ADVERTISEMENT

ತೆರಿಗೆ ಸಂಗ್ರಹ: ಪೂರ್ವ ವಲಯ ಹಿಂದೆ

₹ 610 ಕೋಟಿ ಗುರಿ, ಪಾವತಿಯಾಗಿರುವುದು ₹ 339.12 ಕೋಟಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:42 IST
Last Updated 1 ಡಿಸೆಂಬರ್ 2015, 19:42 IST

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪೂರ್ವ ವಲಯವು ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿರುವುದಕ್ಕೆ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜು ಅವರ ನೇತೃತ್ವದಲ್ಲಿ ಈ ಸಭೆ ನಡೆಯಿತು. ‘ತೆರಿಗೆ ಸಂಗ್ರಹಕ್ಕೆ ಬುಧವಾರದಿಂದಲೇ ವಿಶೇಷ ಅಭಿಯಾನ ಹಮ್ಮಿಕೊಂಡು ತಿಂಗಳಾಂತ್ಯದ ವೇಳೆಗೆ ಬಾಕಿ ತೆರಿಗೆಯನ್ನು ವಸೂಲಿ ಮಾಡಬೇಕು’ ಎಂದು ಸೂಚಿಸಿದರು.

ಪೂರ್ವ ವಲಯಕ್ಕೆ ₹ 610 ಕೋಟಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿತ್ತು. ಇದುವರೆಗೆ ₹ 339.12 ಕೋಟಿ ಸಂಗ್ರಹ ಮಾಡಲಾಗಿದೆ (ಶೇ 55ರಷ್ಟು ಗುರಿ ಸಾಧನೆ) ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು. ಇದರಿಂದ ಸಿಡಿಮಿಡಿಗೊಂಡ ಸ್ಥಾಯಿ ಸಮಿತಿ ಅಧ್ಯಕ್ಷರು, ‘ಹೆಚ್ಚು ತೆರಿಗೆ ಸಂಗ್ರಹ ಆಗಬೇಕಿದ್ದ ವಲಯ ಇದು. ಇಷ್ಟೊಂದು ಕಳಪೆ ಸಾಧನೆಗೆ ಏನು ಕಾರಣ’ ಎಂದು ಪ್ರಶ್ನಿಸಿದರು.

‘ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಶಿಫಾರಸು ಮಾಡಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು. ‘ವಲಯದ ವ್ಯಾಪ್ತಿಯಲ್ಲಿ ತೆರಿಗೆ ತುಂಬಲು ಸಾರ್ವಜನಿಕರು ನೀಡಿದ್ದ ಎಷ್ಟು ಚೆಕ್‌ಗಳು ಬೌನ್ಸ್‌ ಆಗಿವೆ’ ಎಂದು ಅವರು ವಿಚಾರಿಸಿದರು. ‘ಕಳೆದ ಆರು ವರ್ಷಗಳಲ್ಲಿ 760 ಚೆಕ್‌ಗಳು ಬೌನ್ಸ್‌ ಆಗಿದ್ದು, ಅವುಗಳ ಮೊತ್ತ 1.62 ಕೋಟಿ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಚೆಕ್‌ ಬೌನ್ಸ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪಟ್ಟಿ ತಯಾರಿಸಬೇಕು. ಈ ಪ್ರಕರಣಗಳಿಂದ ಬಿಬಿಎಂಪಿ ಅನುಭವಿಸಿರುವ ಹಾನಿಯನ್ನು ಸಂಬಂಧಪಟ್ಟವರಿಂದ ಡಿ. 31ರೊಳಗೆ ಸಂಪೂರ್ಣವಾಗಿ ವಸೂಲಿ ಮಾಡಬೇಕು’ ಎಂದು ಅಧ್ಯಕ್ಷರು ಸೂಚಿಸಿದರು.

‘ಆಸ್ತಿ ತೆರಿಗೆ ವಸೂಲಾತಿಗೆ ಪ್ರತಿ ಬುಧವಾರ ವಿಶೇಷ ಆಂದೋಲನ ನಡೆಸಲು ನಿರ್ಧರಿಸಲಾಗಿದ್ದು, ಡಿ. 2ರಂದು ಪ್ರತಿಯೊಂದು ವಲಯದಲ್ಲಿ ನಡೆಯಲಿರುವ ಆಂದೋಲನದ ಮೊದಲ ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ’ ಎಂದು ಶಿವರಾಜು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.