ADVERTISEMENT

ಕಲ್ಲು ಕ್ವಾರಿಗಳಲ್ಲಿ ಕಸ ವಿಲೇವಾರಿ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 19:46 IST
Last Updated 23 ಸೆಪ್ಟೆಂಬರ್ 2017, 19:46 IST
ಪ್ರತಿಭಟನೆಯಲ್ಲಿ ಪದ್ಮನಾಭ ರೆಡ್ಡಿ ಮಾತನಾಡಿದರು
ಪ್ರತಿಭಟನೆಯಲ್ಲಿ ಪದ್ಮನಾಭ ರೆಡ್ಡಿ ಮಾತನಾಡಿದರು   

ಬೆಂಗಳೂರು: ಯಲಹಂಕ ಸಮೀಪದ ಬೆಲ್ಲಹಳ್ಳಿ, ಕಣ್ಣೂರು, ಸಾತನೂರು ಹಾಗೂ ಬಾಗಲೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕಲ್ಲು ಕ್ವಾರಿಗಳಲ್ಲಿ ಕಸ ಸುರಿಯುತ್ತಿರುವುದನ್ನು ಖಂಡಿಸಿ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತ‌ರು ಹಾಗೂ ಸ್ಥಳೀಯರು ಬೆಲ್ಲಹಳ್ಳಿಯಲ್ಲಿ ಶನಿವಾರ ರಸ್ತೆ ತಡೆನಡೆಸಿ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಮಿಟ್ಟಗಾನಹಳ್ಳಿ, ಕಣ್ಣೂರು, ಕೋಗಿಲು ಬಡಾವಣೆ, ಬೆಲ್ಲಹಳ್ಳಿ, ಶ್ರೀನಿವಾಸಪುರ, ಸಾತನೂರು, ಬಂಡೆಹೊಸೂರು, ಬಾಗಲೂರು, ಚಿಕ್ಕಗುಬ್ಬಿ ಹಾಗೂ ಸುತ್ತಲಿನ ಗ್ರಾಮಗಳ ನಿವಾಸಿಗಳು ಪಾಲ್ಗೊಂಡಿದ್ದರು.

‘ಕಲ್ಲು ಕ್ವಾರಿಗಳಲ್ಲಿ ಒಂದೂವರೆ ವರ್ಷದಿಂದ ಕಸ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಕೆಟ್ಟ ವಾಸನೆ ಬರುತ್ತಿದೆ. ಡೆಂಗಿ, ಚಿಕೂನ್‌ಗುನ್ಯ, ಮಲೇರಿಯಾ, ಚರ್ಮ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಸ್ಥಳೀಯರು ಅಳಲುತೋಡಿಕೊಂಡರು.

ADVERTISEMENT

‘ಕ್ವಾರಿಯಲ್ಲಿ ಕಸ ವಿಲೇವಾರಿ ವಿರೋಧಿಸಿ ಆರಂಭದಿಂದಲೂ ಪ್ರತಿಭಟನೆ ನಡೆಸುತ್ತಿದ್ದೇವೆ. ಜೂನ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಆಗ, ಮೂರು ತಿಂಗಳ ಒಳಗೆ ಕಸದ ಸಮಸ್ಯೆಯನ್ನು ಬಗೆಹರಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್‌ ದೂರಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಎ.ರವಿ, ‘ಬೆಲ್ಲಹಳ್ಳಿಯ ಕಲ್ಲು ಕ್ವಾರಿಗೆ ಪ್ರತಿದಿನ 250 ಲಾರಿಗಳ ಕಸವನ್ನು ಸುರಿಯಲಾಗುತ್ತಿದೆ. ಈ ಕಸವನ್ನು ವಿಂಗಡಣೆ ಮಾಡುತ್ತಿಲ್ಲ. ಇದರಿಂದ ಗ್ರಾಮಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಬಿಬಿಎಂಪಿ ಸದಸ್ಯ ಮುನೀಂದ್ರ ಕುಮಾರ್‌, ‘ಕಸ ವಿಲೇವಾರಿಯಿಂದಾಗಿ ವಿಷಯುಕ್ತ ನೀರು ಬೆಲ್ಲಹಳ್ಳಿ ಹಾಗೂ ಕಣ್ಣೂರು ಕೆರೆಗಳಿಗೆ ಸೇರುತ್ತಿದೆ. ಈ ನೀರನ್ನು ಕುಡಿದು ಕೆಲ ಜಾನುವಾರುಗಳು ಮೃತಪಟ್ಟಿವೆ. ಅಂತರ್ಜಲವೂ ಕಲುಷಿತಗೊಂಡಿದ್ದು, ಕೊಳವೆಬಾವಿಗಳಲ್ಲಿ ವಿಷಯುಕ್ತ ನೀರು ಬರುತ್ತಿದೆ. ಈ ನೀರು ಕುಡಿದ ಜನರು ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ’ ಎಂದು ಅಳಲುತೋಡಿಕೊಂಡರು.

‘ಶಾಸಕರ ಮನೆ ಎದುರು ಕಸ ಸುರಿಯುತ್ತೇವೆ’
‘ಕ್ವಾರಿಯಲ್ಲಿ ಕಸ ವಿಲೇವಾರಿ ಮಾಡುವುದರಿಂದ 2 ಕಿ.ಮೀ. ದೂರದವರೆಗೂ ದುರ್ವಾಸನೆ ಬೀರುತ್ತಿದೆ. ಸುತ್ತಲಿನ ಗ್ರಾಮಸ್ಥರು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ನಿವಾಸಿಗಳು ಗ್ರಾಮಗಳನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಸ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ, ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಅವರ ಮನೆಯ ಎದುರು ಕಸ ಸುರಿದು ಪ್ರತಿಭಟನೆ ನಡೆಸುತ್ತೇವೆ’ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಎಚ್ಚರಿಕೆ ನೀಡಿದರು.

ಗುತ್ತಿಗೆ ಪೌರಕಾರ್ಮಿಕರಿಗೆ ಬೆದರಿಕೆ: ಆರೋಪ
‘ಕೆಲಸ ಮಾಡದಂತೆ ಗುತ್ತಿಗೆ ಪೌರಕಾರ್ಮಿಕರಿಗೆ ಗುತ್ತಿಗೆದಾರರು ಬೆದರಿಕೆ ಹಾಕಿದ್ದಾರೆ’ ಎಂದು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘವು ಆರೋಪಿಸಿದೆ.

ಈ ಕುರಿತು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಸಂಘದ ಪದಾಧಿಕಾರಿಗಳು ದೂರು ನೀಡಿದ್ದಾರೆ.

‘ಶನಿವಾರ ಬೆಳಿಗ್ಗೆ ಕೆಲಸ ಮಾಡಲು ಬಂದ ಕಾರ್ಮಿಕರನ್ನು ತಡೆದ ಗುತ್ತಿಗೆದಾರರು, ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಲು ಹಾಗೂ ವೇತನವನ್ನು ನೇರವಾಗಿ ಪಾವತಿಸಲು ಪಾಲಿಕೆ ಮುಂದಾಗಿದೆ. ಇದರಿಂದ ನಮಗೆ ತೊಂದರೆ ಉಂಟಾಗಲಿದೆ. ನೀವು ಕೆಲಸವನ್ನು ಸ್ಥಗಿತಗೊಳಿಸಿ ಮನೆಗೆ ತೆರಳುವಂತೆ ಸೂಚಿಸಿದ್ದಾರೆ’ ಎಂದು ಸಂಘದ ಅಧ್ಯಕ್ಷ ಕ್ಲಿಫ್ಟನ್‌ ರೊಜಾರಿಯೊ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋರಮಂಗಲ, ಆಡುಗೋಡಿ, ವಸಂತನಗರ, ವಿಜ್ಞಾನನಗರ, ಗರುಡಾಚಾರ್‌ಪಾಳ್ಯ, ಹೆಗ್ಗನಹಳ್ಳಿ, ಚೊಕ್ಕಸಂದ್ರ, ಶೆಟ್ಟಿಹಳ್ಳಿ, ಟಿ.ದಾಸರಹಳ್ಳಿಯಲ್ಲಿ ಗುತ್ತಿಗೆದಾರರು ಹಾಗೂ ಮೇಸ್ತ್ರಿಗಳು ಪೌರಕಾರ್ಮಿಕರಿಗೆ ಬೆದರಿಕೆ ಹಾಕಿದ್ದಾರೆ. ಆದರೆ, ಇದನ್ನು ಲೆಕ್ಕಿಸದ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದು ಹೇಳಿದರು.

‘ಗುತ್ತಿಗೆ ಪದ್ಧತಿಯನ್ನು ಕೂಡಲೇ ರದ್ದುಪಡಿಸಬೇಕು. ಗುತ್ತಿಗೆ ಪೌರಕಾರ್ಮಿಕರಿಗೆ ರಕ್ಷಣೆ ನೀಡಬೇಕು. ಇದರಿಂದ ಅವರು ನಿರ್ಭಯವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಗುತ್ತಿಗೆದಾರರಿಗೆ ನೀಡಿರುವ ಕಾರ್ಯಾದೇಶಗಳನ್ನು ಕೂಡಲೇ ರದ್ದುಪಡಿಸಬೇಕು. ಕಾರ್ಮಿಕರಿಗೆ ದೌರ್ಜನ್ಯ ಹಾಗೂ ಕಿರುಕುಳ ನೀಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.