ADVERTISEMENT

ಅರ್ಜಿ ಸಲ್ಲಿಸಿದ ತಕ್ಷಣ ಪಡಿತರ ಚೀಟಿ

ಅಧಿಕಾರಿಗಳ ಜೊತೆಗಿನ ಮೊದಲ ಸಭೆಯಲ್ಲಿ ಆಹಾರ ಸಚಿವ ಯು.ಟಿ. ಖಾದರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 20:08 IST
Last Updated 26 ಜೂನ್ 2016, 20:08 IST

ಬೆಂಗಳೂರು: ಅರ್ಜಿ ಸಲ್ಲಿಸಿದ ತಕ್ಷಣ  ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿ ನೀಡುವ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌  ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖಾತೆ ಬದಲಾದ ಬಳಿಕ ಪೂರ್ವ ನಿಗದಿಯಂತೆ ಮೆಕ್ಕಾ ಯಾತ್ರೆ ತೆರಳಿದ್ದ ಖಾದರ್‌ ಅವರು ಭಾನುವಾರ ಬೆಳಿಗ್ಗೆ ನಗರಕ್ಕೆ ವಾಪಸ್‌ ಆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಆಹಾರ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿಯಾಗಿ ಚರ್ಚಿಸಿದರು. ದಿನೇಶ್‌ ಅವರಿಂದ ಆಹಾರ ಇಲಾಖೆಯ ಬಗ್ಗೆ ಮಾಹಿತಿ ಪಡೆದ ನಂತರ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಇಲಾಖಾ ಸುಧಾರಣೆಗಳ ಬಗ್ಗೆ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ತಕ್ಷಣ ಪಡಿತರ ಚೀಟಿ: ಅರ್ಜಿಯ ಜೊತೆಯಲ್ಲಿ ಆಧಾರ್‌ ಕಾರ್ಡ್‌, ವಿಳಾಸ ದಾಖಲೆ, ಬಿಪಿಎಲ್‌ ಕುಟುಂಬಕ್ಕೆ ಸೇರಿದ್ದೇವೆಂಬ ಸ್ವಯಂ ಘೋಷಣಾ ಪತ್ರ  ಹಾಗೂ ಕುಟುಂಬದವರ ಭಾವಚಿತ್ರಗಳನ್ನು ನೀಡಿದಲ್ಲಿ ಕೂಡಲೇ ಪಡಿತರ ಚೀಟಿ ನೀಡಿ, ಆಯಾ ತಿಂಗಳಿನಿಂದಲೇ ಪಡಿತರ ಪದಾರ್ಥಗಳನ್ನು ವಿತರಿಸಬೇಕು.

10ರಿಂದ 30 ದಿನದೊಳಗೆ ಅರ್ಜಿದಾರರು ನೀಡಿದ ದಾಖಲೆ ಪರಿಶೀಲಿಸಿ, ಮಾಹಿತಿ ಸತ್ಯವಾಗಿದ್ದಲ್ಲಿ ಜಿಲ್ಲಾಧಿಕಾರಿಗಳಿಂದ ದೃಢೀಕರಣ ಪಡೆದು ಪಡಿತರ ಚೀಟಿ ಮುದುವರಿಸಬೇಕು. ತಪ್ಪು ಮಾಹಿತಿ ನೀಡಿದ್ದು ಪತ್ತೆಯಾದಲ್ಲಿ ಪಡಿತರ ಚೀಟಿ ರದ್ದುಪಡಿಸಿ, ಅಂತಹ ಅರ್ಜಿದಾರರನ್ನು  ಕಪ್ಪುಪಟ್ಟಿಗೆ ಸೇರಿಸಿ ಶಾಶ್ವತವಾಗಿ ಪಡಿತರ ಚೀಟಿ ಪಡೆಯಲು ಅನರ್ಹಗೊಳಿಸುವ ವ್ಯವಸ್ಥೆ ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಎಂದು ತಿಳಿದುಬಂದಿದೆ.

ಸೋಮವಾರದಿಂದಲೇ ನೂತನ ವ್ಯವಸ್ಥೆ ಜಾರಿಮಾಡಿ ಎಂದು ಸಚಿವ ಖಾದರ್‌ ಅವರು ಆದೇಶಿಸಿದಾಗ, ಪ್ರತಿಕ್ರಿಯಿಸಿದ ಆಹಾರ ಇಲಾಖೆ ಕಾರ್ಯದರ್ಶಿ ಹರ್ಷಗುಪ್ತ ಅವರು, ಎಲ್ಲಾ ಜಿಲ್ಲೆಗಳಿಗೆ ಸುತ್ತೋಲೆ ಕಳಿಸಿ ಅನುಷ್ಠಾನ ಮಾಡಬೇಕಾಗಿರುವುದರಿಂದ ನಾಲ್ಕೈದು ದಿನ ಸಮಯ ಕೊಡಿ. ಸಮಾರಂಭ ಏರ್ಪಡಿಸಿ ಹೊಸ  ವ್ಯವಸ್ಥೆಗೆ ಚಾಲನೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು ಎಂದು ಗೊತ್ತಾಗಿದೆ.

ಡೌನ್‌ಲೋಡ್‌ ವ್ಯವಸ್ಥೆ: ಎಪಿಎಲ್‌ ಪಡಿತರ ಚೀಟಿದಾರರಿಗೆ ಯಾವುದೇ ಆಹಾರ ವಸ್ತುಗಳನ್ನು ಉಚಿತವಾಗಿ ವಿತರಿಸದೇ ಇರುವುದರಿಂದ ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಆಧಾರ್‌ ಕಾರ್ಡ್‌, ವಿಳಾಸ ದಾಖಲೆ, ಭಾವಚಿತ್ರ, ಸ್ವಯಂ ಘೋಷಣಾ ಪತ್ರಗಳನ್ನು ಅರ್ಜಿದಾರರೇ ಅಪ್‌ಲೋಡ್‌ ಮಾಡಿ, ತಕ್ಷಣವೇ ಪಡಿತರ ಚೀಟಿಯನ್ನು  ಡೌನ್‌ಲೋಡ್‌ ಮಾಡಿ, ಮುದ್ರಿಸಿಕೊಳ್ಳುವ ವ್ಯವಸ್ಥೆ ಜಾರಿ ಮಾಡಲು ಇಲಾಖೆ ಸಿದ್ಧವಾಗಿದೆ.

ದಾಖಲೆ ಪರಿಶೀಲನೆ ಬಳಿಕ ಅರ್ಜಿದಾರರು ನೀಡಿದ ಮಾಹಿತಿ ಸತ್ಯವಾಗಿದ್ದಲ್ಲಿ, ಎಪಿಎಲ್‌ ಪಡಿತರ ಚೀಟಿಯನ್ನು ಅಧಿಕೃತ ಎಂದು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುತ್ತದೆ. ಅದನ್ನು ಪಡಿತರ ಚೀಟಿದಾರರು ಡೌನ್‌ಲೋಡ್‌ ಮಾಡಿ, ಮುದ್ರಿಸಿಕೊಂಡು ಬಳಸಬಹುದು. ಬುಧವಾರದ ವೇಳೆಗೆ ಆನ್‌ಲೈನ್‌ ಮೂಲಕ ಎಪಿಎಲ್‌ ಪಡಿತರ ಚೀಟಿ ಪಡೆಯುವ ತಂತ್ರಾಂಶವನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುವುದು ಎಂದು ಇಲಾಖೆ ಕಾರ್ಯದರ್ಶಿ ಹರ್ಷಗುಪ್ತ ಅವರು ಸಚಿವರ ಗಮನಕ್ಕೆ ತಂದರು. 

ಎಪಿಎಲ್‌ ಪಡಿತರ ಚೀಟಿ ತಕ್ಷಣವೇ ಲಭ್ಯವಾಗುವಂತೆ ಹೊಸ ವ್ಯವಸ್ಥೆ ಜಾರಿಗೊಳಿಸಿ, ಪಡಿತರ ಚೀಟಿ ಸಿಗುತ್ತಿಲ್ಲವೆಂಬ ದೂರು ಕೇಳಿಬರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಖಾದರ್‌ ಸೂಚಿಸಿದರು ಎಂದು ತಿಳಿದುಬಂದಿದೆ. ಸಭೆಯಲ್ಲಿ ಆಹಾರ ಇಲಾಖೆ ಆಯುಕ್ತ ಅನ್ಬುಕುಮಾರ್‌, ವ್ಯವಸ್ಥಾಪಕ ನಿರ್ದೇಶಕಿ ರೋಹಿಣಿ ಸಿಂಧೂರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.