ADVERTISEMENT

ಗೋಡೆ ಕುಸಿದು ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2014, 19:30 IST
Last Updated 20 ಸೆಪ್ಟೆಂಬರ್ 2014, 19:30 IST

ಆನೇಕಲ್‌:  ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಮೂವರು ಮೃತಪಟ್ಟು, ಇಬ್ಬರು ಗಾಯ­ಗೊಂಡಿ­ರುವ ದಾರುಣ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರ ಡೆಕ್ಕನ್‌ ಇಂಡಸ್ಟ್ರೀಸ್ ಫ್ಯಾಬ್ರಿಕೇಟ್‌ ಪ್ರಾಡೆಕ್‌ ಕಾರ್ಖಾನೆಯಲ್ಲಿ ಶನಿವಾರ ನಡೆದಿದೆ.

ಮೃತರನ್ನು ಪಶ್ಚಿಮ ಬಂಗಾಳ ಮೂಲದ ಪಂಚರಾಮ್‌ ಜದ್ದಾರ್‌ (33), ಶಂಕರ್ (19), ಸೋಮಿರ್‌ (26) ಎಂದು ಗುರುತಿಸಲಾಗಿದೆ. ಭೂತ್‌ ಮತ್ತು ಗೋಪಾಲ್ ಎನ್ನುವವರು ಗಾಯ­ಗೊಂಡಿ­ದ್ದಾರೆ. ಈ ಪೈಕಿ ಭೂತ್‌ ಕಣ್ಣಿಗೆ ಕಬ್ಬಿಣದ ಕಂಬಿ ಚುಚ್ಚಿದ್ದು ತೀವ್ರ ಗಾಯಗೊಂಡಿದ್ದಾನೆ.

ಕಬ್ಬಿಣದ ಪೈಪ್‌ಗಳನ್ನು ತಯಾರಿ­ಸುವ ಕಾರ್ಖಾನೆ ಇದಾಗಿದ್ದು, ವಿಸ್ತರಣೆ ಕಾರ್ಯ ಕೈಗೊಳ್ಳಲಾಗಿತ್ತು. ಹಿಂಬದಿ ಕಟ್ಟಡವನ್ನು ಜೋಡಿಸುವ ಸಲುವಾಗಿ ಮರದ ಕಂಬಗಳನ್ನು ಆಧಾರವಾಗಿ ಅಳ­ವಡಿಸಿ ಅಂದಾಜು 40 ಅಡಿ ಎತ್ತರದ ಗೋಡೆಯನ್ನು ಕಟ್ಟಿ ಕಬ್ಬಿಣದ ಮೂಲಕ ಜೋಡಿಸುವ ಕೆಲಸ ನಡೆ­ಯುತ್ತಿತ್ತು. ಈ ಸಂದರ್ಭದಲ್ಲಿ ಗೋಡೆ ಕುಸಿದು ಬಿದ್ದು ಸಮೀರ್‌ ಸ್ಥಳದಲ್ಲೇ ಮೃತ­ಪಟ್ಟರು. ಪಚು­ಗೋಪಾಲ್‌ ಜೋದಾರ್‌ ಮತ್ತು ಶಂಕರ್ ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆಯಲ್ಲಿ ಮೃತಪಟ್ಟರು.

ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಹಾಗೂ ಪೊಲೀಸರು ಕಟ್ಟಡದ ಅವಶೇಷಗಳ ಅಡಿ ಸಿಲುಕಿಕೊಂಡಿದ್ದ ಗಾಯಾಳುಗಳು ಹಾಗೂ ಮೃತ ದೇಹ­ವನ್ನು ಹೊರ­ತೆಗೆದರು. ಸುಮಾರು ಎರಡು ಗಂಟೆ ರಕ್ಷಣಾ ಕಾರ್ಯಾ­ಚರಣೆ ನಡೆಯಿತು.

ಶಂಕರ್‌ ಮತ್ತು ಸಮೀರ್‌ ಅವಿವಾಹಿತರು. ಪಚುಗೋಪಾಲ್ ಜೋಧಾರ್ ಪತ್ನಿ ಸುಮಿತಾ ಜೋಧಾರ್ ಅವರೊಂದಿಗೆ ಬೊಮ್ಮಸಂದ್ರದಲ್ಲಿ ವಾಸವಿದ್ದು, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಇವರಿಗೆ ಆರು ವರ್ಷದ ಒಂದು ಗಂಡು ಮತ್ತು ಎಂಟು ವರ್ಷದ ಹೆಣ್ಣು ಮಗುವಿದೆ. ಮಕ್ಕಳನ್ನು ತಮ್ಮ ಊರು ಕೊಲ್ಕತ್ತಾದ­ಲ್ಲಿಯೇ ಬಿಟ್ಟು ಬಂದಿದ್ದರು. ದೂರದಿಂದ ಬಂದು ಕೂಲಿ ಮಾಡಿ ಬದುಕು ಕಟ್ಟಿಕೊಳ್ಳುವ ಇವರ ಆಸೆ ಈ ಅವಘಡದಲ್ಲಿ ಕೊಚ್ಚಿ ಹೋಯಿತು.

ಪತಿಯನ್ನು ಕಳೆದುಕೊಂಡ ಸುಮಿತಾ ಜೋಧಾರ್‌ ರೋಧಿಸುತ್ತಿದ್ದ ದೃಶ್ಯ ಮನ­ ಕಲ­ಕುವಂತಿತ್ತು. ಬೊಮ್ಮಸಂದ್ರದ ತಿಲಕ್‌ ಮಾತನಾಡಿ, ‘40 ಅಡಿ ಎತ್ತರದಲಿ ಗೋಡೆ­ಯನ್ನು ನಿರ್ಮಿಸಲಾಗಿತ್ತು. ಕಾರ್ಖಾನೆಯವರು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊ­ಳ್ಳು­ವಲ್ಲಿ ವಿಫಲರಾಗಿದ್ದರಿಂದ ಮೂರು ಕುಟುಂಬಗಳು ಬೀದಿಗೆ ಬೀಳುವಂತಾಯಿತು’ ಎಂದರು. ಕಾರ್ಖಾನೆ ಮಾಲೀಕ ಜಾವೇದ್‌ ಅಹಮದ್‌ ಅವರ ವಿರುದ್ಧ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT