ADVERTISEMENT

ಕೆಂಗೇರಿ ಕೆರೆ ಆಗಲಿದೆ ಚಟುವಟಿಕೆ ತಾಣ

ವಿಹಾರ ಪಥ, ಬೋಟಿಂಗ್‌, ಮಕ್ಕಳ ಆಟದ ಸ್ಥಳ, ವಿಶ್ರಾಂತಿ ಸೌಲಭ್ಯ

ಪ್ರವೀಣ ಕುಮಾರ್ ಪಿ.ವಿ.
Published 19 ಜುಲೈ 2017, 20:20 IST
Last Updated 19 ಜುಲೈ 2017, 20:20 IST
ಗ್ರಾಫಿಕ್ಸ್‌: ಶಶಿಧರ ಹಳೇಮನಿ
ಗ್ರಾಫಿಕ್ಸ್‌: ಶಶಿಧರ ಹಳೇಮನಿ   

ಬೆಂಗಳೂರು: ಕೆಂಗೇರಿ ಕೆರೆಯನ್ನು ಸಾಮಾಜಿಕ ಹೊಣೆಗಾರಿಕೆ ಅಡಿ ಅಭಿವೃದ್ಧಿ ಪಡಿಸಲಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌), ಈ ಪ್ರದೇಶವನ್ನು ಚಟುವಟಿಕೆಯ ತಾಣವನ್ನಾಗಿಸಲು ಯೋಜನೆ ರೂಪಿಸಿದೆ.

ಕೆಂಗೇರಿ ಕೆರೆಯನ್ನು 2005ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. 25 ಎಕರೆ ವಿಸ್ತೀರ್ಣದ ಈ ಕೆರೆಯ ಸುತ್ತ ಬೇಲಿಯನ್ನೂ ಅಳವಡಿಸಲಾಗಿತ್ತು. ಕೆರೆಯಲ್ಲಿ ದ್ವೀಪ ಹಾಗೂ ವಿಹಾರ ಪಥಗಳನ್ನು ನಿರ್ಮಿಸಲಾಗಿತ್ತು. ಆದರೆ, ನಿರ್ವಹಣೆ ಇಲ್ಲದೇ ಕೆರೆ ಸೊರಗಿದೆ. ಅದರಲ್ಲಿ ಕಳೆ ಹಾಗೂ ಜೌಗು ಸಸ್ಯಗಳು ಬೆಳೆದಿವೆ.

2012ರ ಅಕ್ಟೋಬರ್‌ನಲ್ಲಿ ಬಿಡಿಎ ಈ ಕೆರೆಯನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿದೆ. ಆ ಬಳಿಕ ಕೆರೆಯ ಪುನರುಜ್ಜೀವನ, ಸೌಂದರ್ಯವರ್ಧನೆ ಹಾಗೂ ನಿರ್ವಹಣೆಯ ಜವಾಬ್ದಾರಿ ನಿಗಮದ್ದಾಗಿದೆ.

ADVERTISEMENT

ಈ ಕೆರೆ ಪರಿಸರವನ್ನು ಸ್ವಚ್ಛವಾಗಿಡಲು, ಸೌಂದರ್ಯವನ್ನು ಕಾಪಾಡಲು ಹಾಗೂ ಜಲಚರಗಳು ಬದುಕಲು ಯೋಗ್ಯವಾಗಿರುವಂತೆ  ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ನಿಗಮ ಯೋಜನೆ ರೂಪಿಸಿದೆ.

ಚಟುವಟಿಕೆಯ ತಾಣ: ಇಲ್ಲಿ ವಿಹಾರ ಪಥ, ಬೋಟಿಂಗ್‌, ಮಕ್ಕಳ ಆಟದ ತಾಣ, ಮನರಂಜನಾ ತಾಣ, ಹಸಿರು ಪ್ರದೇಶ, ದ್ವೀಪ, ಕುಳಿತು ವಿಶ್ರಾಂತಿ ಪಡೆಯುವ ತಾಣಗಳನ್ನು ರೂಪಿಸುವ ₹ 8.75 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ. ಇಲ್ಲಿ ಉಪಾಹಾರ ಗೃಹಗಳಿಗೂ ಅವಕಾಶ ಕಲ್ಪಿಸುವ ಉದ್ದೇಶವನ್ನು ನಿಗಮ ಹೊಂದಿದೆ.  ಈ ಯೋಜನೆಗೆ ಕರ್ನಾಟಕ  ಸರೋವರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವೂ ಮಂಜೂರಾತಿ ನೀಡಿದೆ. 

ಈ ಯೋಜನೆ ಅನುಷ್ಠಾನಕ್ಕೆ ನಿಗಮವು ಜೂನ್‌ 30ರಂದು ಟೆಂಡರ್‌ ಆಹ್ವಾನಿಸಿದೆ. ಗುತ್ತಿಗೆ ಪಡೆಯುವ ಕಂಪೆನಿ 12 ತಿಂಗಳ ಒಳಗೆ ಕೆರೆ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

‘ಕೆರೆಯ ಅಭಿವೃದ್ಧಿಯಿಂದ ಆಸುಪಾಸಿನ ಜನಜೀವನದ ಮೇಲೆ ಸಕಾರಾತ್ಮಕ ಪರಿಣಾಮಗಳು ಉಂಟಾಗಲಿವೆ. ಅಂತರ್ಜಲ ವೃದ್ಧಿ ಆಗಲಿದೆ. ಸ್ಥಳೀಯ ಸಮುದಾಯಗಳ ಜನರ ಆರೋಗ್ಯ ಸುಧಾರಣೆಗೂ ಇದು ಕೊಡುಗೆ ನೀಡಲಿದೆ. ಮಾಲಿನ್ಯ ನಿಯಂತ್ರಣಕ್ಕೂ ಕಾರಣವಾಗಲಿದೆ.

ಇದನ್ನು ಚಟುವಟಿಕೆಯ ತಾಣವನ್ನಾಗಿ ಅಭಿವೃದ್ಧಿಪಡಿಸುವುದರಿಂದ ಇದನ್ನು ಬಳಸುವ ಸಮುದಾಯಗಳ ಮೇಲೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ವಾಗಿಯೂ ಸಕಾರಾತ್ಮಕ ಪರಿಣಾಮಗಳೂ ಉಂಟಾಗಲಿವೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.

ಕೆರೆ ಅಭಿವೃದ್ಧಿಯ ಪ್ರಮುಖ ಉದ್ದೇಶಗಳು
* ನೀರಿನ ಗುಣಮಟ್ಟ ಸುಧಾರಣೆ
* ಭೌತಿಕ ಮೂಲಸೌಕರ್ಯ ಅಭಿವೃದ್ಧಿ
* ಪರಿಸರ ಅಭಿವೃದ್ಧಿ
* ನಾಗರಿಕ ಸೌಕರ್ಯಗಳನ್ನು ಒದಗಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.