ADVERTISEMENT

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಮುಂದುವರಿಕೆ ಖಾತ್ರಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2016, 20:08 IST
Last Updated 25 ಸೆಪ್ಟೆಂಬರ್ 2016, 20:08 IST
ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಮುಂದುವರಿಕೆ ಖಾತ್ರಿ
ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಮುಂದುವರಿಕೆ ಖಾತ್ರಿ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಅವಧಿಗೆ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಆಡಳಿತ ಮುಂದುವರಿಸಲು ಉಭಯ ಪಕ್ಷಗಳ ನಾಯಕರ ಸಭೆ ಸರ್ವಸಮ್ಮತ ತೀರ್ಮಾನಕ್ಕೆ ಬಂದಿದೆ.

ಕೊನೆ ಗಳಿಗೆಯಲ್ಲಿ ಜೆಡಿಎಸ್‌ನ ಭಿನ್ನಮತೀಯ ಶಾಸಕರು ಹಾಗೂ ಅವರ ಬೆಂಬಲಿಗ ಪಾಲಿಕೆ ಸದಸ್ಯರು ಹಿಂದೆ ಸರಿದಿದ್ದರಿಂದಾಗಿ ಅವರ ಬಲ ನೆಚ್ಚಿಕೊಂಡು  ಅಧಿಕಾರ ಹಿಡಿಯುವ ಸನ್ನಾಹ ನಡೆಸಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ. 

ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸಂಜೆ ನಡೆದ ಒಂದೂವರೆ ಗಂಟೆಯ ಮಾತುಕತೆಯಲ್ಲಿ ಮೈತ್ರಿ ಮುಂದುವರಿಸಿಕೊಂಡು ಹೋಗಲು ಕಾಂಗ್ರೆಸ್–ಜೆಡಿಎಸ್ ನಾಯಕರು ಒಪ್ಪಿದ್ದಾರೆ.

ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮೈತ್ರಿ ಮಾತುಕತೆಯಲ್ಲಿ ಭಾಗಿಯಾಗಿದ್ದರು.

ಸಭೆ ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿದ ಎರಡೂ ಪಕ್ಷಗಳ ನಾಯಕರು ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಸ್ಥಾಯಿ ಸಮಿತಿ ಗೊಂದಲ: ಈಗ ಇರುವಂತೆಯೇ ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ಹಾಗೂ ಉಪಮೇಯರ್‌ ಸ್ಥಾನ ಜೆಡಿಎಸ್‌ಗೆ ನೀಡಲು ಎರಡೂ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದಾರೆ.

‘ಮೇಯರ್‌ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ನಮ್ಮ ಪಕ್ಷದ ಆಯ್ಕೆಯನ್ನು ಕಾಂಗ್ರೆಸ್‌ ನಾಯಕರಿಗೆ ತಿಳಿಸಿದ್ದೇನೆ. ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನಿಸುವುದಾಗಿ ಅವರು ತಿಳಿಸಿದ್ದಾರೆ’ ಎಂದು ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವರ್ಷದ ಹಿಂದೆ ಮೈತ್ರಿ ಒಪ್ಪಂದವಾದ ಒಟ್ಟು 12 ಸ್ಥಾಯಿ ಸಮಿತಿಗಳ ಪೈಕಿ  ಐದು ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಹೇಳಲಾಗಿತ್ತು. ಪಕ್ಷದ ಪಾಲಿಕೆ ಸದಸ್ಯರ ಬೇಡಿಕೆಯನ್ನು ಅವರಿಗೆ ತಿಳಿಸಿದ್ದೇನೆ’ ಎಂದರು.

‘ನಗರದ ಅಭಿವೃದ್ಧಿಯ ದೃಷ್ಟಿಯಿಂದ ನಿರ್ಣಯ ಕೈಗೊಳ್ಳುವಾಗ ನಮ್ಮ ಪಕ್ಷದ ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕು. ಕೆಲವು ಶಾಸಕರು ನಮ್ಮ ಪಾಲಿಕೆ ಸದಸ್ಯರಿಗೆ ಕಿರುಕುಳ ನೀಡುವುದನ್ನು ನಿಲ್ಲಬೇಕು. ಆದ್ಯತೆ ಮೇರೆಗೆ ಅನುದಾನ ನೀಡಬೇಕು’ ಎಂಬ ಬೇಡಿಕೆ ಮಂಡಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

‘ಮೈತ್ರಿ ಮುಂದುವರಿಸಲು ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದಾರೆ. ಮೇಯರ್‌ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲು ಜೆಡಿಎಸ್‌ ಬಹುತೇಕ ಒಪ್ಪಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಲ್ಲಿ ಎಷ್ಟನ್ನು ಜೆಡಿಎಸ್‌ಗೆ ನೀಡಬೇಕು ಎಂಬ ಬಗ್ಗೆ ಪಕ್ಷದ ನಾಯಕರ ಜತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತೆರೆಮರೆಗೆ ಭಿನ್ನರು: ಮೈತ್ರಿ ಮುಂದುವರಿಯಲು ನಮ್ಮ ಬಲವೇ ನಿರ್ಣಾಯಕ ಎಂದು ಘೋಷಿಸಿದ್ದ ಜೆಡಿಎಸ್‌ನ ಭಿನ್ನಮತೀಯ ಶಾಸಕರಾದ ಜಮೀರ್‌ ಅಹಮದ್‌, ಕೆ. ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ ತೆರೆಮರೆಗೆ ಸರಿದಿದ್ದಾರೆ. ಕಾಂಗ್ರೆಸ್‌ ಜತೆ ಮೈತ್ರಿ ಬಿಟ್ಟು ಬಿಜೆಪಿ ಜತೆಗೆ ಹೋದರೆ ಅಭಿವೃದ್ಧಿಯ ಅನುದಾನ, ಕಾವೇರಿ ನೀರಿಲ್ಲದ ಸಂಕಷ್ಟದ ಸ್ಥಿತಿಯಲ್ಲಿ ರಾಜ್ಯ ಸರ್ಕಾರದಿಂದ ಸಹಾಯ ಸಿಗದೇ ಹೋಗಬಹುದು ಎಂಬ ಆತಂಕವೇ ತಟಸ್ಥ ನೀತಿಗೆ ಕಾರಣ ಎಂದು ಭಿನ್ನರ ಬಣದ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರ, ಬಿಬಿಎಂಪಿಯಲ್ಲಿ  ಆಡಳಿತದಲ್ಲಿದ್ದರೆ ಮಾತ್ರ ಇಂತಹ ಸಂಕಷ್ಟದ ಕಾಲದಲ್ಲಿ ನೆರವಿಗೆ ಬರಲಿದೆ. ಇಲ್ಲದೆ ಇದ್ದರೆ ನಿರ್ಲಿಪ್ತ ಧೋರಣೆ ಅನುಸರಿಸಬಹುದು. ಸರ್ಕಾರ ನೆರವಿಗೆ ಬರದಿದ್ದರೆ ಕ್ಷೇತ್ರದ ಜನರನ್ನು ಎದುರಿಸಲಾಗದ ಸ್ಥಿತಿ ಬಂದೊದಗಲಿದೆ. ಈ ಕಾರಣಕ್ಕೆ ತಟಸ್ಥ ಧೋರಣೆ ಅನುಸರಿಸಲು ನಿರ್ಧರಿಸಿದೆವು ಎಂದು ಅವರು ತಿಳಿಸಿದರು.

ಹಿಂದಡಿ ಇಟ್ಟ ಬಿಜೆಪಿ: ಜೆಡಿಎಸ್‌, ಪಕ್ಷೇತರ ಶಾಸಕರ ಬಲದಿಂದ ಅಧಿಕಾರ ಹಿಡಿಯಲು ಯತ್ನ ನಡೆಸಿದ್ದ ಬಿಜೆಪಿ ಕೊನೆಗಳಿಗೆಯಲ್ಲಿ ಕೈಚೆಲ್ಲಿದೆ. ಕಾವೇರಿ ನೀರಿಲ್ಲದೇ ಇರುವುದು, ಕಸದ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕಾಲದಲ್ಲಿ ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಏರಿದರೆ ಸರ್ಕಾರ ನೆರವಿಗೆ ಬರುವುದಿಲ್ಲ. ಅಧಿಕಾರ ಹಿಡಿದು ಒಳ್ಳೆಯ ಆಡಳಿತ ನೀಡದೇ ಇದ್ದರೆ 2018ರ ಮಾರ್ಚ್‌–ಏಪ್ರಿಲ್‌ನಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಪಕ್ಷಕ್ಕೆ ಅಪ್ಪಳಿಸಲಿದೆ. ಭವಿಷ್ಯದ ಅನುಕೂಲತೆ ದೃಷ್ಟಿಯಿಂದ ಬಿಬಿಎಂಪಿಯಲ್ಲಿ ವಿರೋಧ ಪಕ್ಷವಾಗಿದ್ದರೆ ಲಾಭಕರ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ ಎನ್ನಲಾಗಿದೆ. ‘ಯಾವುದೇ ಹೊತ್ತಿನಲ್ಲಿ ಕೈ ಕೊಡಬಹುದಾದ ದೇವೇಗೌಡರ ಪಕ್ಷದ ಜತೆಗೆ ಮೈತ್ರಿಗೆ ಮುಂದಾಗಿ, ಕೈ ಸುಟ್ಟುಕೊಳ್ಳುವುದಕ್ಕಿಂತ ವಿರೋಧ ಪಕ್ಷವಾಗಿದ್ದರೆ ಹೆಚ್ಚು ಅನುಕೂಲ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ಸಲಹೆ ಸಹ ಬಿಜೆಪಿ ಹಿಂದೇಟು ಹಾಕಲು ಕಾರಣ ಎನ್ನಲಾಗಿದೆ.

* ಉಪಮೇಯರ್‌ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂದು ಮಂಗಳವಾರ ನಡೆಯಲಿರುವ ಪಾಲಿಕೆ ಸದಸ್ಯರ ಸಭೆಯಲ್ಲಿ ನಿರ್ಧರಿಸುತ್ತೇವೆ
–ಎಚ್.ಡಿ. ಕುಮಾರಸ್ವಾಮಿ
ಜೆಡಿಎಸ್‌ ರಾಜ್ಯ ಘಟದ ಅಧ್ಯಕ್ಷ

* ಮೈತ್ರಿ ಮುಂದುವರಿಯುವುದು ಸುಸೂತ್ರವಾಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ
–ದಿನೇಶ ಗಂಡೂರಾವ್‌
ಕಾರ್ಯಾಧ್ಯಕ್ಷ, ಕೆಪಿಸಿಸಿ

* ಮೈತ್ರಿಯ ಮಾತುಕತೆ ಫಲಪ್ರದ. ಜೆಡಿಎಸ್‌ ಮುಂದಿಟ್ಟಿರುವ ಬೇಡಿಕೆ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಣಯಿಸುತ್ತೇವೆ
–ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.