ADVERTISEMENT

ಉದ್ಯಾನದೊಳಗೆ ಬಗೆಬಗೆಯ ಬೆರಗು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2015, 19:56 IST
Last Updated 30 ಆಗಸ್ಟ್ 2015, 19:56 IST

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಭಾನುವಾರ ಬೆಳಿಗ್ಗೆ ಉದಯರಾಗ ಕಾರ್ಯಕ್ರಮದಲ್ಲಿ  ಚನ್ನಪಟ್ಟಣದ ಲೋಕೇಶ್‌ ಮತ್ತು ತಂಡದವರು ಜನಪದ, ಭಾವಗೀತೆ ಮತ್ತು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.

ನಂತರ, ಇಂದಿರಾನಗರ ಸಂಗೀತ ಸಭಾದ ಉಷಾ ಶ್ರೀನಿವಾಸ್‌ ಅವರ ಶಿಷ್ಯೆಯರು ಶಾಸ್ತ್ರೀಯ ಸಂಗೀತ, ದೇವರನಾಮಗಳ ಭಜನೆ ನಡೆಸಿಕೊಟ್ಟರು.

ವಾರಾಂತ್ಯದ ವಿಹಾರಕ್ಕಾಗಿ ಉದ್ಯಾನಕ್ಕೆ ಬಂದವರಿಗೆ ರಾಜ್ಯ ಮೀಸಲು ಪೊಲೀಸ್‌ ಪಡೆಯ ಬ್ಯಾಂಡ್‌ ತಂಡದವರು ಸಂಗೀತ ಸುಧೆ ಉಣ್ಣಿಸಿದರು.

ಕಲಾಸಿಂಧು ಡ್ಯಾನ್ಸ್‌ ಅಕಾಡೆಮಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಭರತನಾಟ್ಯ ನೋಡುಗರ ಮನಸೆಳೆಯಿತು.
ಪರಿಸರಸ್ನೇಹಿ ಗಣೇಶ ಹಬ್ಬದ ಆಚರಣೆ ಕುರಿತು ಜಾಗೃತಿ ಮೂಡಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ‘ಅಜ್ಞಾನದ ಗಣೇಶ ಬೇಡ, ಸುಜ್ಞಾನದ ಗಣೇಶ ಬೇಕು’ ಎಂಬ ನಾಟಕ ಮತ್ತು ಜಾದೂ ಪ್ರದರ್ಶನ ಏರ್ಪಡಿಸಿತ್ತು.

ಅಮೆರಿಕದ ಜೇಮ್ಸ್‌ ಜಾರ್ಜ್‌ ಮತ್ತು  ಕರ್ನಾಟಕ ಮ್ಯಾಜಿಕ್‌ ಆರ್ಟ್‌ ಅಕಾಡೆಮಿಯ ರಮೇಶ್‌ ಕಾಮತ್‌, ಎಸ್‌.ಪಿ.ನಾಗೇಂದ್ರ ಪ್ರಸಾದ್ ತಂಡದವರು ಪ್ರದರ್ಶಿಸಿದ ಜಾದೂ ಪ್ರದರ್ಶನ ನೋಡುಗರನ್ನು ಕೆಲಹೊತ್ತು ವಿಸ್ಮಯದ ಕಡಲಿಗೆ ನೂಕಿತ್ತು.
ಇದೇ ಸಂದರ್ಭದಲ್ಲಿ ಮಣ್ಣಿನ ಗಣೇಶನನ್ನು ತಯಾರಿಸುವುದು ಹೇಗೆ ಎಂಬ ಪ್ರಾತ್ಯಕ್ಷಿಕೆ ನಡೆಸಿಕೊಡಲಾಯಿತು.

ಸಂಜೆ ಸಂಧ್ಯಾರಾಗ ಕಾರ್ಯಕ್ರಮದಲ್ಲಿ ಹೊಸಕೋಟೆ ತಾಲ್ಲೂಕಿನ ಭಕ್ತರಹಳ್ಳಿಯ ಪ್ರಭಾವತಿ ಮತ್ತು ತಂಡದವರು ಜನಪದ ಗೀತೆಗಳನ್ನು ಹಾಡಿ ವಾಯು ವಿಹಾರಗಳನ್ನು ಮುದಗೊಳಿಸಿದರು.

ಪ್ರತಿ ವಾರದಂತೆ ಈ ವಾರವೂ ಭೂಸಾರಿಗೆ ನಿರ್ದೇಶನಾಲಯದ ವತಿಯಿಂದ ಉಚಿತ ಸೈಕಲ್‌ ಸವಾರಿಗೆ ವ್ಯವಸ್ಥೆ ಮಾಡಲಾಗಿತ್ತು. ತರಕಾರಿ, ಹಣ್ಣು, ಸಾವಯವ ಆಹಾರ ಪದಾರ್ಥಗಳು, ಆಲಂಕಾರಿಕ ಸಸ್ಯಗಳ ಮಾರಾಟ ಮಳಿಗೆಗಳು ಕಂಡುಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT