ADVERTISEMENT

ಒಕ್ಕಲಿಗರ ಸಂಘದ ಅಧ್ಯಕ್ಷರ ವಿರುದ್ಧ ದೂರು

ಅಕ್ರಮವಾಗಿ ವೈದ್ಯಕೀಯ ಸೀಟು ಹಂಚಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ಬೆಂಗಳೂರು:  ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರ ಸಂಬಂಧಿಗೆ ಕಾನೂನು ಬಾಹಿರವಾಗಿ ವೈದ್ಯಕೀಯ ಸೀಟು ಹಂಚಿಕೆ ಮಾಡಿದ ಆರೋಪದ ಮೇಲೆ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಸೇರಿದಂತೆ 10 ಮಂದಿ ವಿರುದ್ಧ ಚೌಧರಿ ಎಂಬುವರು ಸೆಂಟ್ರಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘2014–15ನೇ ಸಾಲಿನ ಕಾಮೆಡ್‌–ಕೆ ಪರೀಕ್ಷೆಯಲ್ಲಿ ನನ್ನ ಮಗ ಋತ್ವಿಕ್‌ಗೆ ಅನಿವಾಸಿ ಭಾರತೀಯ ಕೋಟಾದಡಿ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ (ಕಿಮ್ಸ್‌) ಎಂಬಿಬಿಎಸ್ ಸೀಟು ಹಂಚಿಕೆಯಾಗಿತ್ತು. ಆದರೆ, ಕಾಲೇಜಿನ ಆಡಳಿತ ಮಂಡಳಿಯು ಕೊನೆ ಕ್ಷಣದಲ್ಲಿ ಆ ಸೀಟನ್ನು ಲೇಖಶ್ರೀ ಎಂಬುವರಿಗೆ ನೀಡಿದೆ’ ಎಂದು ಚೌಧರಿ ದೂರಿನಲ್ಲಿ ತಿಳಿಸಿದ್ದಾರೆ.

‘ಮಗನಿಗೆ ಕಿಮ್ಸ್‌ನಲ್ಲಿ ಸೀಟು ಪಡೆಯುವ ಉದ್ದೇಶಕ್ಕಾಗಿ ಒಕ್ಕಲಿಗರ ಸಂಘಕ್ಕೆ  65 ಲಕ್ಷ ದೇಣಿಗೆ ಮತ್ತು ಶುಲ್ಕ ಸೇರಿದಂತೆ  1.20 ಕೋಟಿ ಕೊಟ್ಟಿದ್ದೆ. ಆದರೆ, ಕಾಲೇಜಿನ ಆಡಳಿತ ಮಂಡಳಿಯು ಸಂಘದ ಸದಸ್ಯರೊಂದಿಗೆ ಸೇರಿ ಲೇಖಶ್ರೀ ಅವರಿಗೆ ಸೀಟು ಹಂಚಿಕೆ ಮಾಡಿ ವಂಚಿಸಿದೆ’ ಎಂದು ಅವರು ಆರೋಪಿಸಿದ್ದಾರೆ.

ಚೌಧರಿ ಅವರ ದೂರು ಆಧರಿಸಿ  ಅಪ್ಪಾಜಿಗೌಡ, ಸಂಘದ ಉಪಾಧ್ಯಕ್ಷ ಆ.ದೇವೇಗೌಡ, ಕಾರ್ಯದರ್ಶಿ ನಾಗ­ರಾಜ್‌, ನಿರ್ದೇಶಕರಾದ ಡಾ.ನಿಸರ್ಗ, ಪ್ರೊ.ಕೃಷ್ಣಪ್ಪ, ಶೇಖರ್‌, ರವಿ, ಕಾಲೇಜಿನ ಪ್ರಾಂಶುಪಾಲ ಡಾ.ಗೋಪಾಲ್‌, ವಿದ್ಯಾ­ರ್ಥಿನಿ ಲೇಖಶ್ರೀ ಮತ್ತು ಕಚೇರಿ ಸಿಬ್ಬಂದಿ ನಾರಾಯಣ ಎಂಬುವರ ವಿರುದ್ಧ ವಂಚನೆ ಹಾಗೂ ಅಪರಾಧ ಸಂಚು ಆರೋ­ಪದಡಿ ಪ್ರಕರಣ ದಾಖಲಿಸಿ­ಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಲೇಖಶ್ರೀ, ಆ.ದೇವೇಗೌಡ ಅವರ ಅಣ್ಣನ ಮೊಮ್ಮಗಳು. ಆಂಧ್ರಪ್ರದೇಶ ಮೂಲದ ಚೌಧರಿ ಅವರು ಕುಟುಂಬ ಸದಸ್ಯರೊಂದಿಗೆ ಜಯನಗರದಲ್ಲಿ ವಾಸವಾಗಿದ್ದಾರೆ. ಪ್ರಕರಣ ಸಂಬಂಧ ಪ್ರತಿಕ್ರಿಯೆ ಪಡೆಯಲು ಅಪ್ಪಾಜಿಗೌಡ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಹಲವರಿಗೆ ವಂಚನೆ
‘ಆರೋಪಿಗಳು ಇದೇ ರೀತಿ ಹಲವು ವಿದ್ಯಾರ್ಥಿಗಳಿಂದ ಹಣ ಪಡೆದು ವಂಚಿಸಿದ್ದಾರೆ. ಪ್ರಕರಣವನ್ನು ಹೆಚ್ಚಿನ ತನಿಖೆ­ಗಾಗಿ ಕೇಂದ್ರ ಅಪರಾಧ ವಿಭಾ­ಗಕ್ಕೆ (ಸಿಸಿಬಿ) ವರ್ಗಾಯಿಸಲು ನಿರ್ಧರಿ­ಸಲಾಗಿದೆ. ಆರೋಪಿಗಳಿಂದ ವಂಚನೆ­ಗೊಳ­ಗಾದ ವಿದ್ಯಾರ್ಥಿಗಳು ಸೆಂಟ್ರಲ್‌ ಪೊಲೀಸ್‌ ಠಾಣೆಗೆ ದೂರು ನೀಡ­ಬಹುದು’ ಎಂದು ಹಿರಿಯ ಅಧಿಕಾರಿ ಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT