ADVERTISEMENT

ಕೂಪ ದಾಟಿದ ಮಂಡೂಕ ವಾಣಿ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 20:24 IST
Last Updated 19 ಏಪ್ರಿಲ್ 2015, 20:24 IST

ಬೆಂಗಳೂರು: ನೀರು ತೊಟ್ಟಿಕ್ಕಿದಂತೆ ಒಂದೇ ಸಮನೆ ತಟ ತಟ ಎನ್ನುವ ಸಪ್ಪಳ. ಅದರ ಬೆನ್ನಹಿಂದೆಯೇ ಗಿರಿಗಿಟ್ಲೆ ನಾದ. ಅದೂ ಕ್ಷೀಣವಾದಾಗ ಪಕ್ಷಿಯ ಹಾಡಿನ ಸದ್ದು!

ಪಶ್ಚಿಮ ಘಟ್ಟದ ಕಪ್ಪೆಗಳು ಅದು ಎಷ್ಟೊಂದು ತರಹದ ಕೂಗು ಹಾಕುತ್ತವೆ ಎನ್ನುವುದಕ್ಕೆ ‘ಮಂಡೂಕವಾಣಿ’ ಧ್ವನಿ ಮುದ್ರಿಕೆ ಸಾಕ್ಷ್ಯ ಹೇಳುತ್ತಿತ್ತು. ಗುಬ್ಬಿ ಲ್ಯಾಬ್ಸ್‌ ಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಈ ವಿಶಿಷ್ಟ ಧ್ವನಿಮುದ್ರಿಕೆ ಸಿ.ಡಿಯನ್ನು ಬಿಡುಗಡೆ ಮಾಡಲಾಯಿತು.

ಪಶ್ಚಿಮ ಘಟ್ಟವು ಉಭಯಚರಗಳ ತಾಣವಾಗಿದ್ದು, ನೂರಾರು ವಿಧದ ಕಪ್ಪೆಗ ಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಅವುಗಳಲ್ಲಿ 72 ವಿಧದ ಕಪ್ಪೆಗಳ ಧ್ವನಿಯನ್ನು ನಾಲ್ವರು ಉಭಯಚರ ಪ್ರೇಮಿಗಳ ತಂಡ ಹೆಕ್ಕಿ ತಂದಿದೆ.

ಮುಂಗಾರು ಮಳೆಯಲ್ಲಿ ಈ ಕಪ್ಪೆಗಳ ಗದ್ದಲ ಹೆಚ್ಚು. ಅವುಗಳು ‘ಗೊಟರ್‌, ಗೊಟರ್‌’ ಎಂದು ಕೂಗು ಹಾಕುವುದು ಸಾಮಾನ್ಯ. ಆದರೆ, ಪಶ್ಚಿಮ ಘಟ್ಟದ ಒಂದೊಂದು ವಿಧದ ಕಪ್ಪೆಯೂ ಒಂದೊಂದು ತರಹದ ಸದ್ದು ಹೊರಡಿಸುವ ಮೂಲಕ ಗಮನ ಸೆಳೆಯುತ್ತವೆ. ಉದಾಹರಣೆಗೆ ‘ಜೋಗ್‌ ನೈಟ್‌’ ಕಪ್ಪೆ ಪಕ್ಷಿಯಂತೆ ಹಾಡುತ್ತದೆ!

ಜಾತ್ರೆಯಲ್ಲಿ ಮಕ್ಕಳ ಕೈಗೆ ಸಿಗುವ ಗಿರಿಗಿಟ್ಲೆ ಆಟಿಕೆಯಂತೆ ಮತ್ತೊಂದು ಕಪ್ಪೆ ಕೂಗು ಹಾಕುತ್ತದೆ. ಅವುಗಳ ಕೂಗಿನಿಂದಲೇ ಈ ಕಪ್ಪೆ ಇಂತಹ ವಿಧಕ್ಕೆ ಸೇರಿದ್ದು ಎನ್ನುವುದನ್ನು ಗುರುತಿಸ ಬಹು ದಾಗಿದೆ. ‘ಮಂಡೂಕವಾಣಿ’ಯನ್ನು ಸೆರೆ ಹಿಡಿದವರಲ್ಲಿ ಒಬ್ಬರಾದ ಕೆ.ವಿ.ಗುರು ರಾಜ್‌ ಕಪ್ಪೆಗಳ ಕೂಗಿನ ಕುರಿತು ಇಂತಹ ಮಾಹಿತಿ ಹೇಳುತ್ತಾ ಹೋದಂತೆ ಸಭೆಯಲ್ಲಿ ನೆರೆದವರೆಲ್ಲ ತದೇಕ ಚಿತ್ತದಿಂದ ಕೇಳುತ್ತಿದ್ದರು.
‘ಗಂಡು ಕಪ್ಪೆ ‘ನಾನಿಲ್ಲಿರುವೆ’ ಎಂದು ಸಾರಲು ಕೂಗು ಹಾಕಿದರೆ, ಹೆಣ್ಣು ಕಪ್ಪೆ ‘ಕೂಡುವ ಆಹ್ವಾನ’ ನೀಡಲು ಪ್ರತಿಧ್ವನಿ ಹೊರಡಿಸುತ್ತದೆ. ಮಿಲನ ಮುಗಿದಾಗಲೂ ಅವುಗಳು ಸದ್ದು ಹೊರಡಿಸುತ್ತವೆ. ಕೆಲವೊಮ್ಮೆ ಹೆಣ್ಣು ಕಪ್ಪೆ ಖಿನ್ನತೆಯಲ್ಲಿ ರುವುದು ಅದರ ಕೂಗಿನಿಂದಲೇ ಗೊತ್ತಾ ಗುತ್ತದೆ’ ಎಂದು ಗುರುರಾಜ್‌ ಮಂಡೂಕ ವಾಣಿ ಚರಿತ್ರೆಯನ್ನು ತೆರೆದಿಟ್ಟರು.

‘ಕಪ್ಪೆಗಳು ಕೂಗಲು ಹೆಚ್ಚಿನ ಶಕ್ತಿ ಹಾಕುತ್ತವೆ. ಶ್ವಾಸಕೋಶದಿಂದ ಅವುಗಳು ಗಾಳಿಯನ್ನು ಕತ್ತಿನ ಕೆಳಗಿರುವ ಬಲೂನಿಗೆ ಕಳಿಸುತ್ತವೆ. ಅಲ್ಲಿಂದಲೇ ಸದ್ದು ಹೊರಡುತ್ತದೆ’ ಎಂದು ಕುತೂಹಲ ಹೆಚ್ಚಿಸಿದರು. ಜಗತ್ತಿನಲ್ಲಿ 7,364 ವಿಧದ ಉಭಯಚರಗಳಿದ್ದು, ಅದರಲ್ಲಿ ಭಾರತ 384 ಉಭಯಚರಗಳಿಗೆ ಆಶ್ರಯ ನೀಡಿದೆ ಎಂಬ ಮಾಹಿತಿಯನ್ನೂ ಅವರು ನೀಡಿದರು.

ರಮ್ಯಾ ಬದರಿನಾಥ್‌, ಕೆ.ಎಸ್‌. ಶೇಷಾದ್ರಿ ಮತ್ತು ಎಸ್‌.ರಮಿತ್‌ ಅವರು ಪಶ್ಚಿಮ ಘಟ್ಟದ ಮುಂಗಾರು ಮಳೆಯಲ್ಲಿ ಮರಗಳ ಮೇಲೆ ಏರಿ ಕುಳಿತು ಕಪ್ಪೆಗಳ ಕೂಗನ್ನು ಮುದ್ರಿಸಿಕೊಂಡ ಅನುಭವ ಕಥನವನ್ನು ರಸವತ್ತಾಗಿ ಬಣ್ಣಿಸಿದರು. ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎಸ್‌. ಸುಬ್ರಹ್ಮಣ್ಯ ಸಿ.ಡಿ ಬಿಡುಗಡೆ ಮಾಡಿದರು.

ಕಪ್ಪೆಗಳ ಕುರಿತು ರಮ್ಯಾ ಅವರ ಕಂಠದ ವಿವರಣೆ ಜತೆಗೆ ಥರಾವರಿ ಕಪ್ಪೆಗಳ ಸದ್ದನ್ನೂ ಈ ಸಿ.ಡಿಯಿಂದ ಕೇಳಬಹುದು. ಸಿ.ಡಿ ಬೆಲೆ ₨ 250 ಆಗಿದ್ದು, ಅಮೆಜಾನ್‌ ಸಂಸ್ಥೆಯ ಮೂಲಕ ಆನ್‌ಲೈನ್‌ನಲ್ಲೇ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.