ADVERTISEMENT

ಗುತ್ತಿಗೆ ಭೂಮಿ ವಾಪಸ್‌ಗೆ ಒತ್ತಾಯ

ಬೌರಿಂಗ್ ಕ್ಲಬ್‌ಗೆ ವಾರ್ಷಿಕ ₨ 30ಕ್ಕೆ 10 ಎಕರೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2014, 19:50 IST
Last Updated 19 ಡಿಸೆಂಬರ್ 2014, 19:50 IST

ಬೆಂಗಳೂರು: ‘ವಾರ್ಷಿಕ ಕೇವಲ ₨ 30 ಬಾಡಿ­ಗೆಗೆ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿ 10 ಎಕರೆಯಷ್ಟು ವಿಶಾಲವಾದ ಭೂಮಿ­ಯನ್ನು ಗುತ್ತಿಗೆ ಪಡೆದಿರುವ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಕ್ಲಬ್‌, ಕರಾರು ಉಲ್ಲಂ­ಘಿಸಿ ಲಕ್ಷಾಂತರ ರೂಪಾಯಿ ದುಡ್ಡು ಮಾಡುತ್ತಿದ್ದು, ಅದಕ್ಕೆ ನೀಡಿರುವ ಭೂಮಿ­ಯನ್ನು ವಾಪಸ್‌ ಪಡೆಯಬೇಕು’ ಎಂದು ಬಿಬಿಎಂಪಿ ಸದಸ್ಯ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಆರೋಪ­ಗ­ಳಿಗೆ ಪೂರಕವಾಗಿ ದಾಖಲೆಗಳನ್ನು ಬಿಡು­ಗಡೆ ಮಾಡಿದರು. ‘ಸುಮಾರು ₨ 5 ಸಾವಿರ ಕೋಟಿ ಬೆಲೆಬಾಳುವ ಆಸ್ತಿ ದುರ್ಬಳಕೆ ಆಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯೆ ಪ್ರವೇಶಿಸಿ ಗುತ್ತಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳ­ಬೇಕು’ ಎಂದು ಆಗ್ರಹ ಮಾಡಿದರು.

‘ಸುಮಾರು 58 ವರ್ಷಗಳ ಹಿಂದೆ ಅಂದಿನ ಬೆಂಗಳೂರು ಮುನ್ಸಿಪಲ್‌ ಕಾರ್ಪೋರೇಷನ್‌ ಈ ಭೂಮಿಯನ್ನು 99 ವರ್ಷಗಳ ಅವಧಿಗೆ ವಾರ್ಷಿಕ ₨ 30 ಭೂಬಾಡಿಗೆ ನಿಗದಿಪಡಿಸಿ ಗುತ್ತಿಗೆ ನೀಡಲು ನಿರ್ಧರಿಸಿತ್ತು. ಬಳಿಕ ಕ್ಲಬ್‌ ಮತ್ತು ರಾಜ್ಯ ಸರ್ಕಾರದ ನಡುವೆ ಒಪ್ಪಂದ ಏರ್ಪಟ್ಟಿತು. ದೊಡ್ಡ ಹೋಟೆ­ಲ್‌­ನಲ್ಲಿ ಒಂದು ಕಾಫಿ ದರವೇ ₨ 30 ಇರುವಾಗ ಸಾವಿರಾರು ಕೋಟಿ ಮೌಲ್ಯದ ಭೂಮಿಯನ್ನು ಆ ಬೆಲೆಗೆ ನೀಡಿ­ರುವುದು ಜನವಿರೋಧಿ ಕ್ರಮ’ ಎಂದು ದೂರಿದರು.

‘ಮೂಲ ಒಪ್ಪಂದದಂತೆ ಕ್ಲಬ್‌ಗೆ ನೀಡಲಾಗಿರುವ ಭೂಮಿಯನ್ನು ಉಪ ಗುತ್ತಿಗೆ ನೀಡುವಂತಿಲ್ಲ. ಸರ್ಕಾರ ತಾನೇ ಹಾಕಿದ್ದ ಕರಾರನ್ನು ಉಲ್ಲಂಘಿಸಲು ಕ್ಲಬ್‌ಗೆ ಅವಕಾಶ ನೀಡಿದೆ. ಆ ಭೂಮಿ­ಯಲ್ಲಿ ಒಂದು ಭಾಗವನ್ನು ಪೆಟ್ರೋಲ್‌ ಬಂಕ್‌ಗೆ ಬಾಡಿಗೆ ನೀಡಲಾಗಿದೆ. ಈ ಪ್ರದೇಶದಿಂದ ತಿಂಗಳಿಗೆ ₨ 2.75 ಲಕ್ಷ ಬಾಡಿಗೆ ಬರುತ್ತಿದ್ದು, ಅದರಲ್ಲಿ ಅರ್ಧ ಮೊತ್ತವನ್ನು ಸರ್ಕಾರ ಪಡೆಯುತ್ತಿದೆ’ ಎಂದು ವಿವರಿಸಿದರು.

‘ಕ್ಲಬ್‌ ಆವರಣದಲ್ಲಿ ಮೂರು ಹಾಲ್‌­ಗಳೂ ಇದ್ದು, ಅವುಗಳನ್ನು ಸಭೆ–ಸಮಾರಂಭಗಳಿಗೆ ಬಾಡಿಗೆ ನೀಡಲಾ­ಗುತ್ತಿದೆ. ವಾಣಿಜ್ಯೇತರ ಉದ್ದೇಶಗಳಿಗೆ ಬಳಕೆಯಾಗಬೇಕಿದ್ದ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕಾಗಿ ಉಪಯೋಗ ಮಾಡಲಾಗುತ್ತಿದೆ’ ಎಂದು ದೂರಿದರು.

‘ನಿಯಮ ಉಲ್ಲಂಘಿಸಿಲ್ಲ’
‘ಗುತ್ತಿಗೆ ಒಪ್ಪಂದದ ಯಾವ ಕರಾರನ್ನೂ ಕ್ಲಬ್‌ ಉಲ್ಲಂಘಿಸಿಲ್ಲ. ಈ ಸಂಬಂಧ ಕೇಳಿಬಂದಿರುವ ಆರೋಪಗಳೆಲ್ಲ ಆಧಾರರಹಿತ’ ಎಂದು ಬೌರಿಂಗ್‌ ಕ್ಲಬ್‌ ಕಾರ್ಯದರ್ಶಿ ಎಚ್‌.ಎಸ್‌. ಶ್ರೀಕಾಂತ್‌ ಸ್ಪಷ್ಟಪಡಿಸಿದರು.

‘ಕ್ಲಬ್‌ 1868ರಲ್ಲಿ ಬ್ರಿಟಿಷ್‌ ಅಧಿಕಾರಿಗಳಿಂದ ಈಗಿನ ಮೇಯೊಹಾಲ್‌ ಕಟ್ಟ­ಡದಲ್ಲಿ ಸ್ಥಾಪನೆಗೊಂ­ಡಿತು. ಆ ಕಟ್ಟಡವನ್ನು ಬಿಟ್ಟುಕೊಡುವ ಪ್ರಸಂಗ ಬಂದಾಗ 1888ರಲ್ಲಿ ಕ್ಲಬ್‌ ಈಗಿರುವ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಕ್ಲಬ್‌ ಕಟ್ಟಡ­ವನ್ನು ಅದೇ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿದ್ದು, ಶತಮಾನಕ್ಕಿಂತಲೂ ಪುರಾತನವಾದ ಅದೀಗ ಪಾರಂಪರಿಕ ಕಟ್ಟಡವಾಗಿದೆ’ ಎಂದು ಹೇಳಿದರು.

‘ತೈಲೋತ್ಪನ್ನ ಮಾರಾಟಕ್ಕಾಗಿ 1968ರಲ್ಲಿ ಸರ್ಕಾರವೇ ಕ್ಲಬ್‌ನಿಂದ 100x110 ಅಡಿ ವಿಸ್ತೀರ್ಣದ ಪ್ರದೇಶವನ್ನು ವಾಪಸ್‌ ಪಡೆದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ಗೆ ಬಾಡಿಗೆ ಕರಾರಿನ ಮೇಲೆ ನೀಡಿದೆ. 2008ರವರೆಗೆ ಈ ಪ್ರದೇಶದ ಬಾಡಿಗೆ ₨ 8,000 ಇತ್ತು. ಬಳಿಕ 2.50 ಲಕ್ಷಕ್ಕೆ ಹೆಚ್ಚಿಸಲಾಯಿತು. ಬರುವ ಬಾಡಿಗೆಯಲ್ಲಿ ಒಪ್ಪಂದದಂತೆ ಸರ್ಕಾರ ಅರ್ಧ ಮೊತ್ತವನ್ನು ಕ್ಲಬ್‌ಗೆ ನೀಡುತ್ತಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.