ADVERTISEMENT

ಐದು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: ಐವರ ರಕ್ಷಣೆ

ಸರ್ಜಾಪುರ ಸೂಪರ್‌ ಮಾರುಕಟ್ಟೆಯ ‘ಸ್ಟಾಪ್‌ ಆ್ಯಂಡ್‌ ಶಾಪ್‌’

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಏಣಿ ಸಹಾಯದಿಂದ ಕಟ್ಟಡದೊಳಗೆ ಹೋಗಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ
ಏಣಿ ಸಹಾಯದಿಂದ ಕಟ್ಟಡದೊಳಗೆ ಹೋಗಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ   

ಬೆಂಗಳೂರು: ಸರ್ಜಾಪುರ ಬಳಿಯ ಕಸವನಹಳ್ಳಿಯ ಸೂಪರ್‌ ಮಾರುಕಟ್ಟೆಯಲ್ಲಿರುವ ಐದು ಅಂತಸ್ತಿನ ‘ಸ್ಟಾಪ್‌ ಆ್ಯಂಡ್‌ ಶಾಪ್‌’ ಕಟ್ಟಡದಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದ್ದು, ಅಪಾಯಕ್ಕೆ ಸಿಲುಕಿದ್ದ ಐವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.

ಕಟ್ಟಡದ ನೆಲ ಮಹಡಿಯಲ್ಲಿ ಉದ್ಯಮವೊಂದರ ಕಚೇರಿ ಇದೆ. ಒಂದು ಮತ್ತು ಎರಡನೇ ಮಹಡಿಗಳಲ್ಲಿ ಗೃಹೋಪಯೋಗಿ ಹಾಗೂ ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆ ಇದೆ. ಮೂರು ಹಾಗೂ ನಾಲ್ಕನೇ ಮಹಡಿಗಳಲ್ಲಿ ಪುರುಷರ ಪೇಯಿಂಗ್‌ ಗೆಸ್ಟ್‌ ಕೊಠಡಿಗಳಿವೆ. 

ನೆಲ ಮಹಡಿಯ ಕಚೇರಿಯಲ್ಲಿ ಬೆಳಿಗ್ಗೆ  6 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಕೆಲವು ನಿಮಿಷಗಳಲ್ಲೇ ಮೊದಲ ಮಹಡಿ ಹಾಗೂ ಎರಡನೇ ಮಹಡಿಗೂ ಬೆಂಕಿ ಹಬ್ಬಿತು. ಮೂರು ಮಹಡಿಗಳಲ್ಲಿ ಬೆಂಕಿಯು ಧಗಧಗನೇ ಉರಿಯಲಾರಂಭಿಸಿದವು.

ಕಟ್ಟಡದ ಮೆಟ್ಟಿಲುಗಳಲ್ಲಿ ದಟ್ಟ ಹೊಗೆ ಆವರಿಸಿತ್ತು.  ಪೇಯಿಂಗ್‌ ಗೆಸ್ಟ್‌ ಕೊಠಡಿಯಲ್ಲಿದ್ದ ಕೆಲ ಯುವಕರು ಹೊರಗೆ ಓಡಿಬಂದರು.  ಆದರೆ, ಐವರು ಯುವಕರು ಛಾವಣಿ ಮೇಲೆ ನಿಂತು ಸಹಾಯಕ್ಕಾಗಿ ಕೂಗುತ್ತಿದ್ದರು. ಅಗ್ನಿಶಾಮಕ ದಳದ  ಸಿಬ್ಬಂದಿ ಏಣಿಯ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು. ಐದು ವಾಹನಗಳ ಮೂಲಕ ನೀರನ್ನು ಹಾಯಿಸಿ ಬೆಂಕಿಯನ್ನು ಹತೋಟಿಗೆ ತಂದರು. 

ತನಿಖೆ ನಡೆಸಿ ವರದಿ ಸಲ್ಲಿಕೆ: ‘ಬೆಂಕಿ ಅವಘಡದಿಂದ ಸಂಭವಿಸಿದ ಹಾನಿ ಬಗ್ಗೆ ಮಾಲೀಕರಿಂದ ಮಾಹಿತಿ ಪಡೆಯಬೇಕಿದೆ. ಬೆಂಕಿ ಹೊತ್ತಿಕೊಂಡಿದ್ದಕ್ಕೆ ಸದ್ಯಕ್ಕೆ ಕಾರಣ ಗೊತ್ತಾಗಿಲ್ಲ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವಿಕುಮಾರ್‌ ಚವ್ಹಾಣ ತಿಳಿಸಿದರು.

‘ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಹಾಗೂ ಕಟ್ಟಡದ ಮಾಲೀಕರ ಹೇಳಿಕೆ  ಪಡೆಯಬೇಕಿದೆ. ಕಟ್ಟಡವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ವರದಿ ಸಿದ್ಧಪಡಿಸಿ ಹಿರಿಯ ಅಧಿಕಾರಿಗಳಿಗೆ ನೀಡುತ್ತೇವೆ’ ಎಂದು  ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT