ADVERTISEMENT

ಅರಣ್ಯ ಗಡಿಯಲ್ಲಿ ತ್ಯಾಜ್ಯ ಘಟಕ

ಕಾಮಗಾರಿ ನಿಲ್ಲಿಸಲು ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2014, 19:30 IST
Last Updated 20 ಆಗಸ್ಟ್ 2014, 19:30 IST

ಬೆಂಗಳೂರು: ಬಿ.ಎಂ.ಕಾವಲ್ ಗ್ರಾಮದ ಅರಣ್ಯ ಪ್ರದೇಶದ ಗಡಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಕಾಮಗಾರಿ ನಡೆದ ಸ್ಥಳದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ಅರಣ್ಯ ಪ್ರದೇಶದ ಗಡಿಯಿಂದ ಕೇವಲ 5 ಮೀಟರ್‌ ಅಂತರದಲ್ಲಿ ಉದ್ದೇಶಿತ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಇದರಿಂದ ಅರಣ್ಯದ ಪರಿಸರ ಹಾಗೂ ಜಿಂಕೆ–ನವಿಲುಗಳ ಆವಾಸಸ್ಥಾನ ಗಂಡಾಂತರ ಎದುರಿಸಲಿದೆ ಎಂದು ಪ್ರತಿಭಟನಾಕಾರರು ದೂರಿದರು.

‘ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಾದರೆ ವಾಹನಗಳ ಓಡಾಟ ಹೆಚ್ಚುವುದಲ್ಲದೆ, ದುರ್ವಾಸನೆಯೂ ಹರಡಲಿದೆ. ಅದರ ಪ್ರತಿಕೂಲ ಪರಿಣಾಮ ಜೀವವೈವಿಧ್ಯ ಮೇಲೆ ಆಗಲಿದೆ. ಇಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡುವುದು ಬೇಡ’ ಎಂದು ಪಟ್ಟು ಹಿಡಿದರು.

‘ಅರಣ್ಯ ಪ್ರದೇಶದ ಸಮೀಪದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ವನ್ಯಜೀವಿ ಹಾಗೂ ಪರಿಸರದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ನಿರಾಕ್ಷೇಪಣೆ ಪತ್ರ ಪಡೆಯಬೇಕು. ಅಲ್ಲಿಯವರೆಗೆ ಘಟಕ ನಿರ್ಮಾಣಕ್ಕೆ ಸಂಬಂಧಿಸಿದ ಯಾವ ಚಟುವಟಿಕೆಗಳನ್ನೂ ನಡೆಸಬಾರದು’ ಎಂದು ಅರಣ್ಯ ಇಲಾಖೆಯು ಈ ಹಿಂದೆಯೇ ಬಿಬಿಎಂಪಿಗೆ ಸೂಚನೆ ನೀಡಿದೆ.

ನಿರಾಪೇಕ್ಷಣೆ ಪತ್ರವನ್ನು ತರುವವರೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬಾರದು ಎಂದು ಕಗ್ಗಲಿಪುರ ವಲಯ ಅರಣ್ಯಾಧಿಕಾರಿಗಳಿಗೆ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶವನ್ನೂ ನೀಡಿದ್ದಾರೆ. ಹೀಗಾಗಿ ಬುಧವಾರ ಘಟಕ ನಿರ್ಮಾಣ ಕಾಮಗಾರಿ ನಡೆದಿರುವ ಸ್ಥಳಕ್ಕೆ ಬಂದ ಕಗ್ಗಲಿಪುರ ವಲಯ ಅರಣ್ಯಾಧಿಕಾರಿಗಳು ಕೆಲಸ ನಿಲ್ಲಿಸುವಂತೆ ಸೂಚಿಸಿದರು. ಆದರೆ, ಬಿಬಿಎಂಪಿ ಅಧಿಕಾರಿಗಳು ಕಿವಿಗೊಡಲಿಲ್ಲ.

ಕೆಲಸ ಸ್ಥಗಿತಗೊಳಿಸಲು ಅರಣ್ಯ ಇಲಾಖೆ ನೀಡಿರುವ ಸೂಚನೆ ಹಾಗೂ ಘಟಕ ಸ್ಥಾಪನೆಗೆ ಸ್ಥಳೀಯರ ವಿರೋಧ ಇದ್ದರೂ ಬಿಬಿಎಂಪಿ ಕಾಮಗಾರಿಯನ್ನು ಮುಂದುವರಿಸಿರುವುದು ಪ್ರತಿಭಟನಾಕಾರರನ್ನು ಕೆರಳಿಸಿದ್ದು, ಕಾಮಗಾರಿ ನಿಲ್ಲಿಸುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದರು.

ಬಿ.ಎಂ. ಕಾವಲ್‌ ಪಕ್ಕದ ಲಿಂಗಧೀರನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಸಿ.ಎ ನಿವೇಶನದಲ್ಲೇ ಬಿಬಿಎಂಪಿ ತ್ಯಾಜ್ಯ ಘಟಕ ನಿರ್ಮಿಸುತ್ತಿದೆ. ಡಿಸೆಂಬರ್‌ ವೇಳೆಗೆ ಹೊಸ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲೇಬೇಕಾದ ಒತ್ತಡದಲ್ಲಿ ಬಿಬಿಎಂಪಿ ಇದೆ. ಜಯಪ್ರಕಾಶ ನಾರಾಯಣ ವಿಚಾರ ವೇದಿಕೆ ‌ಅಧ್ಯಕ್ಷ ಬಿ.ಎಂ. ಶಿವಕುಮಾರ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.