ADVERTISEMENT

ಒತ್ತಾಯದ ನಿಶ್ಚಿತಾರ್ಥಕ್ಕೆ ನೊಂದಿದ್ದ ಟೆಕಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:52 IST
Last Updated 23 ನವೆಂಬರ್ 2017, 19:52 IST
ಗೀತಾಂಜಲಿ
ಗೀತಾಂಜಲಿ   

ಬೆಂಗಳೂರು: ಹುಟ್ಟುಹಬ್ಬದ ಮರುದಿನವೇ ಮಾರತ್ತಹಳ್ಳಿಯ ಸಾಫ್ಟ್‌ವೇರ್‌ ಎಂಜಿನಿಯರ್‌ ಗೀತಾಂಜಲಿ (27) ಎಂಬುವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ, ಒತ್ತಾಯದ ನಿಶ್ಚಿತಾರ್ಥ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಗೋವಾದಲ್ಲಿ ನ. 21ರಂದು ಕುಟುಂಬದ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಗೀತಾಂಜಲಿ, ಬುಧವಾರ ನಗರಕ್ಕೆ ವಾಪಸ್‌ ಬಂದಿದ್ದರು. ತಾವು ಕೆಲಸ ಮಾಡುತ್ತಿದ್ದ ಮಾರತ್ತಹಳ್ಳಿಯ ಸೆಸ್ನಾ ಟೆಕ್ ಪಾರ್ಕ್‌‌ ಕಟ್ಟಡದ 10ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತ್ಮಹತ್ಯೆ ಸಂಬಂಧ ಹಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ.

‘ಬನ್ನೇರುಘಟ್ಟದಲ್ಲಿ ವಾಸವಿರುವ ಚಿಕ್ಕಮ್ಮ ವಿಜಯಲಕ್ಷ್ಮಿ ಅವರೊಂದಿಗೆ ಗೀತಾಂಜಲಿ ಗೋವಾಕ್ಕೆ ಹೋಗಿದ್ದರು. ಅಲ್ಲಿ ಹುಟ್ಟುಹಬ್ಬದ ಆಚರಣೆಯೊಂದಿಗೆ ನಿಶ್ಚಿತಾರ್ಥಕ್ಕೂ ಏರ್ಪಾಟು ಮಾಡಲಾಗಿತ್ತು. ಅದು ಗೀತಾಂಜಲಿ ಅವರಿಗೆ ಗೊತ್ತಿರಲಿಲ್ಲ. ಕೇಕ್‌ ಕತ್ತರಿಸುತ್ತಿದ್ದಂತೆ ಹುಡುಗನೊಬ್ಬನನ್ನು ಪರಿಚಯಿಸಿದ್ದ ಪೋಷಕರು, ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದರು’ ಎಂದು ಮಾರತ್ತಹಳ್ಳಿ ಪೊಲೀಸರು ತಿಳಿಸಿದರು.

ADVERTISEMENT

‘ಆ ನಿಶ್ಚಿತಾರ್ಥಕ್ಕೆ ಗೀತಾಂಜಲಿ ಒಪ್ಪಿಗೆ ನೀಡಿರಲಿಲ್ಲ. ಆಗ ಪೋಷಕರು ಒತ್ತಾಯದಿಂದಲೇ ನಿಶ್ಚಿತಾರ್ಥ ಮುಗಿಸಿದ್ದರು. ಈ ವೇಳೆ ಹುಡುಗ ಸಹ ಒತ್ತಾಯದಿಂದ ಗೀತಾಂಜಲಿ ಜತೆಗೆ ಛಾಯಾಚಿತ್ರಗಳನ್ನು ತೆಗೆಸಿಕೊಂಡಿದ್ದಾನೆ. ಅಂಥ ಛಾಯಾಚಿತ್ರಗಳು ನಮಗೆ ಸಿಕ್ಕಿವೆ’ ಎಂದು ತಿಳಿಸಿದರು.

‘ಶವ ಪಡೆಯಲು ಬಂದಿದ್ದ ಪೋಷಕರು, ನಿಶ್ಚಿತಾರ್ಥದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ. ಹೇಳಿಕೆ ನೀಡಲು ನಿರಾಕರಿಸಿದ ಅವರು, ಶವವನ್ನು ತೆಗೆದುಕೊಂಡು ಗೋವಾಕ್ಕೆ ಹೋಗಿದ್ದಾರೆ. ಅವರೆಲ್ಲ ದುಃಖದಲ್ಲಿರುವುದರಿಂದ ಹೇಳಿಕೆ ನೀಡಲು ಹೆಚ್ಚಿನ ಒತ್ತಾಯ ಮಾಡಿಲ್ಲ. ಕೆಲದಿನಗಳ ಬಳಿಕ ಪುನಃ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುತ್ತೇವೆ’ ಎಂದು ವಿವರಿಸಿದರು.

‘ಡಬಲ್‌ ಧಮಾಕ’ ಸಂದೇಶ: ‘ಆತ್ಮಹತ್ಯೆಗೂ ಮುನ್ನ ಗೀತಾಂಜಲಿ, ಕೆಲ ಸ್ನೇಹಿತರಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ್ದಾರೆ. ಅದರಲ್ಲಿ ನಿಶ್ಚಿತಾರ್ಥದ ಬಗ್ಗೆ ನೋವು ತೋಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಪೋಷಕರು ಒತ್ತಾಯದಿಂದ ನಿಶ್ಚಿತಾರ್ಥ ಮಾಡಿದ್ದು, ಮದುವೆಯೂ ಇಷ್ಟವಿಲ್ಲ ಎಂದು ಅವರು ಸಂದೇಶದಲ್ಲಿ ಬರೆದಿದ್ದಾರೆ. ಅದಕ್ಕೆ ಉತ್ತರಿಸಿರುವ ಸ್ನೇಹಿತರು, ಹುಟ್ಟುಹಬ್ಬ ಹಾಗೂ ನಿಶ್ಚಿತಾರ್ಥ ಒಂದೇ ದಿನ ಮಾಡಿಕೊಳ್ಳುತ್ತಿದ್ದೀಯಾ. ಡಬಲ್‌ ಧಮಾಕ ಕಣೇ ಎಂದು ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.