ADVERTISEMENT

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಲ್ಕು ಪಥದ ರಸ್ತೆ

ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿಸಲು ಕೆಆರ್‌ಡಿಸಿಎಲ್‌ ಯೋಜನೆ

ವಿಜಯಕುಮಾರ್ ಸಿಗರನಹಳ್ಳಿ
Published 24 ಏಪ್ರಿಲ್ 2017, 20:32 IST
Last Updated 24 ಏಪ್ರಿಲ್ 2017, 20:32 IST
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಲ್ಕು ಪಥದ ರಸ್ತೆ
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಲ್ಕು ಪಥದ ರಸ್ತೆ   

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ  ತಲುಪಲು ಸಾಧ್ಯವಾಗುವಂತೆ 155 ಕಿ.ಮೀ ಉದ್ದದ ನಾಲ್ಕು ಪಥದ  ನಾಲ್ಕು ರಸ್ತೆಗಳ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಕೆಆರ್‌ಡಿಸಿಎಲ್‌) ಯೋಜನೆ ಸಿದ್ಧಪಡಿಸಿದೆ.

ನೆಲಮಂಗಲ– ದೇವನಹಳ್ಳಿ,  ಹಾರೋಹಳ್ಳಿ– ಆನೇಕಲ್, ಆನೇಕಲ್‌– ಹೊಸಕೋಟೆ ಹಾಗೂ ಹೊಸಕೋಟೆ–   ದೇವನಹಳ್ಳಿ ಸಂಪರ್ಕಿಸುವ ನಾಲ್ಕು ಪಥದ  ರಸ್ತೆಗಳು ನಿರ್ಮಾಣ ಆಗಲಿವೆ.

ಅಂದಾಜು ₹ 2,040 ಕೋಟಿಯ ಯೋಜನೆ ಇದಾಗಿದೆ. ಪ್ರತಿ ರಸ್ತೆಯಲ್ಲಿ ತಲಾ ಒಂದೊಂದು ಟೋಲ್‌ ಪ್ಲಾಜಾಗಳು ನಿರ್ಮಾಣ ಆಗಲಿವೆ. ಈಗಾಗಲೇ ಇರುವ ಸಣ್ಣ ರಸ್ತೆಗಳನ್ನು ನಾಲ್ಕು ಪಥದ ರಸ್ತೆಗಳಾಗಿ ಪರಿವರ್ತಿಸಲಾಗುವುದು, ಅಗತ್ಯ ಇರುವ ಕಡೆ ಭೂಸ್ವಾಧೀನ   ಮಾಡಿಕೊಳ್ಳಲಾಗುವುದು ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಸಂಪುಟ ಸಭೆಯ ಮುಂದೆ ಸದ್ಯದಲ್ಲೇ ಪ್ರಸ್ತಾವ ಹೋಗಲಿದ್ದು, ಅನುಮತಿ ದೊರೆತ ಬಳಿಕ ಸರ್ವೆ ಕಾರ್ಯ ಆರಂಭವಾಗಲಿದೆ. ಆನಂತರ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ.

ಯೋಜನೆ ಪೂರ್ಣಗೊಂಡರೆ ಬೆಂಗಳೂರಿನ ಸುತ್ತ ಮತ್ತೊಂದು ವರ್ತುಲ ರಸ್ತೆ ನಿರ್ಮಾಣ ಆದಂತಾಗಲಿದೆ.

ಹಾಸನ, ಮಂಗಳೂರು, ಮೈಸೂರು, ಕನಕಪುರ, ಬನ್ನೇರುಘಟ್ಟ, ಹೊಸೂರು ಮತ್ತು ಹೊಸಕೋಟೆ  ಕಡೆಯಿಂದ ಬರುವ ವಿಮಾನ ಪ್ರಯಾಣಿಕರು ನೇರ
ವಾಗಿ ವಿಮಾನ ನಿಲ್ದಾಣಕ್ಕೆ  ತೆರಳಬಹುದಾಗಿದೆ. ಇದರಿಂದ ನಗರದಲ್ಲಿ ವಾಹನಗಳ ಒತ್ತಡ ಕಡಿಮೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.