ADVERTISEMENT

ಕನಕನಿಗೊಂದು ಜಾಲತಾಣ, ಮಾಹಿತಿ ಹೂರಣ

ಅ.21ರಂದು ನೂತನ ‘ಕನಕ’ ವೆಬ್‌ಸೈಟ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2014, 20:07 IST
Last Updated 18 ಅಕ್ಟೋಬರ್ 2014, 20:07 IST

ಬೆಂಗಳೂರು: ಕರ್ನಾಟಕದ ಭಕ್ತಿ ಪಂಥ ಮತ್ತು ಹರಿದಾಸ ಪರಂಪರೆಯ ಅಗ್ರಗಣ್ಯರಲ್ಲಿ ಒಬ್ಬರಾದ ಕನಕದಾಸರ ಕೃತಿ, ಕೀರ್ತನೆಗಳನ್ನು ಹಾಗೂ ಅವರ ಚಿಂತನೆಗಳ ಅಧ್ಯಯನ, ಸಂಶೋಧನೆಗಳನ್ನು ಒಂದೆಡೆ ಕಲೆಹಾಕಿ ಅವುಗಳನ್ನು ಆಸಕ್ತರಿಗೆ ಒದಗಿಸುವ ದಿಸೆಯಲ್ಲಿ ‘ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ವು www.saintpoetkanaka.in  ಎಂಬ ನೂತನ ಜಾಲತಾಣವನ್ನು ನಿರ್ಮಿಸಿದ್ದು, ಈ ತಾಣಕ್ಕೆ ಇದೇ ಮಂಗಳವಾರ ಚಾಲನೆ ದೊರೆಯಲಿದೆ.

ಕನಕದಾಸರ ಸಮಗ್ರ ಸಾಹಿತ್ಯ ಕುರಿತ ಅಧ್ಯಯನ, ಸಂಶೋಧನೆಗಳನ್ನು ಪ್ರೋತ್ಸಾಹಿಸುವ ಜತೆಗೆ, ಅವರ ಮಾನವೀಯ ಸಂದೇಶಗಳನ್ನು ಪ್ರಕಟಿಸಿ, ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿರುವ ಸಂಶೋಧನಾ ಕೇಂದ್ರವು, ಇದೀಗ ನೂತನ ಜಾಲತಾಣ ತೆರೆಯುವ ಮೂಲಕ ಕರ್ನಾಟಕದ ಕನಕನನ್ನು ಒಂದೇ ಸೂರಿನಡಿ ಇಡೀ ವಿಶ್ವಕ್ಕೆ ಪರಿಚಯಿಸಲು ಹೊರಟಿದೆ.

ಕನಕದಾಸರನ್ನು ಕುರಿತು ನಡೆಸಿದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಿಚಾರ ಸಂಕಿರಣಗಳನ್ನು ಏರ್ಪಡಿಸುವುದ­ರೊಂದಿಗೆ ಗೊಂಬೆಯಾಟ, ಅನಿ­ಮೇಷನ್ ಕಿರುಚಿತ್ರ, ಕಾವ್ಯಗಳ ಸ್ವರಪ್ರಸ್ತಾರದ ಪುಸ್ತಕ, ರಸಗ್ರಹಣ ಶಿಬಿರ, ಕಮ್ಮಟಗಳು, ಕಾವ್ಯ ವಾಚಿಕೆ, ಪಾರಿಭಾಷಿಕ ಪದ ವಿವರಣಾ ಕೋಶ, ಕೀರ್ತನೆಗಳನ್ನು 15 ಭಾಷೆಗಳಿಗೆ ಅನು­ವಾ­ದಿಸುವ ಕಾರ್ಯ... ಹೀಗೆ ಹಲ­ವಾರು ಯೋಜನೆಗಳನ್ನು ಕೈಗೆತ್ತಿ­ಕೊಂಡಿ­ರುವ ಕೇಂದ್ರವು ತನ್ನೆಲ್ಲ ಚಟುವ­ಟಿಕೆ­ಗಳ ಮಾಹಿತಿ, ಆಡಿಯೊ ಮತ್ತು ವಿಡಿಯೊ­ಗಳನ್ನು ಈ ಮಾಹಿತಿ ಕಣಜದಲ್ಲಿ ಜತನದಿಂದ ಕಾಪಿಡಲು ಉದ್ದೇಶಿಸಿದೆ.

‘ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುವ ಈ ಜಾಲತಾಣದಲ್ಲಿ ಕನಕದಾಸರ ಬದುಕು ಮತ್ತು ಸಾಹಿತ್ಯ ಕುರಿತ ಸಂಕ್ಷಿಪ್ತ ಪರಿಚಯ, ದಾಸರಾಗಿ ಅವರು ಸಂದರ್ಶಿಸಿದ ಸ್ಥಳಗಳು, ಈವರೆಗೆ ಚಿತ್ರಿಸಿರುವ ಕನಕದಾಸರ ಭಾವಚಿತ್ರಗಳ ಜತೆಗೆ, ಸಾಕ್ಷ್ಯಚಿತ್ರವನ್ನು ಈ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ.

ಕನಕದಾಸರ ಸಾಹಿತ್ಯ ತುಂಬಾ ಸಂಕೀರ್ಣವಾದದ್ದು. ಅದು ಹೆಚ್ಚಿನ ವ್ಯವ­ಧಾನ ಮತ್ತು ಅಧ್ಯಯನ ಬಯಸು­ತ್ತದೆ ಎನ್ನುವ ಅವರು, ‘ಈ ಜಾಲತಾಣ­ದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕನಕ ಅಧ್ಯಯನ ಕೇಂದ್ರದ ವೆಬ್‌ಸೈಟ್‌ ಲಿಂಕ್‌ ಅನ್ನು ಕೂಡ ಒದಗಿಸಲಾಗಿದೆ. ಈ ಮೂಲಕ ಕನಕನ ಕುರಿತು ಹೆಚ್ಚಿನ ಅಧ್ಯಯನ ಮಾಡಲು ಬಯಸುವ ಆಸಕ್ತರಿಗೆ, ಸಾಹಿತ್ಯಪ್ರಿಯರಿಗೆ, ಸಂಶೋ­ಧ­ನಾ­ರ್ಥಿ­ಗಳಿಗೆ ಉಪಯುಕ್ತ­ವಾದ ಮಾಹಿತಿ  ದೊರೆಯಲಿದೆ’ ಎನ್ನುತ್ತಾರೆ.

‘‘ಕನಕ ಕಾವ್ಯ ವಾಚಿಕೆ’ ಎನ್ನುವ ಯೋಜನೆಯಲ್ಲಿ ಕನಕದಾಸರ ಮೋಹನ ತರಂಗಿಣಿ, ನಳಚರಿತ್ರೆ, ರಾಮಧ್ಯಾನ ಚರಿತ್ರೆ ಮತ್ತು ಹರಿಭಕ್ತಿಸಾರ ಕೃತಿಗಳ ಜತೆಗೆ ಅವರ 316 ಕೀರ್ತನೆಗಳನ್ನು ವಿದ್ವಾಂಸರಿಂದ ವಾಚಿಸಿ ಧ್ವನಿಮುದ್ರಿಸಿಕೊಳ್ಳಲಾಗಿದೆ. ಹಿರಿಯ ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ, ಸಾಹಿತಿ ಪ್ರೊ.ಅ.ರಾ.ಮಿತ್ರ, ಹಿರಿಯ ವಿಮರ್ಶಕ ಎಸ್‌.ಜಿ.ಸಿದ್ದರಾಮಯ್ಯ  ಸೇರಿದಂತೆ 22 ವಿದ್ವಾಂಸರ ಧ್ವನಿಯಲ್ಲಿ ಈ ಕೀರ್ತನೆ­ಗಳು ದಾಖಲಿಸಲಾಗಿದೆ. ಕನಕ ಸಾಹಿತ್ಯ ಪ್ರಿಯರು ಈ ವಾಚಿಕೆಯ ಆಡಿಯೊ ಕೂಡ ಜಾಲತಾಣದಲ್ಲಿ ಕೇಳಬಹುದು’ ಎಂದು ಚಿಕ್ಕಣ್ಣ ಹೇಳುತ್ತಾರೆ.

‘ಇದೇ ಮೊದಲ ಬಾರಿಗೆ ತೊಗಲು­ಗೊಂಬೆಯಾಟದಲ್ಲಿ ಕನಕದಾಸರನ್ನು ಅಳವಡಿಸಲು ತೊಗಲು­ಗೊಂಬೆ­ಯಾಟದ ಕಲಾವಿದರಾದ ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಬೆಳಗಲ್ ವೀರಣ್ಣ ಅವರ ನಿರ್ದೇಶನದಲ್ಲಿ ‘ಕನಕ ಗೊಂಬೆಯಾಟ’ ಎನ್ನುವ 90 ನಿಮಿಷಗಳ ಆಟವನ್ನು ಸಿದ್ಧಪಡಿಸಲಾಗಿದೆ.  ಈ ಆಟದ ವಿಡಿಯೊ ತಾಣದಲ್ಲಿ ಲಭ್ಯವಿದೆ’ ಎನ್ನುತ್ತಾರೆ ಅವರು.

ಈ ಜಾಲತಾಣಕ್ಕೆ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.