ADVERTISEMENT

ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಯಶಸ್ವಿ ಆಗದು: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:07 IST
Last Updated 23 ಏಪ್ರಿಲ್ 2017, 20:07 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಯಶಸ್ವಿ ಆಗುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಮಲಾ ಗೌಡರ ಶ್ರದ್ಧಾಂಜಲಿ ಸಭೆ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಇತ್ತೀಚೆಗೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಮೈತ್ರಿ ಸಂಬಂಧ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರದಲ್ಲಿಯೇ ಭೇಟಿ ಮಾಡುವ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.

‘ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಿತ್ತ ನೆತ್ತಿಗೇರಿದೆ. ಕಾಂಗ್ರೆಸ್‌ ಪಕ್ಷದಲ್ಲಿಯೇ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿಕೊಳ್ಳುವ ಬದಲು ಬಿಜೆಪಿಯ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಣೆಯಾದ ಬಗ್ಗೆ ದೂರು: ಶೋಭಾ ಆಕ್ರೋಶ
ಉಡುಪಿ– ಚಿಕ್ಕಮಗಳೂರು ಕ್ಷೇತ್ರಕ್ಕೆ ಭೇಟಿ ನೀಡದೆ ತಾವು ಕಾಣೆಯಾಗಿದ್ದಾರೆ ಎಂದು ಕೊಪ್ಪ ಬ್ಲಾಕ್‌ ಕಾಂಗ್ರೆಸ್‌ ಸದಸ್ಯರೊಬ್ಬರು ಪೊಲೀಸ್‌ ಠಾಣೆಗೆ ದೂರು ನೀಡಿರುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

‘ಕಿಡಿಗೇಡಿಗಳು ರಾಜಕೀಯ ಪ್ರೇರಿತವಾಗಿ ಇಂತಹ ದೂರು ನೀಡಿದ್ದಾರೆ. ನಾನು ಎಲ್ಲೂ ಕಾಣೆಯಾಗಿಲ್ಲ. ಕ್ಷೇತ್ರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ನನಗೆ ಕೆಲವು ಜವಾಬ್ದಾರಿ ನೀಡಲಾಗಿತ್ತು. ಅದರ ಮಧ್ಯೆಯೂ ಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.