ADVERTISEMENT

ಇಟಲಿಯ ‘ಕಟರ್ ಹೆಡ್‌’ಗೆ ಕಾದಿದೆ ‘ಗೋದಾವರಿ’

ಮೆಟ್ರೊ ಸುರಂಗ ನಿರ್ಮಾಣದ ಹಾದಿಯಲ್ಲಿ ಎಡರು– ತೊಡರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:37 IST
Last Updated 29 ಜನವರಿ 2015, 19:37 IST

ಬೆಂಗಳೂರು: ನಗರದ ಪ್ಲಾಟ್‌ಫಾರಂ ರಸ್ತೆ ಬಳಿ 60 ಅಡಿಗಳಷ್ಟು ಕೆಳಭಾಗದಲ್ಲಿ ಕಾರ್ಯಾಚರಣೆ ಸ್ಥಗಿತ­ಗೊಳಿ­ಸಿರುವ ‘ಗೋದಾವರಿ’ ಹೆಸರಿನ ಸುರಂಗ ಕೊರೆಯುವ ಯಂತ್ರದ (ಟಿಬಿಎಂ) ಹಾಳಾದ ‘ಕಟರ್‌ ಹೆಡ್‌’  ಅನ್ನು ತೆಗೆದು, ಅದಕ್ಕೆ ಬದಲಿಯಾಗಿ ಇಟಲಿಯಲ್ಲಿ ತಯಾರಾ­ಗು­ತ್ತಿರುವ ‘ಕಟರ್ ಹೆಡ್‌’ ಹಾಕಲು ಸಿದ್ಧತೆ ನಡೆದಿದೆ.

‘ಕಟರ್‌ ಹೆಡ್‌’ ಎಂದರೆ ಯಂತ್ರದ ಮುಂಬದಿ­ಯ­ಲ್ಲಿ­ರುವ ಕೊರೆಯುವ ಭಾಗ. ಅದರ ಬದಲಾವಣೆಗಾಗಿ ‘ಟಿಬಿಎಂ’ ಕೆಟ್ಟು ನಿಂತ ಸ್ಥಳದಲ್ಲಿ  ಹತ್ತು ಚದರ ಮೀಟರ್‌ ವಿಸ್ತೀರ್ಣದ ಗುಂಡಿ ತೆಗೆಯುವ ಕಾರ್ಯ ಪ್ರಾರಂಭ­ವಾ­ಗಿದೆ.  ಸದ್ಯ 40 ಅಡಿಗಳಷ್ಟು ಆಳದವರೆಗೆ ಮಣ್ಣು ತೆಗೆದು ಹಾಕಲಾಗಿದ್ದು, ಅಲ್ಲಿ ಕಲ್ಲು ಬಂಡೆ ಎದು­ರಾ­ಗಿದೆ. ನಿಯಂತ್ರಿತ ಸ್ಫೋಟದ (ಕಂಟ್ರೋಲ್ಡ್‌ ಬ್ಲಾಸ್ಟ್‌) ಮೂಲಕ ಕಲ್ಲು ಬಂಡೆಯನ್ನು ಕರಗಿಸುವ ಕಾರ್ಯ ಪ್ರಾರಂಭವಾಗಿದೆ.

ಸ್ಫೋಟದ ಸಮಯದಲ್ಲಿ ಯಾವುದೇ ತೊಂದರೆ ಆಗಬಾರದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಪಕ್ಕದಲ್ಲಿರುವ ಲಕ್ಷ್ಮಣ್‌ ಸ್ಲಂನಿಂದ ಕೆಲ ಮನೆಗಳ ನಿವಾಸಿಗಳನ್ನು ತಾತ್ಕಾಲಿ­ಕವಾಗಿ ತೆರವು ಮಾಡಿಸಲಾಗಿದೆ. ಮನೆ ಖಾಲಿ ಮಾಡಿರುವ ಕುಟುಂಬದ ಸದಸ್ಯರಿಗೆ ತಲಾವಾರು ಲೆಕ್ಕದಲ್ಲಿ (ಪ್ರತಿ ವ್ಯಕ್ತಿಗೆ ದಿನಕ್ಕೆ ₨ 500ರಂತೆ) ಪರಿಹಾರ ಭತ್ಯೆ ಕೊಡಲಾಗುತ್ತಿದೆ.

‘ಫೆಬ್ರುವರಿ ಎರಡನೇ ಅಥವಾ ಮೂರನೇ ವಾರ­ದೊಳಗೆ ಟಿಬಿಎಂನ ಹಾಳಾಗಿರುವ ‘ಕಟರ್‌ ಹೆಡ್‌’ ಅನ್ನು ಹೊರ ತೆಗೆಯಲು ಸಾಧ್ಯವಾಗಬಹುದು. ಅದೇ ವೇಳೆಗೆ ಇಟಲಿಯಿಂದ ಹೊಸ ಕಟರ್‌ ಹೆಡ್‌ ಬರುವ ಸಾಧ್ಯತೆ ಇದೆ. ಮಾರ್ಚ್‌ ಮೊದಲ ವಾರ ಗೋದಾವರಿ ಕಾರ್ಯಾ­ಚರಣೆಯನ್ನು ಪುನರಾರಂಭಗೊಳಿಸುವುದು  ಬೆಂಗಳೂರು ಮೆಟ್ರೊ ರೈಲು ನಿಗಮದ ಗುರಿ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮೂಲ ಯೋಜನೆ ಪ್ರಕಾರ ಉತ್ತರ– ದಕ್ಷಿಣ ಕಾರಿ­ಡಾರ್‌ನಲ್ಲಿ ಜಕ್ಕರಾಯನಕೆರೆ ಮೈದಾನದ ಬಳಿಯಿಂದ ಮೆಜೆಸ್ಟಿಕ್‌ವರೆಗೆ ಜೋಡಿ ಸುರಂಗ ಮಾರ್ಗ­ವನ್ನು ‘ಗೋದಾ­ವರಿ’ ಟಿಬಿಎಂ ನಿರ್ಮಿಸಬೇಕಾ­ಗಿತ್ತು. ಒಂದು ಸುರಂಗದ ಉದ್ದ 854 ಮೀಟರುಗಳು. 2014ರ ಜೂನ್‌ ಹೊತ್ತಿಗೆ 352 ಮೀಟರುಗಳಷ್ಟು ಸುರಂಗ ನಿರ್ಮಿ­­ಸಿದ  ‘ಗೋದಾವರಿ’ಯ ‘ಕಟರ್‌ಹೆಡ್‌’ ಹಾಳಾ­ಯಿತು. ಸುರಂಗ ನಿರ್ಮಾಣದ ಕೆಲಸವೂ ಸ್ಥಗಿತಗೊಂಡಿತು.

ಆಗ ನಿಗಮದ ಅಧಿಕಾರಿಗಳು ಮತ್ತು ತಂತ್ರಜ್ಞರು ಸುರಂಗ ನಿರ್ಮಾಣ ಕಾರ್ಯ ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸಿ­ದರು. ಕೊನೆಗೆ ‘ಗೋದಾವರಿ’ ಟಿಬಿಎಂನ ಕಟರ್‌ಹೆಡ್‌ ಬದ­ಲಾವಣೆ ಮಾಡಿ ಕೆಲಸ ಮುಂದುವರಿಸಲು ಹಾಗೂ ಎರಡನೇ ಸುರಂಗದ ನಿರ್ಮಾಣ ಕಾರ್ಯವನ್ನು ‘ಮಾರ್ಗರೀಟಾ’ ಟಿಬಿಎಂನಿಂದ ಪ್ರಾರಂಭಿಸಲು ನಿರ್ಧರಿಸಿದರು.

ದೆಹಲಿಯಲ್ಲೂ ಕೆಟ್ಟಿತ್ತು: ‘ದೆಹಲಿಯ ಮೆಟ್ರೊ ಸುರಂಗ ನಿರ್ಮಾಣದ ಇತಿಹಾಸದಲ್ಲಿ ಒಂದೇ ಟಿಬಿಎಂ ಹತ್ತಾರು ಕಿ.ಮೀ. ಉದ್ದದ ಸುರಂಗಗಳನ್ನು ಯಶಸ್ವಿ­ಯಾಗಿ ನಿರ್ಮಿಸಿದ ಉದಾಹರಣೆ  ಉಂಟು. ಆದರೆ ಅಲ್ಲೂ ಒಂದು ಯಂತ್ರ ಕೆಟ್ಟಿತ್ತು’ ಎಂದು ಹಿರಿಯ ತಂತ್ರಜ್ಞ­ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರಿನಲ್ಲೂ ‘ಮಾರ್ಗರೀಟಾ’ ಮತ್ತು ‘ಹೆಲೆನ್‌’ ಟಿಬಿಎಂಗಳು ತಲಾ ನಾಲ್ಕು ಕಿ.ಮೀ.ಗೂ ಹೆಚ್ಚು ಉದ್ದದ ಸುರಂಗವನ್ನು ಯಶಸ್ವಿಯಾಗಿ ನಿರ್ಮಿಸಿವೆ. ಅಷ್ಟಲ್ಲದೇ ‘ಮಾರ್ಗರೀಟಾ’ ಟಿಬಿಎಂ ಮೆಜೆಸ್ಟಿಕ್‌ನಿಂದ ಜಕ್ಕರಾಯನಕೆರೆ ಮೈದಾನದ ಕಡೆಗೆ ಸುರಂಗ ನಿರ್ಮಿ­ಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅರ್ಧಕ್ಕಿಂತ ಹೆಚ್ಚು ಕೆಲಸವನ್ನೂ ಮುಗಿಸಿದೆ’ ಎಂದು ಅವರು ಹೇಳಿದರು.

‘ಟಿಬಿಎಂನ ಕಟರ್‌ ಹೆಡ್‌ನಲ್ಲಿ ಮಣ್ಣು, ಕಲ್ಲು ಕೊರೆ­ಯುವ ಬಿಡಿ ಭಾಗಗಳಿರುತ್ತವೆ. ಸುರಂಗ ನಿರ್ಮಾಣ ಕಾರ್ಯ ಪ್ರಾರಂಭಿಸುವ ಮುನ್ನ ಆಯಾ ಭೂಪ್ರದೇಶದ ನೆಲದಾಳದ ಸಂರಚನೆಗೆ ತಕ್ಕಂತೆ ಕಟರ್‌ ಹೆಡ್‌ ಅನ್ನು  ಜೋಡಿಸಲಾಗಿರುತ್ತದೆ. ಮಣ್ಣು ಎದುರಾದಾಗ ಮಣ್ಣನ್ನು ಕೊರೆಯುವ ಅಥವಾ ಕಲ್ಲು ಎದುರಾದಾಗ ಕಲ್ಲನ್ನು ಪುಡಿಮಾಡುವ ಬಿಡಿ ಭಾಗಗಳು ಸ್ವಯಂ ಚಾಲಿತವಾಗಿ ಚಾಲೂ ಆಗುತ್ತವೆ.

ರೈಲು ಹಳಿಗಳು ಮತ್ತು ಶೇಷಾದ್ರಿ ರಸ್ತೆ ನಡುವೆ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ನೆಲದಾಳದಲ್ಲಿ ಗಟ್ಟಿಯಾದ ಕಲ್ಲಿನ ಬಂಡೆ ಕೊರೆಯುವಾಗ ‘ಟಿಬಿಎಂ’ನ ಕೊರೆಯುವ ಭಾಗ ಜಖಂಗೊಂಡಿದೆ. ಅದರಿಂದ ಇಡೀ ಯಂತ್ರ ಮುಂದಕ್ಕೂ ಹಿಂದಕ್ಕೂ ಚಲಿಸಲು ಸಾಧ್ಯವಿಲ್ಲದಂತೆ ನಿಂತು ಬಿಟ್ಟಿದೆ’ ಎಂದು ಅವರು ವಿವರಿಸಿದರು.

ಏದುಸಿರು ಬಿಡುತ್ತಿರುವ ‘ಕೃಷ್ಣಾ’
ಕೆ.ಆರ್‌.ರಸ್ತೆಯ ಶಿವಶಂಕರ್‌ ವೃತ್ತದಿಂದ ವಾಣಿ ವಿಲಾಸ್‌ ಆಸ್ಪತ್ರೆವರೆಗೆ ಯಶಸ್ವಿಯಾಗಿ ಸುರಂಗ ನಿರ್ಮಿಸಿದ ‘ಕೃಷ್ಣಾ’ ಟಿಬಿಎಂ ವಿಕ್ಟೋರಿಯಾ ಆಸ್ಪತ್ರೆಯಿಂದ ಚಿಕ್ಕಪೇಟೆ ಕಡೆಗೆ ಸುರಂಗ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸದ್ಯ ಮೈಸೂರು ರಸ್ತೆಯಲ್ಲಿ ಫ್ಲೈ ಓವರ್‌ ಕೆಳಭಾಗದಲ್ಲಿರುವ ಈ ಟಿಬಿಎಂ, ನೆಲದಾಳದಲ್ಲಿ ಸಿಗುತ್ತಿರುವ ಅನಿರೀಕ್ಷಿತ ಕಲ್ಲು ಬಂಡೆಗಳಿಂದ ಕಂಗಾಲಾಗಿದೆ. ಪರಿಣಾಮ ಸುರಂಗ ನಿರ್ಮಾಣದ ವೇಗ ಕುಂಠಿತಗೊಂಡಿದೆ.

ADVERTISEMENT

‘ಈ ಭಾಗದಲ್ಲಿ ಹಳೆಯ ಮತ್ತು ಶಿಥಿಲಗೊಂಡ ಕಟ್ಟಡಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ತಿಳಿಸಿದರು. ‘ಕೆ.ಆರ್‌.ರಸ್ತೆಯ ಶಿವಶಂಕರ್‌ ವೃತ್ತದಿಂದ ವಾಣಿ ವಿಲಾಸ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಿಂದ ಚಿಕ್ಕಪೇಟೆವರೆಗೆ ಯಶಸ್ವಿಯಾಗಿ ಸುರಂಗ ನಿರ್ಮಿಸಿರುವ ‘ಕಾವೇರಿ’ ಟಿಬಿಎಂ ಇದೀಗ ಚಿಕ್ಕಪೇಟೆಯಿಂದ ಮೆಜೆಸ್ಟಿಕ್‌ವರೆಗೆ ಸುರಂಗ ನಿರ್ಮಿಸಲು ಸಜ್ಜಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.