ADVERTISEMENT

ಎನ್‌ಎಎಲ್‌ ಅವ್ಯವಹಾರ ತನಿಖೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 1 ಮೇ 2016, 19:42 IST
Last Updated 1 ಮೇ 2016, 19:42 IST
ಉಪವಾಸ ಸತ್ಯಾಗ್ರಹ ಆರಂಭಿಸಿರುವ ಚಕ್ರಪಾಣಿ – ಪ್ರಜಾವಾಣಿ ಚಿತ್ರ
ಉಪವಾಸ ಸತ್ಯಾಗ್ರಹ ಆರಂಭಿಸಿರುವ ಚಕ್ರಪಾಣಿ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್‌ಎಎಲ್‌) ಬೆಂಗಳೂರು ಕೇಂದ್ರದಲ್ಲಿ ಅವ್ಯವಹಾರವಾಗಿದ್ದು, ಅದರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಕೇಂದ್ರದ ಮಾಜಿ ನೌಕರ ಕೆ. ಚಕ್ರಪಾಣಿ ಎಂಬುವವರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

‘ಕೇಂದ್ರದ ಹೋಟೆಲ್‌ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಮಂಜೂರಾಗುತ್ತದೆ. ಅದರ ಖರ್ಚಿನ ದಾಖಲೆಗಳಿಲ್ಲ. ಕೆಲ ದಾಖಲೆಗಳನ್ನು ಸುಟ್ಟು ಹಾಕಲಾಗಿದೆ.  ಕೆಲ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ’ ಎಂದು ಚಕ್ರಪಾಣಿ ದೂರಿದರು.

‘ಘಟಕದ ಹೋಟೆಲ್‌್ ವ್ಯವಸ್ಥಾಪಕನಾಗಿ 1985ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. 1988ರವರೆಗೆ ಕೆಲಸ ನಿರ್ವಹಿಸಿದಾಗ ಅವ್ಯವಹಾರದ ಬಗ್ಗೆ ಗೊತ್ತಾಯಿತು. ಅದನ್ನು ಪ್ರಶ್ನಿಸಿದ್ದಕ್ಕೆ ಯಾವುದೇ ಕಾರಣ ನೀಡದೆ ಕೆಲಸದಿಂದ ತೆಗೆದರು. ಪುನಃ 1995ರಂದು ಮತ್ತೆ ಕೆಲಸಕ್ಕೆ ಸೇರಿಸಿಕೊಂಡು ಹಣಕಾಸು ವಿಭಾಗಕ್ಕೆ ವರ್ಗಾಯಿಸಿದ್ದರು. 2008ರಲ್ಲಿ ನಿವೃತ್ತಿ ಹೊಂದಿದ್ದು, ಅಂದಿನಿಂದ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇನೆ’ ಎಂದು  ತಿಳಿಸಿದರು.

‘ಅವ್ಯವಹಾರ ತನಿಖೆಗೆ ಕೂಡಲೇ ತನಿಖಾ ದಳವನ್ನು ರಚಿಸಬೇಕು. ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ’ ಎಂದು ಚಕ್ರಪಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.