ADVERTISEMENT

ಒತ್ತುವರಿ ಸ್ಥಳಗಳ ವಿಡಿಯೊ ಚಿತ್ರೀಕರಣ

ನಗರದ ಕೆರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 20:19 IST
Last Updated 22 ಆಗಸ್ಟ್ 2017, 20:19 IST
ಮಳೆ ನೀರಿನಿಂದ ಜಲಾವೃತಗೊಂಡಿದ್ದ ನಗರದ ತಗ್ಗು ಪ್ರದೇಶಗಳಲ್ಲಿ ಮಂಗಳವಾರ ಬಿಎಂಟಿಎಫ್‌ ಪೊಲೀಸ್‌ ಅಧಿಕಾರಿಗಳು ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದರು
ಮಳೆ ನೀರಿನಿಂದ ಜಲಾವೃತಗೊಂಡಿದ್ದ ನಗರದ ತಗ್ಗು ಪ್ರದೇಶಗಳಲ್ಲಿ ಮಂಗಳವಾರ ಬಿಎಂಟಿಎಫ್‌ ಪೊಲೀಸ್‌ ಅಧಿಕಾರಿಗಳು ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದರು   

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಜಲಾವೃತಗೊಂಡಿದ್ದ ತಗ್ಗು ಪ್ರದೇಶಗಳಲ್ಲಿನ ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಬಿಎಂಟಿಎಫ್‌ ಪೊಲೀಸ್‌ ಅಧಿಕಾರಿಗಳ ಆರು ತಂಡಗಳು ಮಂಗಳವಾರ ಕಾರ್ಯಾಚರಣೆ ಆರಂಭಿಸಿವೆ.

ಬಿಎಂಟಿಎಫ್‌ ಎಸ್‌ಪಿ ಲಕ್ಷ್ಮಿ ಗಣೇಶ್‌ ನೇತೃತ್ವದಲ್ಲಿ ಪೊಲೀಸ್‌ ಅಧಿಕಾರಿಗಳು, ಕೋರಮಂಗಲ, ಜೆ.ಪಿ.ನಗರ, ಶಾಂತಿನಗರ, ಮಹದೇವಪುರ, ಬೆಳ್ಳಂದೂರು, 87ನೇ ವಾರ್ಡ್, 53ನೇ ವಾರ್ಡ್‌ ಹಾಗೂ 149ನೇ ವಾರ್ಡ್‌ನಲ್ಲಿ ರಾಜಕಾಲುವೆ, ಕೆರೆ ಹಾಗೂ ಸರ್ಕಾರಿ ಜಾಗ ಒತ್ತುವರಿ ಗುರುತಿಸುವ ಕಾರ್ಯಾಚರಣೆ ನಡೆಸಿದವು.

ಸ್ಥಳೀಯರು ನೀಡಿದ ದೂರುಗಳನ್ನು ಆಧರಿಸಿ, ಒತ್ತುವರಿಯಾಗಿರುವ ಜಾಗಗಳನ್ನು ಅಧಿಕಾರಿಗಳ ತಂಡ ವಿಡಿಯೋ ಚಿತ್ರೀಕರಿಸಿಕೊಂಡಿತು.

ADVERTISEMENT

‘ಮಳೆಯಿಂದ ಜಲಾವೃತಗೊಂಡಿದ್ದ ಪ್ರದೇಶಗಳನ್ನು ಕೇಂದ್ರೀಕರಿಸಿಕೊಂಡು ಮೊದಲ ದಿನದ ಕಾರ್ಯಾಚರಣೆ ಆರಂಭಿಸಲಾಯಿತು. ಸ್ಥಳೀಯ ನಿವಾಸಿಗಳು ನೀಡಿದ ದೂರು, ಮಾಹಿತಿಗಳನ್ನು ಸ್ವೀಕರಿಸಲಾಗಿದೆ. ಅಲ್ಲದೆ, ನಮ್ಮ ಅಧಿಕಾರಿಗಳು ಕೆಲವು ಒತ್ತುವರಿ ಜಾಗಗಳನ್ನು ಗುರುತಿಸಿದ್ದಾರೆ. ಎಲ್ಲ ಮಾಹಿತಿ ಮತ್ತು ದೂರುಗಳನ್ನು ಕ್ರೋಡೀಕರಿಸಿಕೊಂಡು, ಒತ್ತುವರಿದಾರರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ಬಿಎಂಟಿಎಫ್‌ ಎಸ್‌ಪಿ ಲಕ್ಷ್ಮಿ ಗಣೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಾಲಿಕೆ ಅಧಿಕಾರಿಗಳ ಅಸಹಕಾರ

ಬಿಎಂಟಿಎಫ್‌ ಪೊಲೀಸ್‌ ಅಧಿಕಾರಿಗಳು ಕೆರೆ, ರಾಜಕಾಲುವೆ ಒತ್ತುವರಿ ಪತ್ತೆ ಹಚ್ಚಲು ಹುರುಪಿನಿಂದ ಇಳಿದರೆ, ಜಂಟಿ ಕಾರ್ಯಾಚರಣೆಗೆ ಸಹಕಾರ ನೀಡಬೇಕಿದ್ದ ಮಳೆನೀರು ಬೃಹತ್‌ ಕಾಲುವೆ ವಿಭಾಗದ ಎಂಜಿನಿಯರ್‌ಗಳು ಮತ್ತು ಕಂದಾಯ ವಿಭಾಗದ ಅಧಿಕಾರಿಗಳು ನಾಪತ್ತೆಯಾಗಿದ್ದರು.

ಪಾಲಿಕೆ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ಬಿಎಂಟಿಎಫ್‌ ಎಡಿಜಿಪಿ ಪ್ರಶಾಂತ್‌ಕುಮಾರ್‌ ಠಾಕೂರ್‌ ಅಧಿಕಾರಿಗಳ ತಂಡ ರಚಿಸಿದ್ದರು. ಮಾರ್ಗ ನಕ್ಷೆ ಜತೆಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಪಾಲಿಕೆ ಎಂಜಿನಿಯರ್‌ಗಳಿಗೂ ಸೂಚನೆ ನೀಡಿದ್ದರು. ಆದರೆ, ಮಧ್ಯಾಹ್ನದವರೆಗೂ ಒಬ್ಬರೇ ಒಬ್ಬರು ಎಂಜಿನಿಯರ್‌ಗಳು ಕಾರ್ಯಾಚರಣೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬಿಎಂಟಿಎಫ್‌ ಎಸ್‌ಪಿ ಲಕ್ಷ್ಮಿ ಗಣೇಶ್‌ ಅಸಮಾಧಾನ ವ್ಯಕ್ತಪಡಿಸಿದ ನಂತರ ಸಂಜೆವೇಳೆಗ ಒಂದಿಬ್ಬರು ಎಂಜಿನಿಯರ್‌ಗಳು ಕಾಣಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.