು ಇಲಾಖೆಯ ಕಾರ್ಯದರ್ಶಿಗಳು ಇದರ ಸದಸ್ಯರಾಗಿರುತ್ತಾರೆ.

ರಾಜ್ಯ ನೀರು ಮತ್ತು ನೈರ್ಮಲ್ಯ ಅಭಿಯಾನದ ನಿರ್ದೇಶಕರು ಅಥವಾ ಆಯುಕ್ತರು ಈ ಸಮಿತಿಯ ಸಂಚಾಲಕರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟದ ಅಧಿಕಾರವನ್ನು ಈ ಸಮಿತಿಗೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.