ADVERTISEMENT

ಜ್ಯೇಷ್ಠತೆ ಅಲಕ್ಷಿಸಿ ಹಣ ಬಿಡುಗಡೆ: ಪಾಲಿಕೆ ಆಯುಕ್ತರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:39 IST
Last Updated 1 ಡಿಸೆಂಬರ್ 2015, 19:39 IST

ಬೆಂಗಳೂರು: ‘ಜ್ಯೇಷ್ಠತೆ ಪಟ್ಟಿಯನ್ನು ಕಡೆಗಣಿಸಿ ಪ್ರಭಾವಿ ಗುತ್ತಿಗೆದಾರರಿಗೆ ಬಿಬಿಎಂಪಿ ಆಯುಕ್ತರು ಹಾಗೂ ಮುಖ್ಯ ಲೆಕ್ಕಾಧಿಕಾರಿ ಅವರು ಹಣ ಬಿಡುಗಡೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಕಾರ್ಯದರ್ಶಿ ಕೆ.ಮಾಧವರಾಜು ಅವರು ಬೆಂಗಳೂರು ಮಹಾನಗರ ಕಾರ್ಯಪಡೆಗೆ (ಬಿಎಂಟಿಎಫ್‌) ದೂರು ನೀಡಿದ್ದಾರೆ.

‘ಗುತ್ತಿಗೆದಾರರ ಖಾತೆಗಳಿಗೆ ನೇರವಾಗಿ ಆರ್‌ಟಿಜಿಎಸ್‌ ಮೂಲಕ ಬಾಕಿ ಬಿಲ್‌ ಮೊತ್ತವನ್ನು ಪಾವತಿ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಜ್ಯೇಷ್ಠತೆ ಪಟ್ಟಿ ಉಲ್ಲಂಘನೆ ಮಾಡಬಾರದು ಎಂಬ ನಿರ್ದೇಶನವನ್ನು ಹೈಕೋರ್ಟ್‌ ನೀಡಿದೆ. ರಾಜ್ಯ ನಗರಾಭಿವೃದ್ಧಿ ಇಲಾಖೆಯೂ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಆದರೆ, ಹಣ ಪಾವತಿ ಮಾಡುವಾಗ ಈ ಆದೇಶಗಳನ್ನು ಉಲ್ಲಂಘಿಸಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಆನ್‌ಲೈನ್‌ ಮೂಲಕ ಬಿಲ್‌ ಪಾವತಿಸಲು ರೂಪಿಸಿರುವ ಸಾಫ್ಟ್‌ವೇರ್‌ನಲ್ಲಿದ್ದ ಕೆಲವು ತಾಂತ್ರಿಕ ದೋಷಗಳ ದುರುಪಯೋಗ ಪಡೆದುಕೊಂಡು, ಪ್ರಭಾವಿಗಳ ಒತ್ತಡಕ್ಕೆ ಮಣಿದು ₹ 179 ಕೋಟಿ ಮೊತ್ತವನ್ನು ಜ್ಯೇಷ್ಠತೆಯೇ ಇಲ್ಲದ ಗುತ್ತಿಗೆದಾರರಿಗೆ ಕಾನೂನು ಬಾಹಿರವಾಗಿ ಪಾವತಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಯಶವಂತಪುರ, ರಾಜರಾಜೇಶ್ವರಿನಗರ ಮತ್ತು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದಿವೆ ಎನ್ನಲಾದ ಕಾಮಗಾರಿಗಳಿಗೆ ಹಣ ಪಾವತಿಸಿ, ಅಮಾಯಕ ಗುತ್ತಿಗೆದಾರರನ್ನು ವಂಚಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.