ADVERTISEMENT

‘ಗ್ರೀಕ್ – ಕನ್ನಡ ನಾಟಕಗಳಲ್ಲಿ ಸಾಮ್ಯತೆ’

‘ಹೊಸ ರಂಗಭಾಷೆಯ ಹುಡುಕಾಟ...’ ಕುರಿತ ವಿಚಾರ ಸಂಕಿರಣದಲ್ಲಿ ಡಾ.ಚಂದ್ರಶೇಖರ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 20:02 IST
Last Updated 25 ಫೆಬ್ರುವರಿ 2018, 20:02 IST
ಡಾ.ಚಂದ್ರಶೇಖರ ಕಂಬಾರ (ಮಧ್ಯದವರು) ಅವರಿಗೆ ಜೆ.ಎನ್.ಯು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್.ಎಸ್.ಶಿವಪ್ರಕಾಶ್ ಹಸ್ತಲಾಘವ ಮಾಡಿದರು. ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ, ಪ್ರೊ.ಶಫಾತ್ ಖಾನ್ ಹಾಗೂ ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಇದ್ದಾರೆ - – ಪ್ರಜಾವಾಣಿ ಚಿತ್ರ
ಡಾ.ಚಂದ್ರಶೇಖರ ಕಂಬಾರ (ಮಧ್ಯದವರು) ಅವರಿಗೆ ಜೆ.ಎನ್.ಯು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್.ಎಸ್.ಶಿವಪ್ರಕಾಶ್ ಹಸ್ತಲಾಘವ ಮಾಡಿದರು. ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ, ಪ್ರೊ.ಶಫಾತ್ ಖಾನ್ ಹಾಗೂ ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಇದ್ದಾರೆ - – ಪ್ರಜಾವಾಣಿ ಚಿತ್ರ   

ಬೆಂಗಳೂರು: 'ಗ್ರೀಕ್ ಹಾಗೂ ಕನ್ನಡ ನಾಟಕ ಪ್ರಕಾರಗಳಲ್ಲಿ ಹಲವು ಸಾಮ್ಯತೆಗಳಿವೆ. ಈ ಕುರಿತ ಸಂಶೋಧನೆಗಳು ನಡೆಸಬೇಕಿದೆ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ನಾಟಕ ಶಾಲೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಹೊಸ ರಂಗಭಾಷೆಯ ಹುಡುಕಾಟ...’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

'ಉಡುಪಿಯ ‘ಮಲ್ಪೆ’ ತೀರದ ಬಳಿ ನಡೆದ ಪ್ರಸಂಗವೊಂದು ಗ್ರೀಕ್‌ ನಾಟಕವೊಂದರಲ್ಲಿ ಪ್ರಸ್ತಾಪವಾಗಿದೆ. ಕನ್ನಡ ಸಂಭಾಷಣೆಯೂ ನಾಟಕದಲ್ಲಿ ಬಳಕೆಯಾಗಿದೆ. ಅದೇ ಮಾದರಿಯಲ್ಲಿ ಹಲವು ನಾಟಕಗಳಲ್ಲಿ ಕನ್ನಡದ ಪದಗಳು ಬಳಸಲಾಗಿದೆ. ಆ ಕುರಿತು ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ.
ರಾಷ್ಟ್ರೀಯ ನಾಟಕ ಶಾಲೆಯ ತಜ್ಞರು ಆ ಬಗ್ಗೆ ಗಮನ ಹರಿಸಬೇಕು' ಎಂದು ಸಲಹೆ ನೀಡಿದರು.

ADVERTISEMENT

'ಶಿವನನ್ನು ದ್ರಾವಿಡ ನಾಟಕ ಪರಂಪರೆಯ ಮೂಲ ಪುರುಷ ಎಂದು ನಂಬಲಾಗಿದೆ.  ಮೈಗೆ ವಿಭೂತಿ ಹಚ್ಚಿ, ಒಂದು ಕೈಯಲ್ಲಿ ಡಮರುಗ, ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದು ಕುಣಿಯುವ ದೃಶ್ಯ ಪ್ರೇಕ್ಷಕರನ್ನು ಸೆಳೆಯುತ್ತದೆ. ಗ್ರೀಕ್‌ ನಾಟಕಗಳಲ್ಲೂ ಶಿವನನ್ನು ಹೋಲುವಂತಹ ವೇಷಭೂಷಣಗಳು ಬಳಕೆಯಾಗಿವೆ' ಎಂದು ಅವರು ವಿವರಿಸಿದರು.

'ನಾಟಕವೆಂದರೆ ಕೇವಲ ಮನರಂಜನೆಯಲ್ಲ. ಬದುಕನ್ನು ರೂಪಿಸುವ ಹಾಗೂ ನಿರೂಪಿಸುವ ಕ್ಷೇತ್ರವದು. ಕತೆ, ಹಾಡು, ನೃತ್ಯ ಹಾಗೂ ಅಭಿನಯದ ಮೂಲಕ ನೋಡುಗರಿಗೆ ನಾಟಕದ ಆಶಯವನ್ನು ಕಟ್ಟಿಕೊಡಲಾಗುತ್ತದೆ. ಅವರನ್ನು ಚಿಂತನೆಗೆ ದೂಡುವಂತೆ ಮಾಡಲಾಗುತ್ತದೆ' ಎಂದರು.

'ನಾಟಕಕಾರ ಹಾಗೂ ನಿರ್ದೇಶಕ ತನ್ನ ರಂಗಭಾಷೆಯನ್ನು ಹುಡುಕಲೇ ಬೇಕು. ಅದರ ಅಸ್ತಿತ್ವವನ್ನು ಉಳಿಸಬೇಕು. ಆದರೆ, ನಿರ್ದೇಶಕ ಹಾಗೂ ನಾಟಕಕಾರನ ಸ್ಥಾನಮಾನ ಪ್ರಸ್ತುತ ಸನ್ನಿವೇಶದಲ್ಲಿ ಬದಲಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ವಿ.ಸುದೇಶ್, ‘ಬದುಕು ಒಂದು ನಾಟಕ. ಬದುಕಿನ ಸೂಕ್ಷ್ಮತೆಗಳನ್ನು ರಂಗದ ಮೇಲೆ
ತರುವ ಮೂಲಕ ಪ್ರೇಕ್ಷಕರಲ್ಲಿ ರಸಾನುಭವ ಉಂಟು ಮಾಡುವುದೇ ನಾಟಕದ ಹೆಚ್ಚುಗಾರಿಕೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.