ADVERTISEMENT

ಥಾಮಸ್‌ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:30 IST
Last Updated 18 ಏಪ್ರಿಲ್ 2014, 19:30 IST
ಅಖಿಲ ಕರ್ನಾಟಕ ಕ್ಯಾಥೋಲಿಕ್‌ ಕ್ರೈಸ್ತ ಕನ್ನಡ ಸಂಘದ ಸದಸ್ಯರು ನಗರದ ಸಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ   ಫಾದರ್ ಕೆ.ಜೆ. ಥಾಮಸ್ ಅವರ ಕೊಲೆಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು  ಪ್ರತಿಭಟನೆ ನಡೆಸಿದರು 	 –ಪ್ರಜಾವಾಣಿ ಚಿತ್ರ
ಅಖಿಲ ಕರ್ನಾಟಕ ಕ್ಯಾಥೋಲಿಕ್‌ ಕ್ರೈಸ್ತ ಕನ್ನಡ ಸಂಘದ ಸದಸ್ಯರು ನಗರದ ಸಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಫಾದರ್ ಕೆ.ಜೆ. ಥಾಮಸ್ ಅವರ ಕೊಲೆಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಲ್ಲೇಶ್ವರದ ಸೇಂಟ್ ಪೀಟರ್ಸ್‌ ಸೆಮಿನರಿಯ ರೆಕ್ಟರ್‌ ಕೆ.ಜೆ.ಥಾಮಸ್‌ ಅವರ ಕೊಲೆ ಪ್ರಕರ­ಣದ ತನಿಖೆಯನ್ನು ಸಿಬಿಐಗೆ ವಹಿಸ­ಬೇಕೆಂದು ಒತ್ತಾಯಿಸಿ ಅಖಿಲ ಕರ್ನಾ­ಟಕ ಕ್ಯಾಥೋಲಿಕ್‌ ಕ್ರೈಸ್ತ ಕನ್ನಡ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನ­ದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ರಫಾಯಲ್‌ ರಾಜ್‌, ‘ಶುಭ ಶುಕ್ರವಾರ (ಗುಡ್‌ ಫ್ರೈಡೆ) ದಿನವಾದ ಇಂದು ಏಸುಕ್ರಿಸ್ತನನ್ನು ಶಿಲುಬೆಗೆ ಏರಿಸಿದ ದಿನವಾಗಿದೆ. ಅದೇ ರೀತಿ ನಿರಾಪರಾಧಿಗಳಾದ ಕನ್ನಡ ಗುರುಗಳನ್ನು ಬಂಧಿಸಿರುವುದು ಕನ್ನಡಿಗರಿಗೆ ನಿಜವಾಗಿ ಶಿಲುಬೆಗೇರಿಸಿದ ದಿನದಂತಾಗಿದೆ’ ಎಂದರು.

‘ಪ್ರಕರಣದಲ್ಲಿ ಬಂಧಿಸಿರುವ  ಅಮಾಯಕ ಪಾದ್ರಿಗಳಾದ ಫಾದರ್‌ ಎಲಿಯಸ್ ಮತ್ತು ಫಾದರ್‌ ವಿಲಿಯಂ ಪ್ಯಾಟ್ರಿಕ್‌ ಅವರನ್ನು ಕೊಲೆಪಾತಕರ ಸಾಲಿಗೆ ನಿಲ್ಲಿಸಿರುವುದು ಅನ್ಯಾಯ­ವಾಗಿದೆ. ಈ ಪ್ರಕರಣದಲ್ಲಿ ಆರ್ಚ್ ಬಿಷಪ್‌ ಬರ್ನಾಡ್‌ ಮೊರಾಸ್‌ ಅವರು ತಟಸ್ಥರಾ­ಗಿರು­ವುದು ಸರಿಯಲ್ಲ. ಅವರ ನಡೆ ಹಲವು ಅನು­ಮಾನಗಳಿಗೆ ಕಾರಣ­ವಾಗಿದೆ’ ಎಂದು ಹೇಳಿದರು.  

‘ಪ್ರಕರಣದ ತನಿಖೆ ನಡೆಸುತ್ತಿರುವ ಡಿಸಿಪಿ ವಿಕ್ಟರ್‌ ಡಿಸೋಜಾ ಅವರು ಕನ್ನಡ ಧರ್ಮಗುರುಗಳನ್ನು ಹಾಗೂ ಕನ್ನಡ ಕ್ರೈಸ್ತರನ್ನು  ತನಿಖೆಗೆ ಎಂದು ಒಳಪಡಿಸಿ ಬಲವಂತವಾಗಿ ಹೇಳಿಕೆ ಪಡೆದಿದ್ದಾರೆ.  ಇದರ ಹಿಂದೆ ಗೃಹ ಸಚಿವ ಕೆ.ಜೆ.­ಜಾರ್ಜ್‌ ಅವರ ಕೈವಾಡವಿದೆ. ಹೀಗಾಗಿ ಅವ­ರನ್ನು ಸಚಿವ ಸ್ಥಾನದಿಂದ ವಜಾಗೊ­ಳಿಸಬೇಕು’ ಎಂದು ಆಗ್ರಹಿಸಿದರು.

ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ‘ಕೆಲ ವ್ಯಕ್ತಿಗಳ ಒತ್ತಾಸೆಗೆ ಮಣಿದು ಕನ್ನಡ ಕ್ರೈಸ್ತ ಧರ್ಮಗುರುಗಳನ್ನು ಬಂಧಿಸಿರುವುದು ಸರಿಯಲ್ಲ’ ಎಂದರು.

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್, ಸಾಹಿತಿ ಎಲ್‌.­ಎನ್‌.ಮುಕುಂದರಾಜ್‌, ಶ್ರೀಸಾಮಾ­ನ್ಯರ ಕೂಟದ ಅಧ್ಯಕ್ಷ ಶ್ರ.ದೆ.ಪಾರ್ಶ್ವನಾಥ್, ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಮತ್ತಿ­ತ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿ­ದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.