ADVERTISEMENT

ಇಎಸ್‌ಐ ಆಸ್ಪತ್ರೆ ಎದುರು ಪ್ರತಿಭಟನೆ

ಡಯಾಲಿಸಿಸ್‌ ಸೌಲಭ್ಯ ನಿಲ್ಲಿಸಿದ ಸರ್ಕಾರ; ಕಾರ್ಮಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 20:15 IST
Last Updated 1 ಆಗಸ್ಟ್ 2015, 20:15 IST

ಬೆಂಗಳೂರು: ಕಾರ್ಮಿಕರಿಗೆ ಇಎಸ್‌ಐ ವತಿಯಿಂದ ದೊರೆಯುತ್ತಿದ್ದ ಡಯಾಲಿಸಿಸ್‌ ಸೌಲಭ್ಯವನ್ನು ಏಕಾಏಕಿ ನಿಲ್ಲಿಸಿರುವುದನ್ನು ಖಂಡಿಸಿ, ವಿಮಾ ಕಾರ್ಮಿಕರ ಮಂಡಳಿಯ ನೋಂದಾಯಿತ ಫಲಾನುಭವಿಗಳ ಹಾಗೂ ಅವಲಂಬಿತರ ಕ್ರಿಯಾ ಸಮಿತಿ ಸದಸ್ಯರು, ರಾಜಾಜಿನಗರದಲ್ಲಿರುವ ಇಎಸ್‌ಐ ಆಸ್ಪತ್ರೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ನಾವು, ಡಯಾಲಿಸಿಸ್‌ಗಾಗಿ ಇಎಸ್‌ಐ ಆಸ್ಪತ್ರೆಯನ್ನೇ ಅವಲಂಬಿಸಿದ್ದೇವೆ. ಕಡಿಮೆ ಶುಲ್ಕದಲ್ಲಿ ದೊರೆಯುತ್ತಿದ್ದ  ಸೌಲಭ್ಯವನ್ನು ಇದ್ದಕ್ಕಿದ್ದಂತೆ ನಿಲ್ಲಿಸಿರುವುದು, ಕಾರ್ಮಿಕರ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ‘ದೇಶದಾದ್ಯಂತ ಸುಮಾರು 80 ಲಕ್ಷ ಮಂದಿ ಇಎಸ್‌ಐ ಕಾರ್ಡುಗಳನ್ನು ಹೊಂದಿದ್ದಾರೆ.

ಕನಿಷ್ಠ ಸಂಬಳಕ್ಕೆ ವಿವಿಧ ಕಾರ್ಖಾನೆಗಳಲ್ಲಿ ದುಡಿಯುವ ಇವರೆಲ್ಲರೂ, ತಮ್ಮ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಇಎಸ್‌ಐ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ’ ಎಂದರು. ‘ಡಯಾಲಿಸಿಸ್‌ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪದ ಮೇಲೆ, ಕೇಂದ್ರ ಸರ್ಕಾರ ಕಡಿಮೆ ಶುಲ್ಕದಲ್ಲಿ ದೊರೆಯುತ್ತಿದ್ದ ಡಯಾಲಿಸಿಸ್‌ ಸೌಲಭ್ಯವನ್ನು ನಿಲ್ಲಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಬಡವರ ಆರೋಗ್ಯದ ವಿಷಯದಲ್ಲೂ ಈ ರೀತಿಯ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ?’ ಎಂದು  ಪ್ರಶ್ನಿಸಿದರು.

‘ಮೂತ್ರಪಿಂಡ ತೊಂದರೆ ಇರುವವರು ಜೀವನಪರ್ಯಂತ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ, ಸರ್ಕಾರದ ಈ ಆದೇಶವು, ಕಡಿಮೆ ಶುಲ್ಕದಲ್ಲಿ ಬಡವರ ಕೈಗೆ ಎಟುಕುತ್ತಿದ್ದ ಸೌಲಭ್ಯವನ್ನೂ ಸಿಗದಂತೆ ಮಾಡಿದೆ. ಕೂಡಲೇ ಆದೇಶವನ್ನು ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ, ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.