ADVERTISEMENT

ಕೆರೆ ಅಭಿವೃದ್ಧಿ ಪ್ರಾಧಿಕಾರ ಮಸೂದೆ ಹಿಂದಕ್ಕೆ

ಪರಿಷ್ಕರಣೆಯೊಂದಿಗೆ ಮಂಗಳವಾರ ಮತ್ತೆ ಮಂಡನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2014, 19:30 IST
Last Updated 21 ಜುಲೈ 2014, 19:30 IST

ಬೆಂಗಳೂರು: ‘ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ ಮಸೂದೆ–2014’ ಅನ್ನು ಸರ್ಕಾರ ಸೋಮ­ವಾರ ವಿಧಾನಸಭೆಯಿಂದ ಹಿಂದಕ್ಕೆ ಪಡೆದಿದೆ. ಕೆಲವು ಪರಿಷ್ಕರಣೆಗಳೊಂದಿಗೆ ಇದೇ ಮಸೂದೆಯನ್ನು ಮಂಗಳವಾರ ವಿಧಾನಸಭೆ­ಯಲ್ಲಿ ಪುನಃ ಮಂಡಿಸಲಾಗುತ್ತದೆ.

ಈ ಮಸೂದೆ ಕುರಿತು ಸದನದಲ್ಲಿ ದೀರ್ಘಕಾಲ ಚರ್ಚೆ ನಡೆಯಿತು. ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುವಂತೆ ಹಲವು ಶಾಸಕರು ಪಕ್ಷಭೇದ ಮರೆತು ಒತ್ತಾಯಿಸಿದರು. ಮಸೂದೆಯನ್ನು ಸದನದ ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸುವ ಕುರಿತು ಯೋಚಿಸುವಂತೆ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರು ಸಲಹೆ ಮಾಡಿದರು. ಬಳಿಕ ಮಸೂದೆಯನ್ನು ಹಿಂದಕ್ಕೆ ಪಡೆದ ಸಣ್ಣ ನೀರಾವರಿ ಸಚಿವ ಶಿವರಾಜ್‌ ತಂಗಡಗಿ ಅವರು, ಮಂಗಳವಾರ ಪರಿಷ್ಕೃತ ಮಸೂದೆ ಮಂಡಿಸುವುದಾಗಿ ಪ್ರಕಟಿಸಿದರು.

ಪೌರ ನಿಗಮಗಳು ಮತ್ತು ಅಧಿಸೂಚಿತ ಪ್ರಾಧಿಕಾರಗಳ ಅಧೀನದಲ್ಲಿರುವ ಕೆರೆಗಳನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗೆ ಇರಿಸಿರು­ವುದಕ್ಕೆ ಹಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿ­ದರು. ಬೆಂಗಳೂರು ನಗರಕ್ಕೆ ಪ್ರತ್ಯೇಕ ಕೆರೆ ಅಭಿವೃದ್ಧಿ ಪ್ರಾಧಿಕಾರ ಬೇಡ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ಒತ್ತುವರಿ ತೆರವು, ಶಿಕ್ಷೆ, ಮೇಲ್ಮನವಿ ಮತ್ತಿತರ ವಿಷಯಗಳ ಬಗ್ಗೆ ಮಸೂದೆಯಲ್ಲಿ ಸ್ಪಷ್ಟತೆ ಇಲ್ಲ ಎಂದು ದೂರಿದರು.

‘ಕೆರೆಗಳ ಸಂರಕ್ಷಣೆಗಾಗಿ ಸೂಕ್ತ ಕಾಯ್ದೆ ರೂಪಿ­ಸು­ವಂತೆ ಮುಖ್ಯಮಂತ್ರಿ ಮತ್ತು ಸಚಿವರಿಗೆ ಪತ್ರ ಬರೆದೆ. ವೈಯಕ್ತಿಕವಾಗಿ ಭೇಟಿ ಮಾಡಿ­ದಾ­ಗಲೂ ಮನವಿ ಮಾಡಿದೆ. ಆದರೂ ಸರಿಯಾದ ಕಾಯ್ದೆ­ಯನ್ನು ರೂಪಿಸಲಿಲ್ಲ’ ಎಂದು ಆಡಳಿತ ಪಕ್ಷದ ಶಾಸಕ ರಮೇಶ್‌ಕುಮಾರ್‌ ಆರೋಪಿಸಿ­ದರು.

ವಿಧಾನಸಭೆಯಲ್ಲಿ ಸೋಮವಾರ ಮಂಡನೆ­ಯಾದ ‘ಕರ್ನಾಟಕ ಕೆರೆ (ಗ್ರಾಮೀಣ) ಅಭಿವೃದ್ಧಿ ಪ್ರಾಧಿಕಾರ ಮಸೂದೆ’ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಮಸೂದೆ ಮಂಡಿಸುವ ಮುನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿಲ್ಲ. ಹೀಗಾಗಿ ನಾನು ಸದನದಲ್ಲಿ ಮಾತಾಡು­ತ್ತಿ­ದ್ದೇನೆ. ಇದು ನನಗೂ ಮತ್ತು ನಿಮಗೂ (ಸಚಿವರು) ಮುಜು­ಗರ ಉಂಟು ಮಾಡಬಹುದು. ಆದರೂ ಕೆರೆಗಳ ಹಿತ­ರಕ್ಷಣೆ­­ಗಾಗಿ ನಾನು ಮಾತನಾಡಲೇಬೇಕು’ ಎಂದು ಹೇಳಿದರು.

‘ಈ ಮಸೂದೆಯ ಕರಡು ರಚಿಸಿದವರು ಮನ­ಸ್ಸಿಟ್ಟು ಕೆಲಸ ಮಾಡಿಲ್ಲ ಅಥವಾ ಅವರಲ್ಲಿ ಯಾರೊ­­ಬ್ಬರೂ ಕೆರೆಗಳ ಸ್ಥಿತಿಯನ್ನು ನೋಡಿರ­ಲಿ­ಕ್ಕಿಲ್ಲ’ ಎಂದು ಅವರು ದೂರಿದರು.

‘ಮೊದಲಿಗೆ ಈ ಮಸೂದೆಯ ಶೀರ್ಷಿಕೆಯೇ ಸರಿಯಿಲ್ಲ. ಕೆರೆಗಳ ಒತ್ತುವರಿ ಆಗಿದೆ ಎಂಬುದು ನಿಮಗೆ ಗೊತ್ತಿದೆ. ಒತ್ತುವರಿ ತೆರವು ಮಾಡುವ ಸಲುವಾಗಿಯೇ ಈ ಮಸೂದೆ ತಂದಿದ್ದೀರಿ. ಕೆರೆ ಅಭಿವೃದ್ಧಿ ಬದಲು ಕೆರೆ ಪ್ರದೇಶ ಸಂರಕ್ಷಣಾ ಪ್ರಾಧಿಕಾರವನ್ನು ರಚಿಸಿ’ ಎಂದು ಅವರು ಸಲಹೆ ನೀಡಿದರು.

‘ಕೆರೆ ಎಂಬುದು ನಮಗೆ ತಾಯಿ ಸಮಾನ. ರಾಜಕಾಲುವೆ,  ಕೆರೆಯಂಗಳ, ಕಟ್ಟೆ, ತೂಬು­ಕಾಲುವೆ, ಕೋಡಿ ಮೊದಲಾದ ಎಲ್ಲವೂ ಸೇರಿ ಕೆರೆಯಾಗುತ್ತದೆ’ ಎಂದು ಅವರು ತಿಳಿಸಿದರು.

‘ಡಿಜಿಟಲ್‌ ಸರ್ವೆ ಸಿದ್ಧವಿದೆ. ಕೆರೆಗಳ ಬಳಿ ಹೋಗಿ. ಕೆರೆ ಗಡಿ ಸುತ್ತಲೂ ಗುಂಡಿ ತೋಡಿಸಿ. ನಂತ­­ರ­­ದಲ್ಲಿ ಒತ್ತುವರಿದಾರರು ಆ ಕಡೆ ಸುಳಿ­ಯು­ವುದಿಲ್ಲ’ ಎಂದು ಅವರು ಸಲಹೆ ನೀಡಿದರು.

ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ, ‘ಇದು ಮಸೂದೆ ರೂಪದಲ್ಲೇ ಇಲ್ಲ. ಹೊಸದಾಗಿ ಮಂಡಿಸಿ’ ಎಂದರು.
ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ­ನಾಡಿ, ‘ಇದು ಕಾಟಾಚಾರದ ಮಸೂದೆ. ಮಸೂದೆ ಪುನರ್‌ ಪರಿ­ಶೀಲಿಸಿ. ಇನ್ನಷ್ಟು ಚಿಂತನೆ ಮಾಡಿ. ಜಿಲ್ಲಾವಾರು ಸಮಿತಿ­ಗಳಲ್ಲಿ  ಜನ­ಪ್ರತಿನಿಧಿ­ಗಳೂ ಸದಸ್ಯರಾಗಲು ಅವಕಾಶ ಇರುವಂತೆ ಕಾಯ್ದೆ ರೂಪಿಸಿ’ ಎಂದರು.

‘ಪರಿಣಾಮಕಾರಿ ಕಾಯ್ದೆ ಹೇಗಿರಬೇಕೆಂ­ಬು­ದಕ್ಕೆ ಅರಣ್ಯ ಸಂರ­ಕ್ಷಣಾ ಕಾಯ್ದೆ ಅತ್ಯುತ್ತಮ ಮಾದರಿ. ನಾಲ್ಕೇ ಪುಟಗಳಲ್ಲಿ ಪರಿ­ಣಾಮಕಾರಿ­ಯಾ­ಗಿ­ರುವ ಕಾಯ್ದೆ ಅದು. ಅದೇ ಮಾದರಿ­ಯಲ್ಲಿ ಕಾಯ್ದೆ ರೂಪಿಸಿ’ ಎಂದು ಅವರು ಒತ್ತಾಯಿಸಿದರು.

ಬಿಜೆಪಿ ಶಾಸಕ ಗೋವಿಂದ ಕಾರಜೋಳ,  ‘ಮಸೂದೆ ವಾಪಸ್‌ ಪಡೆಯಿರಿ. ರಾಜ್ಯದಲ್ಲಿರುವ ಎಲ್ಲ ಕೆರೆಗಳ ಸಂರ­ಕ್ಷಣೆಗೆ ಸೂಕ್ತ ಕಾಯ್ದೆಯನ್ನು ರೂಪಿಸಿ’ ಎಂದರು.

ಕೆಜೆಪಿ ಶಾಸಕ ಬಿ.ಆರ್‌.ಪಾಟೀಲ್‌, ‘ಮಸೂದೆ ವಾಪಸ್‌ ತೆಗೆದು­­ಕೊಳ್ಳಿ. ತಜ್ಞರ ಸಲಹೆ ಪಡೆದು ಮತ್ತೆ ಮಂಡಿಸಿ’ ಎಂದರು. ಜೆಡಿಎಸ್‌ ಶಾಸಕ ಡಿ.ಸಿ.­ತಮ್ಮಣ್ಣ, ‘ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ರೈತರು ಯಾರೂ ಅಡ್ಡಿ ಬರುವುದಿಲ್ಲ. ಹೀಗಾಗಿ ಹೊಸ ಕಾನೂನಿನ ಅಗತ್ಯ ಇಲ್ಲ. ಇದರ ಬದಲು ಕೆರೆಗಳ ಹೂಳು ತೆಗೆ­ಸಲು ಹಣ ಕೊಡಿ’ ಎಂದರು.

ಬಿಜೆಪಿ ಶಾಸಕ ಬಿ.ಎನ್‌.ವಿಜಯಕುಮಾರ್‌, ‘ನಗರದ ಕೆರೆ­ಗಳಿಗೆ ನೀರು ಹರಿದು ಬರಲು  685 ಕಿ.ಮೀ. ಉದ್ದದ ರಾಜ­ಕಾಲು­ವೆ­ಯಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸ­ಬೇಕು. ಆ ಕಾರ್ಯ ಇದುವರೆಗೆ ಆಗಿಲ್ಲ’ ಎಂದರು.

2 ಲಕ್ಷ ಕೋಟಿ ಮೌಲ್ಯದ ಭೂ ಕಬಳಿಕೆ
‘ಬೆಂಗಳೂರು ನಗರ ಒಂದರಲ್ಲೇ 2 ಲಕ್ಷ ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನು ಮತ್ತು ಕೆರೆ ಜಮೀನನ್ನು ಭೂಗಳ್ಳರು ಕಬಳಿಸಿದ್ದಾರೆ’ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

‘ಕೆರೆ ಅಭಿವೃದ್ಧಿ ಪ್ರಾಧಿಕಾರದ ಮಸೂದೆಯ ವ್ಯಾಪ್ತಿಗೆ ಬೆಂಗಳೂರಿನ ಕೆರೆಗಳನ್ನು ಏಕೆ ಒಳಪಡಿಸಿಲ್ಲ. ಒತ್ತುವರಿ ತೆರವಿಗೆ ಎಷ್ಟು ವರ್ಷ ಬೇಕು’ ಎಂದು ಅವರು ಪ್ರಶ್ನಿಸಿದರು.

ಮಧ್ಯೆ ಪ್ರವೇಶಿಸಿ ಮಾತನಾಡಿದ ಅರಣ್ಯ ಸಚಿವ ರಮಾನಾಥ ರೈ, ‘ಬೆಂಗಳೂರಿನ ಕೆರೆಗಳು ಅರಣ್ಯ ಇಲಾಖೆ ಅಧೀನ­ದಲ್ಲಿ­ರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿವೆ. ಈ ಪ್ರಾಧಿ­ಕಾರದ ಕಾಯ್ದೆಯನ್ನು ಬಲಪಡಿಸಲು ಸದ್ಯದಲ್ಲೇ ತಿದ್ದು­ಪಡಿ ಮಸೂದೆ ಮಂಡಿಸ­ಲಾಗುವುದು’ ಎಂದು ಸ್ಪಷ್ಟನೆ ನೀಡಿದರು. ‘ಕಳೆದ ಐದು ವರ್ಷಗಳಲ್ಲಿ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₨ 400 ಕೋಟಿ ಖರ್ಚು ಮಾಡಲಾಗಿದೆ. ಆದರೆ ಕೆರೆ­ಗಳನ್ನು ಹುಡುಕಬೇಕಾದ ಸ್ಥಿತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT