ADVERTISEMENT

ಕಳವು ಪತ್ತೆಗೆ ಜಲಮಂಡಳಿ ನಿರಾಸಕ್ತಿ

ಲೆಕ್ಕಕ್ಕೆ ಸಿಗದ ಕಾವೇರಿ ನೀರು: ‘ಪಬ್ಲಿಕ್‌ ಅಫೇರ್ಸ್‌ ಸೆಂಟರ್‌’ ಸಮೀಕ್ಷೆಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 19:46 IST
Last Updated 27 ಜುಲೈ 2016, 19:46 IST
ಕಳವು ಪತ್ತೆಗೆ ಜಲಮಂಡಳಿ ನಿರಾಸಕ್ತಿ
ಕಳವು ಪತ್ತೆಗೆ ಜಲಮಂಡಳಿ ನಿರಾಸಕ್ತಿ   

ಬೆಂಗಳೂರು: ನಗರಕ್ಕೆ ಪೂರೈಕೆಯಾಗುತ್ತಿರುವ ಕಾವೇರಿ ನೀರಿನಲ್ಲಿ ಶೇ 48ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ಆದರೆ, ನೀರಿನ ಕಳವು ಪತ್ತೆಗೆ ಜಲಮಂಡಳಿ ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಜಲಮಂಡಳಿ ಸೇವೆ, ಕಾರ್ಯದಕ್ಷತೆ ಅಳೆಯಲು ಸ್ವಯಂಸೇವಾ ಸಂಘಟನೆ ‘ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ (ಪಿಎಸಿ)’  ನಡೆಸಿದ ಸಮೀಕ್ಷೆಯಿಂದ ಈ ಅಂಶ ಬಹಿರಂಗಗೊಂಡಿದೆ. ನಗರದಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರು ಪೋಲು ಆಗುತ್ತಿದೆ. ಆದರೆ, ಶೇ 80 ಸಿಬ್ಬಂದಿ ನೀರಿನ ಕಳವನ್ನು ಪರಿಶೀಲನೆ ನಡೆಸುತ್ತಿಲ್ಲ ಎಂದು ಬೊಟ್ಟು ಮಾಡಿದೆ. ಜಲಮಂಡಳಿಯ 9 ವಿಭಾಗಗಳ 2,057 ಬಳಕೆದಾರರನ್ನು ಭೇಟಿ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ.

ನೀರಿನ ಕಳವು ತಡೆಗಟ್ಟಲು ಕ್ಷೇತ್ರ ವಿಭಾಗದ ಸಿಬ್ಬಂದಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ನೀರು ಕಳವು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ನೀರಿನ ಅದಾಲತ್‌ನ ಅರಿವಿಲ್ಲ: ಜಲಮಂಡಳಿ ನಡೆಸುವ ನೀರಿನ ಅದಾಲತ್‌ಗಳ ಬಗ್ಗೆ ಶೇ 94 ಮಂದಿಗೆ ಅರಿವಿಲ್ಲ. ಶೇ 3 ಮಂದಿ ಮಾತ್ರ ಜಲಮಂಡಳಿ ವೆಬ್‌ಸೈಟ್‌ ವೀಕ್ಷಿಸಿದ್ದಾರೆ.  ಜನರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲು ಮಂಡಳಿ ಸಾಮಾಜಿಕ ಜಾಲ ತಾಣಗಳ ಬಳಕೆ ಮಾಡಬೇಕು ಎಂದು ಪಿಎಸಿ ತಿಳಿಸಿದೆ.

ನೀರಿನ ಸಂಪರ್ಕಕ್ಕೆ ದುಪ್ಪಟ್ಟು ದರ: ಪ್ರತಿಕ್ರಿಯೆ ನೀಡಿದ 2,057 ಜನರ ಪೈಕಿ 79 ಮಂದಿ ಮಾತ್ರ ನೀರಿನ ಹೊಸ ಸಂಪರ್ಕ ಪ್ರಕ್ರಿಯೆಯಲ್ಲಿ ಸ್ವತಃ ಭಾಗಿಯಾಗಿದ್ದಾರೆ. ಶೇ 96 ಬಳಕೆದಾರರು  ಪರವಾನಗಿ ಪಡೆದ ಪ್ಲಂಬರ್‌ಗಳ ನೆರವಿನಿಂದ ನೀರಿನ ಹೊಸ ಸಂಪರ್ಕ ಪಡೆದಿದ್ದಾರೆ. ಇದಕ್ಕಾಗಿ ದುಪ್ಪಟ್ಟು ದರ ಪಾವತಿಸಿದ್ದಾರೆ.

ಅರ್ಜಿ ಸಲ್ಲಿಸಿದ ವಾರದೊಳಗೆ ನೀರಿನ ಸಂಪರ್ಕ ನೀಡಲಾಗುತ್ತದೆ ಎಂದು ಜಲಮಂಡಳಿ ಪದೇ ಪದೇ ಹೇಳುತ್ತಿದೆ. ಆದರೆ, ಸಂಪರ್ಕ ಪಡೆಯಲು ಸರಾಸರಿ 21 ದಿನ ಬೇಕಿದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ಲಂಬರ್‌ಗಳ ನೆರವು ಪಡೆಯದೆ ನೀರಿನ ಸಂಪರ್ಕ ಪಡೆಯಲು ಸುಲಭ ವಿಧಾನಗಳ ಬಗ್ಗೆ ಮಂಡಳಿ ಜಾಗೃತಿ ಮೂಡಿಸಬೇಕು. ಇದಕ್ಕೆ ಉಚಿತ ಸಹಾಯವಾಣಿ ಆರಂಭಿಸಬೇಕು ಹಾಗೂ  ಇದರ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು ಎಂದೂ ತಿಳಿಸಿದೆ.

ಮಳೆ ನೀರು ಸಂಗ್ರಹಕ್ಕೆ ನಿರಾಸಕ್ತಿ:  ಬಹುತೇಕ ನಿವಾಸಿಗಳು (ಶೇ 96) ಮಳೆ ನೀರು  ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಂಡಿಲ್ಲ. ಈ ಘಟಕ ನಿರ್ಮಾಣಕ್ಕೆ ₹11,121 ವೆಚ್ಚ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಭಾವಿಗಳಿಂದ ಹಸ್ತಕ್ಷೇಪ: ಮಂಡಳಿಯ ಸಿಬ್ಬಂದಿಯ ಸಮಸ್ಯೆಗಳ ಬಗ್ಗೆಯೂ ಸಮೀಕ್ಷೆ ಬೆಳಕು ಚೆಲ್ಲಿದೆ. ಕೆಲಸದಲ್ಲಿ ಪ್ರಭಾವಿ ವ್ಯಕ್ತಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶೇ 66 ಸಿಬ್ಬಂದಿ ತಿಳಿಸಿದ್ದಾರೆ. ಇವರಲ್ಲಿ ಸ್ಥಳೀಯ ರಾಜಕಾರಣಿಗಳು (ಶೇ 71), ರಾಜಕಾರಣಿಗಳ ಚೇಲಾಗಳು (ಶೇ 66),  ಸ್ಥಳೀಯ ಪ್ರಭಾವಿ ವ್ಯಕ್ತಿಗಳು (ಶೇ 58),  ಜಲಮಂಡಳಿ ಅಧಿಕಾರಿಗಳು (ಶೇ 25) , ಇತರ ಇಲಾಖೆಗಳ ಅಧಿಕಾರಿಗಳು (ಶೇ 10) ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಸಿಬ್ಬಂದಿ ಕೊರತೆ:  ಸಿಬ್ಬಂದಿ ಕೊರತೆಯು ಮಂಡಳಿಯ ಕಾರ್ಯದಕ್ಷತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಮಂಡಳಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಸಹಾಯಕ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌, ವಾಲ್ವ್‌ಮೆನ್‌, ಮೀಟರ್‌ ರೀಡರ್‌, ಸ್ವಚ್ಛತಾ ಕೆಲಸಗಾರರ ಕೊರತೆ ಇದೆ ಎಂದು ತಿಳಿಸಿದೆ.

ಸಮೀಕ್ಷೆಯಲ್ಲಿ ಇರುವುದೇನು
* ಆಗ್ನೇಯ ವಿಭಾಗದ ಶೇ47ರಷ್ಟು ಬಳಕೆದಾರರು ನೀರಿನ ಗುಣಮಟ್ಟದ ಬಗ್ಗೆ ಭಾಗಶಃ ತೃಪ್ತಿ.

* ಉತ್ತರ ವಿಭಾಗದ ಶೇ50ರಷ್ಟು ಬಳಕೆದಾರರು ನೀರಿನ ಪೂರೈಕೆ ಪ್ರಮಾಣದ ಕುರಿತು ಅತೃಪ್ತಿ.

* ವಾಯವ್ಯ ವಿಭಾಗದ ಶೇ33ರಷ್ಟು ಬಳಕೆದಾರರು ನೀರಿನ ಸಂಪರ್ಕದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕಷ್ಟ ಎಂದು ಭಾವಿಸಿದ್ದಾರೆ. ಪೂರ್ವ, ಪಶ್ಚಿಮ, ದಕ್ಷಿಣ ಹಾಗೂ ನೈರುತ್ಯ ವಿಭಾಗದ ಬಳಕೆದಾರರು ಈ ಪ್ರಕ್ರಿಯೆ ಸುಲಭವಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಅಂಕಿ ಅಂಶಗಳು

2,057
-ಬಳಕೆದಾರರ ಸಂದರ್ಶನ

65% 
-ಕಾವೇರಿ ನೀರನ್ನು ಮುಖ್ಯ ನೀರಿನ ಮೂಲವಾಗಿ ಬಳಕೆ

20% 
-ಸಾರ್ವಜನಿಕ ಕೊಳಾಯಿ ಬಳಕೆ

7%
-ಕೊಳವೆಬಾವಿಗಳ ಬಳಕೆ

% 4
-ಟ್ಯಾಂಕರ್‌ ನೀರು ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.