ADVERTISEMENT

ಜಾತಿ ಸಮೀಕ್ಷೆ ಕಷ್ಟ: ಅಂಬರೀಷ್

​ಪ್ರಜಾವಾಣಿ ವಾರ್ತೆ
Published 5 ಮೇ 2015, 20:07 IST
Last Updated 5 ಮೇ 2015, 20:07 IST

ಬೆಂಗಳೂರು: ಜಾತಿ ಸಮೀಕ್ಷೆ ನಡೆಸುವುದು ತುಂಬಾ ಕಷ್ಟ. ತಮ್ಮ ಜಾತಿಯ ಬಗ್ಗೆ ಪ್ರತಿಕ್ರಿಯಿಸಲು ಜನರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಸಮೀಕ್ಷೆದಾರರು  ಕಷ್ಟ ಅನುಭವಿಸು ತ್ತಿದ್ದಾರೆ ಎಂದು ವಸತಿ ಸಚಿವ ಅಂಬರೀಷ್‌ ಹೇಳಿದರು.
ಮಂಗಳವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಅವರು, ‘ಜಾತಿಯ ಬಗ್ಗೆ ವಿಚಾರಿಸಿದಾಗ ಜನರು ಕೋಪ ಗೊಳ್ಳುತ್ತಾರೆ. ತಮ್ಮನ್ನು ಮನೆಯಿಂದ ಹೊರ ಹೋಗಲು ಹೇಳುತ್ತಿದ್ದಾರೆ ಎಂಬುದನ್ನು ಸಮೀಕ್ಷೆದಾರರೇ ನನಗೆ ಹೇಳಿದ್ದಾರೆ. ನಮ್ಮಲ್ಲಿ ಸಾವಿರಾರು ಜಾತಿಗಳಿವೆ. ಒಕ್ಕಲಿಗ ಸಮುದಾಯದಲ್ಲೇ  25 ಉಪ ಜಾತಿಗಳಿವೆ. ಹಾಗಾಗಿ ಸಮೀಕ್ಷೆ ನಡೆಸುವುದು ಕಷ್ಟ’ ಎಂದು ವಿವರಿಸಿದರು.

ತಾವು ಜಾತಿ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಮೀಕ್ಷೆ ನಡೆಸುವು ದರಲ್ಲಿ ಯಾವುದೇ ತಪ್ಪಿಲ್ಲ. ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಸಮಜಾಯಿಷಿ ನೀಡಿದರು.

ಬೆಂಗಳೂರಿನ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಪ್ರಸ್ತಾಪಿಸಿದ ಅವರು, ‘ನಗರದಲ್ಲಿನ ಜಮೀನುಗಳ ಸುದೀರ್ಘ ಇತಿಹಾಸವನ್ನು ಕೆದಕುವುದು ಸರಿಯಲ್ಲ. ಅಭಿವೃದ್ಧಿ ಕಾರ್ಯಗಳು ಬಹಳ ಹಿಂದೆಯೇ ನಡೆದಿವೆ. ಈ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದ ಹಲವಾರು ಅಧಿಕಾರಿಗಳು ಈಗ ಬದುಕಿಲ್ಲ. ಹಾಗಾಗಿ, ಈ ವಿಷಯವನ್ನು ರಾಜಕೀಯ ಗೊಳಿಸಬಾರದು’ ಎಂದರು.

‘ಕೆರೆಗಳಿಗೆ ಸೇರಿದ ಜಮೀನಿನಲ್ಲಿ ಕರ್ನಾಟಕ ಗೃಹ ಮಂಡಳಿ ಬಡಾವಣೆ ಮಾಡಿರುವುದು ನನ್ನ ಗಮನಕ್ಕೆ ಇದುವರೆಗೆ ಬಂದಿಲ್ಲ. ವಸತಿ ಯೋಜನೆಗಳಿಗಾಗಿ ಭೂಗಳ್ಳರಿಂದ ವಶಕ್ಕೆ ಪಡೆದಿರುವ ಸರ್ಕಾರಿ ಜಮೀನುಗಳನ್ನು ಇಲಾಖೆಗೆ ಒಪ್ಪಿಸುವಂತೆ ಎಲ್ಲ ಜಿಲ್ಲಾಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಸಚಿವರ ಮೌಲ್ಯಮಾಪನ ವಿಚಾರದ  ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಾಧ್ಯಮಗಳು ಪ್ರತಿ ದಿನ ಸಚಿವರನ್ನು ವಿಶ್ಲೇಷಣೆಗೆ ಒಳಪಡಿಸುತ್ತವೆ. ಮುಖ್ಯ ಮಂತ್ರಿ ಅವರು ಪ್ರತಿದಿನ ಗುಪ್ತಚರ  ವರದಿ ಪಡೆಯುತ್ತಾರೆ. ಹಾಗಾಗಿ ಅವರಿಗೆ ಎಲ್ಲದರ ಬಗ್ಗೆಯೂ ಮಾಹಿತಿ ಇರುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಕಾಂಗ್ರೆಸ್‌ನಲ್ಲಿ   ಎಲ್ಲವನ್ನೂ ಹೈಕಮಾಂಡ್‌ ನಿರ್ಧರಿ ಸುತ್ತದೆ’ ಎಂದರು. ಕೆಪಿಸಿಸಿ ಅಧ್ಯಕ್ಷರಾಗಲು ಸಿದ್ಧರಿದ್ದೀರಾ  ಎಂದು ಕೇಳಿದ್ದಕ್ಕೆ, ‘ನಾನು ಯಾವುದೇ ಜವಾಬ್ದಾರಿ ವಹಿಸಲು ಸಿದ್ಧ’ ಎಂದು ಉತ್ತರಿಸಿದರು.

‘ನಟಿ ರಮ್ಯಾ ಎಲ್ಲಿದ್ದಾರೋ ತಿಳಿ ಯದು’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ವಿಳಂಬ, ಕಾರ್ಯಕರ್ತರ ಅಸಮಾಧಾನ: ಅಂಬರೀಷ್‌ ಅವರ ಭೇಟಿ  ಮಂಗಳವಾರ ಮಧ್ಯಾಹ್ನ 12ಕ್ಕೆ ನಿಗದಿಯಾಗಿತ್ತು. ಆದರೆ, ಪಕ್ಷದ ಕಚೇರಿಗೆ ಅವರು ಬಂದಿದ್ದು ಒಂದೂವರೆ ಗಂಟೆ ತಡವಾಗಿ.ಕಾರ್ಯಕರ್ತರು ಸಚಿವರ ಭೇಟಿಗಾಗಿ ಕಾದುಕುಳಿತಿದ್ದರು. ಕಾದು ಕಾದು ಸುಸ್ತಾಗಿದ್ದ ಹಲವರು ಅಸಮಾಧಾ ನಗೊಂಡು ಹೊರಟು ಹೋಗಿದ್ದರು. ಅಂಬರೀಷ್‌ ಬಂದಾಗ ಕಾರ್ಯಕರ್ತರೇ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT