ADVERTISEMENT

ಎನ್‌ಜಿಟಿಗೆ ವರ್ಗಾಯಿಸಲು ಸೂಚನೆ

ಸಿಎನ್‌ಜಿ ಬಸ್‌ಗಳ ಪರಿವರ್ತನೆಗೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2016, 19:30 IST
Last Updated 22 ಜುಲೈ 2016, 19:30 IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಬಸ್‌ಗಳಿಗೆ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಚಾಲಿತ ಎಂಜಿನ್‌ಗಳನ್ನು ಅಳವಡಿಸಲು  ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯಲ್ಲಿ ದಾಖಲಿಸುವಂತೆ ಹೈಕೋರ್ಟ್‌ ಅರ್ಜಿದಾರರಿಗೆ ಸೂಚಿಸಿದೆ.

ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ ವಿಲೇವಾರಿ ಮಾಡಿ, ಎನ್‌ಜಿಟಿಗೆ ಅರ್ಜಿ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಿದೆ.

‘ಪರಿಸರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡುವ ಅಧಿಕಾರವನ್ನು ಎನ್‌ಜಿಟಿ ಹೊಂದಿದೆ. ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು  ಹಲವು ಪ್ರಕರಣಗಳನ್ನು ಎನ್‌ಜಿಟಿ ಯಲ್ಲಿಯೇ ಪರಿಹರಿಸಿಕೊಳ್ಳುವಂತೆ ಸೂಚಿಸಿವೆ’ ಎಂಬುದನ್ನು  ನ್ಯಾಯಪೀಠವು ಈ ವೇಳೆ ಉಲ್ಲೇಖಿಸಿತು.

ಅರ್ಜಿದಾರರ ದೂರು: ‘ಬೆಂಗಳೂರು ಮಹಾನಗರದಲ್ಲಿ ಸಂಚರಿಸುವ ಎಲ್ಲ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳನ್ನು ಸಿಎನ್‌ಜಿ ಚಾಲಿತ ಬಸ್‌ಗಳಿಗೆ ಪರಿವರ್ತಿಸಬೇಕು’ ಎಂದು ಕೋರಿ ವಕೀಲರೂ ಆದ ಶಿವಾನಂದ ನಾಯಕ್‌  ಅರ್ಜಿ ಸಲ್ಲಿಸಿದ್ದರು.

‘ವಾಹನಗಳ ವಾಯುಮಾಲಿನ್ಯದಿಂದ ನಗರದ ಶೇಕಡ 36ರಷ್ಟು ಮಕ್ಕಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ರೀತಿ ವೃದ್ಧರೂ ಶಬ್ದ ಮತ್ತು ವಾಯು ಮಾಲಿನ್ಯದಿಂದ ತೊಂದರೆಗೆ ಒಳಗಾಗಿದ್ದಾರೆ’ ಎಂದು ಅರ್ಜಿದಾರರು ದೂರಿದ್ದರು.

ಆಕ್ಷೇಪ: ಈ ಪ್ರಕರಣದಲ್ಲಿ ಪ್ರತಿವಾದಿ ಬಿಎಂಟಿಸಿ ಪರ ವಕೀಲ ಅರುಣ ಶ್ಯಾಮ್‌ ನ್ಯಾಯಪೀಠಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರು. 

‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ–2010ರ ಅನುಸಾರ ಪರಿಸರಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನೂ ರಾಷ್ಟ್ರೀಯ ಹಸಿರು ನ್ಯಾಯಪೀಠವೇ ಇತ್ಯರ್ಥಪಡಿಸಬೇಕು. ಅಂತೆಯೇ ಇದೆಲ್ಲಾ ಸರ್ಕಾರದ ನೀತಿ. ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಸರ್ಕಾರದ ನೀತಿಗಳಲ್ಲಿ ಮಧ್ಯಪ್ರವೇಶಿಸಲು ಸಂವಿಧಾನದ 226 ಮತ್ತು 32ನೇ ವಿಧಿಗಳು ಸ್ಪಷ್ಟವಾಗಿ ನಿರಾಕರಿಸುತ್ತವೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.