ADVERTISEMENT

ಜೆಡಿಎಸ್‌ ಜತೆ ಮೈತ್ರಿ ಕಾಂಗ್ರೆಸ್‌ನಲ್ಲೇ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ಬೆಂಗಳೂರು: ಬಿಬಿಎಂಪಿಯಲ್ಲಿ ಜೆಡಿಎಸ್‌ ಜತೆ ಮೈತ್ರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರಾದ ಕಾಂಗ್ರೆಸ್‌ ಶಾಸಕರು ಯತ್ನಿಸುತ್ತಿದ್ದರೆ, ಕಾಂಗ್ರೆಸ್‌ ಪಕ್ಷದ ಇನ್ನೊಂದು ಬಣದಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
‘ಈ ಮೈತ್ರಿಯಿಂದ ಪಕ್ಷಕ್ಕೆ ಯಾವುದೇ ಪ್ರಯೋಜನ ಇಲ್ಲ’ ಎಂದು ಕೆಲವು ಕಾಂಗ್ರೆಸ್‌ ನಾಯಕರು ಅಸಮಾಧಾನ ಹೊರಹಾಕಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮೈತ್ರಿಗಾಗಿ ಕೆಂಪುಹಾಸಿನ ಸ್ವಾಗತವನ್ನೇ ನೀಡಿದ್ದರೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮಾತುಕತೆಗೆ ಆತುರ ತೋರುತ್ತಿಲ್ಲ.

‘ಹೈಕಮಾಂಡ್‌ ಅಥವಾ ಬೇರೆ ಯಾರಿಂದಲೂ ನನಗೆ ಜೆಡಿಎಸ್‌ನ ಯಾವುದೇ ನಾಯಕರ ಜತೆಗೆ ಮಾತನಾಡಲು ಸೂಚನೆ ಸಿಕ್ಕಿಲ್ಲ. ಅಲ್ಲದೆ, ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳಲು ಹೈಕಮಾಂಡ್‌ನಿಂದ ಇದುವರೆಗೆ ಅನುಮತಿ ದೊರೆತಿಲ್ಲ’ ಎಂದು ಪರಮೇಶ್ವರ್‌ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ರಾಜ್ಯಮಟ್ಟದಲ್ಲಿ ನಾವು ಕೆಲವೊಂದು ಮಿತಿಗಳೊಂದಿಗೆ ಕೆಲಸ ಮಾಡುತ್ತೇವೆ. ಮೈತ್ರಿಯಂತಹ ನಿರ್ಧಾರ ಹೈಕಮಾಂಡ್‌ ಮಟ್ಟದಲ್ಲೇ ನಿರ್ಧಾರ ಆಗಬೇಕು. ಅಲ್ಲಿಂದ ಇದುವರೆಗೆ ಯಾವುದೇ ಸೂಚನೆ ಇಲ್ಲದಿರುವ ಕಾರಣ ನಾನು ಜೆಡಿಎಸ್‌ನ ಯಾರನ್ನೂ ಭೇಟಿ ಮಾಡುವ ಯೋಜನೆ ಹೊಂದಿಲ್ಲ’ ಎಂದರು.

‘ಎರಡೂ ಪಕ್ಷಗಳ ಮಧ್ಯೆ ಮೈತ್ರಿ ಏರ್ಪಡಲು ಸಾಕಷ್ಟು ಸಮಾಲೋಚನೆ ನಡೆಯಬೇಕು’ ಎಂದು ಅವರು ಹೇಳಿದರು. ಸಚಿವರಾದ ಡಿ.ಕೆ.ಶಿವಕುಮಾರ್‌ ಹಾಗೂ ಕೆ.ಜೆ.ಜಾರ್ಜ್‌ ಸೋಮವಾರವಷ್ಟೇ ಮೈತ್ರಿ ಯತ್ನಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಅವರ ಆಪ್ತ ಶಾಸಕರು ಜೆಡಿಎಸ್‌ ಜತೆಗಿನ ಮೈತ್ರಿಗೆ ನಡೆಸಿರುವ ಪ್ರಯತ್ನ ತೀವ್ರಗೊಂಡ ಬೆನ್ನಹಿಂದೆಯೇ ಈ ಹೇಳಿಕೆಗಳು ಹೊರಬಿದ್ದಿವೆ.

ಪರಮೇಶ್ವರ್‌ ಅವರು ಬುಧವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಲಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿತ್ತು. ಆದರೆ, ಈ ವದಂತಿಯನ್ನು ಅವರೇ ಸ್ಪಷ್ಟವಾಗಿ ಅಲ್ಲಗಳೆದರು.

‘ಜೆಡಿಎಸ್‌ ಮೈತ್ರಿಯಿಂದ ರಾಜಕೀಯವಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವೇನೂ ಇಲ್ಲ. ಅಲ್ಲದೆ ಬರಲಿರುವ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಮುಖ ಎದುರಾಳಿ ಆಗಿದ್ದು, ಆ ಪಕ್ಷದ ಈಗಿನ ಸ್ನೇಹದಿಂದ ಸಮಸ್ಯೆಯೇ ಹೆಚ್ಚು’ ಎಂದು ಮೈತ್ರಿಗೆ ವಿರೋಧವಾಗಿರುವ ಸಚಿವರು ಕೆಪಿಸಿಸಿ ಅಧ್ಯಕ್ಷರ ಎದುರು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

‘ಜೆಡಿಎಸ್‌ ತಾನು ಜಾತ್ಯತೀತ ಎಂಬುದನ್ನು ತೋರಿಸಿಕೊಳ್ಳಲು ಈ ಅವಕಾಶ ಬಳಸಿಕೊಳ್ಳಲು ಹವಣಿಸುತ್ತಿದೆ. ಆ ಪಕ್ಷದ ಜತೆ ಹೊರಟಿರುವ ನಗರದ ಸಚಿವರು ಹಾಗೂ ಶಾಸಕರ ಅತಿಯಾದ ಉತ್ಸಾಹಕ್ಕೆ ತಕ್ಷಣ ಕಡಿವಾಣ ಹಾಕಬೇಕು’ ಎಂಬ ಮನವಿಯನ್ನೂ ಅವರು ಮಾಡಿದ್ದಾರೆ.

ಬಿಬಿಎಂಪಿ ವಿಷಯದಲ್ಲಿ ಪಕ್ಷ ಇಡಬೇಕಾದ ಹೆಜ್ಜೆಗಳಿಗೆ ಸಂಬಂಧಿಸಿದಂತೆ ಪರಮೇಶ್ವರ್‌ ಅವರು ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದು, ಅದರಲ್ಲಿ ಈ ಅಂಶಗಳನ್ನೂ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಎಸ್‌ ಶಾಸಕರ ಜತೆ ಸಭೆ ನಡೆಸಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಿದ್ಧ ಎಂದು ಘೋಷಿಸಿದ್ದರು.

ಮೈತ್ರಿ ಇಷ್ಟವಿದ್ದರೆ ಕಾಂಗ್ರೆಸ್‌ ನಾಯಕರು ಮಾತುಕತೆಗೆ ಬರಬೇಕು ಎಂಬ ಆಹ್ವಾನ ನೀಡಿದ್ದರು.ಈ ಮಧ್ಯೆ ಮುಖ್ಯಮಂತ್ರಿ ಅವರು ಬುಧವಾರ ಪರಮೇಶ್ವರ್‌ ಜತೆ ಚರ್ಚೆ ನಡೆಸಲಿದ್ದು, ಅವರನ್ನೇ ದೇವೇಗೌಡರ ಬಳಿ ಮಾತುಕತೆಗೆ ಕಳುಹಿಸುವುದು ಖಚಿತ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT