ADVERTISEMENT

ಕಬ್ಬನ್‌ ರಸ್ತೆಯಿಂದ ಶೀಘ್ರ ಮೆಟ್ರೊ ಸಂಚಾರ

ಪರೀಕ್ಷಾರ್ಥ ಓಡಾಟಕ್ಕೆ ಬಿಎಂಆರ್‌ಸಿಎಲ್ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 19:47 IST
Last Updated 2 ಆಗಸ್ಟ್ 2015, 19:47 IST

ಬೆಂಗಳೂರು: ಶೀಘ್ರದಲ್ಲೇ ನಗರದ ನಿವಾಸಿಗಳು ಕಬ್ಬನ್‌ ಪಾರ್ಕ್‌ ನಿಲ್ದಾಣದಿಂದ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಿಲ್ದಾಣದ ವರೆಗೆ ಮೆಟ್ರೊ ರೈಲಿನಲ್ಲಿ ಸಂಚರಿಸಬಹುದು.

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌), ಈ ಭಾಗದ ಸುರಂಗ ಮಾರ್ಗದಲ್ಲಿ ಮುಂದಿನ ತಿಂಗಳು ಪರೀಕ್ಷಾರ್ಥವಾಗಿ ರೈಲಿನ ಓಡಾಟ ನಡೆಸಲಿದೆ. ಪರೀಕ್ಷೆ ಪೂರ್ಣಗೊಂಡ ನಂತರ ಅಧಿಕೃತವಾಗಿ ರೈಲು ಓಡಾಡಲು ಶುರು ಮಾಡಿದರೆ ಕಚೇರಿಗ
ಳಿಗೆ ಹೋಗುವವರಿಗೆ ಸಾಕಷ್ಟು ಸಮಯ ಉಳಿಯಲಿದೆ. ಜೊತೆಗೇ ಟ್ರಾಫಿಕ್‌ನಲ್ಲಿ ಬಸವಳಿಯುವುದು ತಪ್ಪುತ್ತದೆ.

ಈ ಭಾಗದಲ್ಲಿ ರೈಲು ಓಡಾಟ ಆರಂಭವಾದ ನಂತರ ಸಾರ್ವಜನಿಕರು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗೆ ಮೆಟ್ರೊದಲ್ಲಿ ಸಂಚರಿಸಬಹುದು. ಸುರಂಗ ಮಾರ್ಗದಡಿ ಇರುವ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಿದರೆ ಬೈಯಪ್ಪನಹಳ್ಳಿಯಿಂದ ಮಾಗಡಿ ರಸ್ತೆ, ಮೈಸೂರು ರಸ್ತೆವರೆಗಿನ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ ನಡುವಿನ 20 ಕಿ.ಮೀ ದೂರವನ್ನು ಕೆಲವೇ ನಿಮಿಷಗಳಲ್ಲಿ ಕ್ರಮಿಸಬಹುದು.

ಬಿಎಂಆರ್‌ಸಿಎಲ್‌ ಪ್ರಕಾರ, ಪರೀಕ್ಷಾರ್ಥ ರೈಲು ಓಡಾಟಕ್ಕೆ ಸಂಬಂಧಿಸಿ ಪೂರ್ವಸಿದ್ಧತಾ ಕಾರ್ಯ ಸೆಪ್ಟೆಂಬರ್‌ ಮಧ್ಯದವರೆಗೆ ಪೂರ್ಣಗೊಳ್ಳಲಿದೆ. ಬಳಿಕ ಸುಮಾರು ಐದು ಕಿ.ಮೀ ಮಾರ್ಗದಲ್ಲಿ ಪರೀಕ್ಷಾರ್ಥವಾಗಿ ರೈಲು ಓಡಾಡಲಿದೆ. ಪರೀಕ್ಷಾರ್ಥ ರೈಲು ಓಡಾಟಕ್ಕೆ ಅನುವು ಮಾಡಿಕೊಡಲು ಶೀಘ್ರದಲ್ಲೇ ಸುರಂಗ ಮಾರ್ಗದಲ್ಲಿ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು. ವಿದ್ಯುತ್‌ ಕೇಬಲ್‌, ಸಿಗ್ನಲ್‌ ಅಳವಡಿಕೆ ಸೇರಿದಂತೆ ಇತರ ಕಾರ್ಯಗಳು ಪೂರ್ಣಗೊಂಡಿವೆ ಎಂದೂ ನಿಗಮ ಹೇಳಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಿಲ್ದಾಣದ ಮಧ್ಯೆ ಪರೀಕ್ಷಾರ್ಥವಾಗಿ ರೈಲು ಓಡಿಸಲು ಕಬ್ಬನ್‌ ಪಾರ್ಕ್‌ ನೆಲದಡಿ ನಿಲ್ದಾಣದಿಂದ ಎತ್ತರಿಸಿದ ಮಾಗಡಿ ರಸ್ತೆ ನಿಲ್ದಾಣದ ವರೆಗೆ ಈಗಾಗಲೇ ಎರಡೂ ಮೆಟ್ರೊ ರೈಲುಗಳು ಪ್ರಯಾಣ ಬೆಳೆಸಿವೆ.

ಆ ಸಂದರ್ಭದಲ್ಲಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ  ಮಾರ್ಗದ ಸಮೀಪದಲ್ಲಿ ಡಿಪೋ ಇರದ ಕಾರಣ ಕಬ್ಬನ್‌ ಪಾರ್ಕ್‌ ನೆಲದಡಿ ಮಾರ್ಗದಿಂದ ರೈಲು ಪ್ರವೇಶಿಸಿತ್ತು. ವಿಧಾನಸೌಧ, ಸೆಂಟ್ರಲ್‌ ಕಾಲೇಜು, ಮೆಜೆಸ್ಟಿಕ್‌, ಸಿಟಿ ರೈಲು ನಿಲ್ದಾಣದ ಮೂಲಕ ಮಾಗಡಿ ರಸ್ತೆ ನಿಲ್ದಾಣದ ವರೆಗೆ ರೈಲು ಕ್ರಮಿಸಿತ್ತು.

ಬಿಎಂಆರ್‌ಸಿಎಲ್‌ ಅಧಿಕಾರಿಗಳ ಪ್ರಕಾರ, ‘ಪರೀಕ್ಷಾರ್ಥ ಓಡಾಟ ಪ್ರಕ್ರಿಯೆ ಮುಗಿಸಲು 3–4 ತಿಂಗಳ ಕಾಲಾವಕಾಶ ಅಗತ್ಯವಿದೆ. ಅದಾದ ನಂತರ ರೈಲ್ವೆ ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ದೊರೆತ ನಂತರ ವಾಣಿಜ್ಯ ಸೇವೆ ಆರಂಭಿಸಲಾಗುತ್ತದೆ’.
ಕಬ್ಬನ್‌ ಪಾರ್ಕ್‌ ನೆಲದಡಿ ನಿಲ್ದಾಣದಲ್ಲಿ ಈಗಾಗಲೇ ಕಟ್ಟಡ ನಿರ್ಮಾಣ ಸೇರಿದಂತೆ ಇತರ ಕಾರ್ಯ ಪೂರ್ಣಗೊಂಡಿದೆ. ಜೊತೆಗೆ ಇತ್ತೀಚಿಗೆ ಕಬ್ಬನ್‌ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ವಿಧಾನಸೌಧ ನಿಲ್ದಾಣದ ಕಾರ್ಯ ಕೂಡ ಮುಗಿಯುವ ಹಂತಕ್ಕೆ ತಲುಪಿದೆ. ವಿಧಾನಸೌಧ ಎದುರಿನ ರಸ್ತೆ ಕೂಡ ಶೀಘ್ರದಲ್ಲೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ಮಧ್ಯೆ ಈಗಾಗಲೇ ಪರೀಕ್ಷಾರ್ಥ ರೈಲು ಓಡಾಟ ನಡೆಯುತ್ತಿದ್ದು, ವಾಣಿಜ್ಯ ಸಂಚಾರಕ್ಕಾಗಿ ಸಿಆರ್‌ಎಸ್‌ನಿಂದ ಅನುಮತಿ ಪಡೆಯಲು ಬಿಎಂಆರ್‌ಸಿಎಲ್‌ ಗಮನ ಕೇಂದ್ರೀಕರಿಸಿದೆ. ಆದರೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಒಂದುವೇಳೆ ಸಿಆರ್‌ಎಸ್‌
ನಿಂದ ಹಸಿರು ನಿಶಾನೆ ಸಿಕ್ಕರೂ ಅದಕ್ಕೆ ಅನಿವಾರ್ಯವಾಗಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.