ADVERTISEMENT

ಇಂದಿನ ಪುಸ್ತಕಗಳಲ್ಲಿ ಅಸಂಖ್ಯಾತ ತಪ್ಪು

ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅ.ರಾ.ಮಿತ್ರ ವಿಷಾದ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2014, 20:09 IST
Last Updated 17 ಆಗಸ್ಟ್ 2014, 20:09 IST
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಅ.ರಾ.ಮಿತ್ರ ಅವರು ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಪುಸ್ತಕದ ಪ್ರತಿಯನ್ನು ಡಾ.ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ನೀಡಿದರು. ಡಾ.ಪಿ.ವಿ.ನಾರಾಯಣ, ಪ್ರೊ.ಕೆ.ಎಂ.ಸೀತಾರಾಮಯ್ಯ, ಪ್ರೊ.ಎಂ.ಎಚ್‌್.ಕೃಷ್ಣಯ್ಯ ಹಾಗೂ ಪ್ರೊ.ಕೆ.ಎಸ್‌.ಮಧುಸೂದನ ಅವರು ಚಿತ್ರದಲ್ಲಿದ್ದಾರೆ
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಅ.ರಾ.ಮಿತ್ರ ಅವರು ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಪುಸ್ತಕದ ಪ್ರತಿಯನ್ನು ಡಾ.ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ನೀಡಿದರು. ಡಾ.ಪಿ.ವಿ.ನಾರಾಯಣ, ಪ್ರೊ.ಕೆ.ಎಂ.ಸೀತಾರಾಮಯ್ಯ, ಪ್ರೊ.ಎಂ.ಎಚ್‌್.ಕೃಷ್ಣಯ್ಯ ಹಾಗೂ ಪ್ರೊ.ಕೆ.ಎಸ್‌.ಮಧುಸೂದನ ಅವರು ಚಿತ್ರದಲ್ಲಿದ್ದಾರೆ   

ಬೆಂಗಳೂರು: ‘ತಮ್ಮ ಪುಸ್ತಕದಲ್ಲಿ ಪ್ರಶಂಸೆ ಎಂಬ ಪದ ಪ್ರಶಂಶೆ ಎಂದು ತಪ್ಪಾಗಿ ಪ್ರಕಟವಾಗಿದ್ದಕ್ಕೆ ತೀ.ನಂ­.­ಶ್ರೀಕಂಠ­ಯ್ಯನವರು ಮೂರು ದಿನ ಊಟ ಬಿಟ್ಟಿದ್ದರು. ಆದರೆ, ಇತ್ತೀಚೆಗೆ ಬಿಡು­ಗಡೆಯಾಗುತ್ತಿರುವ ಪುಸ್ತಕಗ­ಳಲ್ಲಿ ಅಸಂಖ್ಯಾತ ತಪ್ಪುಗಳಿ­ರುತ್ತವೆ. ಗರ್ಜನೆ ಎಂದು ಬರೆದು ಪುಸ್ತಕದ ಪ್ರತಿ­ಯೊಂದನ್ನು ಮುದ್ರಣಕ್ಕೆ ಕೊಟ್ಟರೆ ಘರ್ಜನೆ ಎಂದು ತಪ್ಪಾಗಿ ತಿದ್ದಿಬಿಟ್ಟರು. ಕೊನೆಗೆ ಅವರೊಂದಿಗೆ ವಾದಕ್ಕಿಳಿಯ­ಬೇಕಾಯಿತು. ಇದೊಂದು ವಿಷಾದಕರ ಬೆಳವಣಿಗೆ’

–ಹೀಗೆಂದು ವಿಷಾದ ವ್ಯಕ್ತಪಡಿ­ಸಿದ್ದು ಸಾಹಿತಿ ಪ್ರೊ ಅ.ರಾ.ಮಿತ್ರ. ಅವರು ನಗರದ ಇಂಡಿಯನ್‌ ಇನ್‌­ಸ್ಟಿ­ಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಭಾನು­ವಾರ ‘ಅಂಕಿತ ಪುಸ್ತಕ’ ಆಯೋಜಿಸಿದ್ದ ಕಾರ್ಯಕ್ರಮ­ದಲ್ಲಿ ಕೃತಿಗಳ ಲೋಕಾ­ರ್ಪಣೆ ಮಾಡಿ ಮಾತನಾಡಿದರು.

ಕವಿ ಡಾ.ಎನ್‌.ಎಸ್‌. ಲಕ್ಷ್ಮೀನಾರಾ­ಯಣ ಭಟ್ಟ ಅವರ ‘ಕನ್ನಡ ಸಾಹಿತ್ಯ ಚರಿತ್ರೆ’ (ಪ್ರಾಚೀನ–ಆಧುನಿಕ), ಪ್ರೊ. ಕೆ.ಎಂ. ಸೀತಾರಾಮಯ್ಯ ಅವರ ‘ಡಿವೈನ್‌ ಕಾಮಿಡಿ–2 ಪರ್ಗೆಟರಿ’ (ಪ್ರಾಯಶ್ಚಿತ್ತ ಲೋಕ) ಹಾಗೂ ಡಾ.ಪಿ.­ವಿ­.ನಾರಾಯಣ ಅವರು ಸಂಪಾ­­ದಿ­ಸಿರುವ ‘ಕುಮಾರವ್ಯಾಸ ಭಾರತ ಎಂಬ ಕೃಷ್ಣ ಕಥೆ’ ಲೋಕಾ­ರ್ಪಣೆಯಾದ ಪುಸ್ತಕಗಳು.

‘ಈಗ ಓದುಗರ ಸಂಖ್ಯೆ ಪಾತಾಳ­ಕ್ಕಿಳಿದಿದೆ. ಇಂಥ ಸಮಯದಲ್ಲೂ ಆಸಕ್ತಿ ವಹಿಸಿ, ಶ್ರಮಪಟ್ಟು ಲಕ್ಷ್ಮೀನಾರಾಯಣ ಭಟ್ಟ ಅವರು ಅಮೂಲ್ಯ ಗ್ರಂಥವನ್ನು ಕನ್ನಡ ಸಾರಸ್ವತ ಲೋಕಕ್ಕೆ ಒದಗಿಸಿ­ಕೊಟ್ಟಿದ್ದಾರೆ.  ಇಂಥದೊಂದು ಸಾಹಿತ್ಯ ಚರಿತ್ರೆ ಯಾವತ್ತೋ ಬರಬೇಕಿತ್ತು’ ಎಂದು ಅಭಿ­ಪ್ರಾಯಪಟ್ಟರು.

‘ಡಿವೈನ್‌ ಕಾಮಿಡಿ–2 ಪರ್ಗೆಟರಿ’ ಕೃತಿ ಬಗ್ಗೆ ಮಾತನಾಡಿದ ಹಿರಿಯ ವಿದ್ವಾಂಸ ಪ್ರೊ.ಎಂ.ಎಚ್‌.ಕೃಷ್ಣಯ್ಯ ಅವರು, ‘ಆರಂಭದಲ್ಲಿ  ಪ್ರೇಮ ಕಾದಂ­ಬ­ರಿ­ಗಳನ್ನು ಬರೆಯುತ್ತಿದ್ದ ಸೀತಾ­ರಾಮಯ್ಯನವರು ಒಮ್ಮೆಲೇ ಗ್ರೀಕ್‌ ಸಾಹಿತ್ಯದತ್ತ ಒಲವು ತೋರಿದ­ವರು. ಅವರ ಈ ಅನುವಾದ
ಸ್ವತಂತ್ರ ಕೃತಿ­ಯೇನೋ ಎಂಬಂತೆ ಓದಿಸಿಕೊ­ಳ್ಳು­ತ್ತದೆ. ಗದ್ಯವನ್ನು ಕಾವ್ಯಮಯವಾಗಿ ಬರೆದಿದ್ದಾರೆ’ ಎಂದು ಬಣ್ಣಿಸಿದರು.

ವಿಮರ್ಶಕ ಪ್ರೊ.ಕೆ.ಎಸ್‌. ಮಧು­ಸೂದನ ಅವರು ‘ಕನ್ನಡ ಸಾಹಿತ್ಯ ಚರಿತ್ರೆ’ ಕೃತಿ ಬಗ್ಗೆ ಮಾತನಾಡಿದರು. ‘ಉನ್ನತ ಅಧ್ಯಯನ ನಡೆಸುವವರಿಗೆ ಹಾಗೂ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡುವವರಿಗೆ ಇದು ಅತ್ಯುತ್ತಮ ಗ್ರಂಥ. ಕನ್ನಡ ಸಾಹಿತ್ಯ ಪರಂಪರೆಯ ವಿಶ್ವರೂಪ ದರ್ಶನ ಸಿಗುತ್ತದೆ’ ಎಂದು ವ್ಯಾಖ್ಯಾನಿಸಿದರು.

‘ಕುಮಾರವ್ಯಾಸ ಭಾರತ ಎಂಬ ಕೃಷ್ಣ ಕಥೆ’ ಕೃತಿ ಕುರಿತು, ‘ಕುಮಾರವ್ಯಾಸ ಭಾರತದ ಬಗ್ಗೆ 157 ಸಂಪುಟಗಳು ಬಂದಿವೆ. ಅದರಲ್ಲಿ ಪಿ.ವಿ.ನಾರಾಯಣ ಅವರು ಸಂಪಾದಿಸಿರುವ ಕೃತಿಯೂ ಒಂದು. ಕುಮಾರವ್ಯಾಸನನ್ನು ತಮ್ಮ ವಿಮರ್ಶೆಗೆ ಒಳಪಡಿಸಿದ್ದಾರೆ. ಆತನ ಇತಿಮಿತಿ ಹಾಗೂ ನಿಲುವುಗಳನ್ನು ಪರಿ­ಚಯಿಸಿದ್ದಾರೆ’ ಎಂದು ವಿಶ್ಲೇಷಿಸಿದರು.

ತಮ್ಮ ಕೃತಿ ಬಗ್ಗೆ ಮಾತನಾಡಿದ ಸೀತಾರಾಮಯ್ಯ ಅವರು, ‘ಪ್ರಾಯಶ್ಚಿತ್ತ ಲೋಕವೆಂಬುದು ಕ್ರಿಶ್ಚಿಯನ್ನರ ಕಲ್ಪನೆ. ಪಾಪ ನಿವೇದನೆ ಮಾಡಿಕೊಂಡು ದೇವರ ಹೆಸರು ಹೇಳಿ ಸಾವನ್ನಪ್ಪಿದರೆ ಪ್ರಾಯಶ್ಚಿತ್ತ ಲೋಕಕ್ಕೆ ಹೋಗುತ್ತಾರೆ ಎಂಬುದು ಪ್ರತೀತಿ. ಕವಿ ಡಾಂಟೆ ತನ್ನ ಡಿವೈನ್‌ ಕಾಮಿಡಿಯಲ್ಲಿ ಸ್ವರ್ಗಲೋಕ, ನರಕ ಲೋಕ ಹಾಗೂ ಪ್ರಾಯಶ್ಚಿತ್ತ ಲೋಕದಪರಿಚಯ ಮಾಡಿಸಿದ್ದಾನೆ’ ಎಂದರು.

ಲಕ್ಷ್ಮೀನಾರಾಯಣ ಭಟ್ಟ ಅವರು, ‘ಈಗಿನ ಮಕ್ಕಳಿಗೆ ಕನ್ನಡ ಬಗ್ಗೆ ಅಭಿಮಾನವೇ ಇಲ್ಲ. ಓದುವುದು ಬದಿಗಿರಲಿ, ಮಾತನಾಡಲೂ ಬರುವುದಿಲ್ಲ. ಇನ್ನೊಂದು ವಿಚಿತ್ರವೆಂದರೆ ತಮಿಳರೊಂದಿಗೆ ಮಾತನಾಡಲು ತಮಿಳು ಕಲಿಯುವ ಜನರಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಬಿಡುಗಡೆಯಾದ ಪುಸ್ತಕಗಳು: ‘ಕನ್ನಡ ಸಾಹಿತ್ಯ ಚರಿತ್ರೆ’ (ಪ್ರಾಚೀನ–ಆಧುನಿಕ): ಬೆಲೆ: ₨ 295, ‘ಡಿವೈನ್‌ ಕಾಮಿಡಿ–2 ಪರ್ಗೆಟರಿ’ (ಪ್ರಾಯಶ್ಚಿತ್ತ ಲೋಕ): ಬೆಲೆ: ₨ 195, ‘ಕುಮಾರವ್ಯಾಸ ಭಾರತ ಎಂಬ ಕೃಷ್ಣ ಕಥೆ’: ಬೆಲೆ: ₨ 795

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.