ADVERTISEMENT

ಕಾನ್‌ಸ್ಟೆಬಲ್‌- ವೈದ್ಯ ಜಗಳ ದೂರು, ಪ್ರತಿ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:54 IST
Last Updated 8 ಫೆಬ್ರುವರಿ 2016, 19:54 IST

ಬೆಂಗಳೂರು: ಪೀಣ್ಯ ಠಾಣೆ ಕಾನ್‌ಸ್ಟೆಬಲ್ ಮತ್ತು ಖಾಸಗಿ ನರ್ಸಿಂಗ್ ಹೋಂ ವೈದ್ಯರು, ಜಗಳವಾಡಿಕೊಂಡಿರುವ ಘಟನೆ ಪೀಣ್ಯ ಸಮೀಪದ ಕಿರ್ಲೋಸ್ಕರ್ ಕಾಲೊನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆ ಸಂಬಂಧ ಕಾನ್‌ಸ್ಟೆಬಲ್ ಮಂಜುನಾಥ್ ಮತ್ತು ವೈದ್ಯ ಇಕ್ಬಾಲ್ ಇಬ್ಬರೂ ಪೀಣ್ಯ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದಾರೆ.

ಸರಗಳವು ಆರೋಪಿಗಳ ಪತ್ತೆಗಾಗಿ  ರಾತ್ರಿ 11.30ರ ಸುಮಾರಿಗೆ  ಮಂಜುನಾಥ್  ಗಸ್ತು ತಿರುಗುತ್ತಿದ್ದರು. ಆಗ ಬೈಕ್‌ನಲ್ಲಿ ಅಲ್ಲಿಗೆ ಬಂದ ಇಕ್ಬಾಲ್ ಮತ್ತು ಅವರ ಸ್ನೇಹಿತ ಮನೀಶ್‌ ಅವರನ್ನು  ತಡೆದ ಮಂಜುನಾಥ್, ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಕೋಪಗೊಂಡ ಇಕ್ಬಾಲ್, ಮಂಜುನಾಥ್ ಅವರೊಂದಿಗೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆಗೆ ಇನ್‌ಸ್ಪೆಕ್ಟರ್ ಸ್ಥಳಕ್ಕೆ ಬರುತ್ತಿದ್ದಂತೆ ಇಕ್ಬಾಲ್ ಸ್ನೇಹಿತನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ. ನಂತರ ಮಂಜುನಾಥ್ ವೈದ್ಯನ ವಿರುದ್ಧ  ದೂರು ಕೊಟ್ಟಿದ್ದಾರೆ. ಅಲ್ಲದೆ, ಮಾರನೆಯ ದಿನ ಬೆಳಿಗ್ಗೆ ಠಾಣೆಗೆ ಬಂದ ಇಕ್ಬಾಲ್ ಕೂಡ, ಪ್ರತಿ ದೂರು ದಾಖಲಿಸಿದ್ದಾರೆ.

ಅಲ್‌ ಅಮೀನ್ ಕಾಲೇಜಿನಲ್ಲಿ ನರ್ಸಿಂಗ್ ಓದಿರುವ ಇಕ್ಬಾಲ್, ಬಾಗಲಗುಂಟೆಯ ನರ್ಸಿಂಗ್‌ ಹೋಂನಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಿ ವರದಿ ಕೊಡುವಂತೆ ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಅವರಿಗೆ ಸೂಚಿಸ
ಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ವಿಭಾಗದ ಡಿಸಿಪಿ ಟಿ.ಆರ್. ಸುರೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.