ADVERTISEMENT

ದರ ಇಳಿದರೂ ಪ್ರಯಾಣಿಕನಿಗಿಲ್ಲ ಲಾಭ!

ಹಬ್ಬದ ದಟ್ಟಣೆಯ ಅನುಕೂಲ ಪಡೆಯಲು ಮುಂದಾದ ಖಾಸಗಿ ಸಂಸ್ಥೆಗಳು

ವಿಜಯ ಜೋಷಿ
Published 20 ಅಕ್ಟೋಬರ್ 2014, 19:48 IST
Last Updated 20 ಅಕ್ಟೋಬರ್ 2014, 19:48 IST

ಬೆಂಗಳೂರು: ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣಾ ಕ್ರಮದಿಂದ ಡೀಸೆಲ್‌ ದರ ಇಳಿದಿದ್ದರೂ, ಖಾಸಗಿ ಬಸ್‌ ಕಂಪೆನಿಗಳು ಪ್ರಯಾಣ ದರವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಲವು ಪಟ್ಟು ಹೆಚ್ಚಿಸಿವೆ.  ಹಬ್ಬಕ್ಕೆ ಊರಿಗೆ ಹೋಗಲು ಸಾರ್ವಜನಿಕರು ತುದಿಗಾಲ ಮೇಲೆ ನಿಲ್ಲುವುದು ಇವಕ್ಕೆ ಬಂಡವಾಳ ಆಗಿರುವ ಕಾರಣ, ಪ್ರಯಾಣ ದರ ಗಗನಮುಖಿಯಾಗಿದೆ.

ಭಾನುವಾರದಿಂದ ಅನ್ವಯ ಆಗುವಂತೆ ಡೀಸೆಲ್‌ ದರವನ್ನು ಪ್ರತಿ ಲೀಟರ್‌ಗೆ ರೂ. 3.64 ಕಡಿಮೆ ಮಾಡಲಾಗಿದೆ. ಆದರೆ, ಬಸ್‌ ಪ್ರಯಾಣ ದರ ಪ್ರತಿ ಸೀಟಿಗೆ ರೂ. 500 ರಿಂದ ರೂ. 2,100 ರಷ್ಟು ಹೆಚ್ಚಳ ಆಗಿದೆ!

ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಪ್ರಸಿದ್ಧ ಖಾಸಗಿ ಸಾರಿಗೆ ಸಂಸ್ಥೆಯೊಂದರ ಸುಖಾಸೀನ ಬಸ್‌ ಪ್ರಯಾಣ ದರ ಸಾಮಾನ್ಯ ದಿನಗಳಲ್ಲಿ ರೂ. 480 ರಿಂದ ರೂ. 500ರ ಆಸುಪಾಸಿನಲ್ಲಿ ಇರುತ್ತದೆ. ಆದರೆ ದೀಪಾವಳಿ ನಿಮಿತ್ತ ಇದೇ ಬಸ್‌ನ ಪ್ರಯಾಣ ದರವನ್ನು ರೂ. 1080ಕ್ಕೆ (ತೆರಿಗೆ ಹೊರತುಪಡಿಸಿ) ಹೆಚ್ಚಿಸಲಾಗಿದೆ. ದೀಪಾವಳಿ ನಂತರದ ದಿನಗಳಲ್ಲಿ ಈ ದರ ಮೊದಲಿನಷ್ಟೇ ಆಗಲಿದೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುವ ಖಾಸಗಿ ಕಂಪೆನಿಯೊಂದರ ಮಲ್ಟಿ ಆ್ಯಕ್ಸೆಲ್‌ ವೋಲ್ವೊ ಬಸ್‌ ಪ್ರಯಾಣ ದರ ಸಾಮಾನ್ಯ ದಿನಗಳಲ್ಲಿ ರೂ. 700. ಆದರೆ ದೀಪಾವಳಿ ವೇಳೆ ಇದರ ದರ ನಾಲ್ಕು ಪಟ್ಟು (ರೂ. 2,800ಕ್ಕೆ) ಏರಿದೆ.

‘ದೀಪಾವಳಿ, ನವರಾತ್ರಿ, ಗಣೇಶ ಚತುರ್ಥಿಯಂಥ ಹಬ್ಬದ ಸಂದರ್ಭ­ಗಳಲ್ಲಿ ಮಾತ್ರ ಬೆಲೆ ಹೆಚ್ಚಳ ಏಕೆ?’ ಎಂಬ ಪ್ರಶ್ನೆಗೆ, ‘ಹಬ್ಬ ಬಂತೆಂದರೆ ಬೆಂಗಳೂರಿನಿಂದ ತಮ್ಮ ಊರಿಗೆ ತೆರಳುವ ಜನರ ಸಂಖ್ಯೆ ವಿಪರೀತ ಇರುತ್ತದೆ. ಬಸ್‌ ಟಿಕೆಟ್‌ಗೆ ಬೇಡಿಕೆ ಹೆಚ್ಚುವ ಕಾರಣ ಬೆಲೆ ಕೂಡ ಹೆಚ್ಚು’ ಎಂದು ಟಿಕೆಟ್‌ ಬುಕಿಂಗ್‌ ಪ್ರತಿನಿಧಿಯೊಬ್ಬರು ಹೇಳಿದರು.

ಬೆಲೆ ಏರಿಕೆಗೆ ಲಗಾಮು?: ಖಾಸಗಿ ಬಸ್ಸುಗಳು ಟಿಕೆಟ್‌ ಬೆಲೆಯಲ್ಲಿ ವಿಪರೀತ ಹೆಚ್ಚಳ ಮಾಡುವುದಕ್ಕೆ ಲಗಾಮು ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಟಿಕೆಟ್‌ಗೆ ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತ ವಸೂಲಿ ಮಾಡುವ ಬಸ್ಸುಗಳ ಪರವಾನಗಿ ರದ್ದು ಮಾಡುವ ಇರಾದೆ ಇಲಾಖೆಗೆ ಇದೆ. ಈ ಸಂಬಂಧ ನಿಯಮ ರೂಪಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಖಾಸಗಿ ಬಸ್ಸುಗಳ ಪ್ರಯಾಣ ದರದ ಮೇಲೆ ಕಣ್ಣಿಡುವಂತೆ ಸಾರಿಗೆ ಆಯುಕ್ತ ಡಾ. ರಾಮೇಗೌಡ ಅವರೂ ಇಲಾಖೆಯ ಅಧಿಕಾರಿ­ಗಳಿಗೆ ಸೂಚಿಸಿದ್ದಾರೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಖಾಸಗಿ ಬಸ್ಸುಗಳ ಟಿಕೆಟ್‌ ದರ ನಿಯಂತ್ರಿಸಲು ರಾಜ್ಯದಲ್ಲಿ ಈಗ ಯಾವುದೇ ಪ್ರಾಧಿಕಾರ ಇಲ್ಲ. ಈಗ ಸಾಗಣೆ ಗುತ್ತಿಗೆ ನಿಯಮಗಳಿಗೆ ತಿದ್ದುಪಡಿ ತಂದು ಖಾಸಗಿ ಬಸ್‌ಗಳ ಪ್ರಯಾಣ ದರ ಏರಿಕೆ ನಿಯಂತ್ರಣಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೂಡ ಹಬ್ಬದ ಸಂದರ್ಭದಲ್ಲಿ ಬಸ್‌ ಪ್ರಯಾಣ ದರವನ್ನು ಹೆಚ್ಚಿಸುತ್ತದೆ. ಆದರೆ ಇದು ಹಬ್ಬದ ವೇಳೆಯಲ್ಲಿ ಸಂಚರಿಸುವ ವಿಶೇಷ ಬಸ್ಸುಗಳಿಗೆ ಮಾತ್ರ ಅನ್ವಯ. ಮೂಲ ದರದ ಶೇಕಡ 10ರಷ್ಟನ್ನು ಮಾತ್ರ ಕೆಎಸ್‌ಆರ್‌ಟಿಸಿ ಹೆಚ್ಚು ಮಾಡುತ್ತದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಪೀಣ್ಯ ಬಸ್‌ ನಿಲ್ದಾಣ ತಂದ ಅವ್ಯವಸ್ಥೆ
ಉತ್ತರ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಲವು ಬಸ್ಸುಗಳು ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣದಿಂದ ಹೊರಡುತ್ತವೆ. ಇದು ಕೂಡ ಸಾರ್ವಜನಿಕರ ಆಕ್ಷೇಪಣೆಗೆ ತುತ್ತಾಗಿದೆ. ಪೀಣ್ಯ ಬಸ್‌ ನಿಲ್ದಾಣ ಮೆಜೆಸ್ಟಿಕ್‌ನಿಂದ 11.7 ಕಿ.ಮೀ ದೂರದಲ್ಲಿದೆ. ಪರ ಊರುಗಳಿಂದ ಬೆಂಗಳೂರಿಗೆ ಅಪರೂಪಕ್ಕೊಮ್ಮೆ ಬರುವ ಸಾರ್ವಜನಿಕರು ಪೀಣ್ಯ ಬಸ್‌ ನಿಲ್ದಾಣದಲ್ಲಿ ಇಳಿದು ಗಲಿಬಿಲಿಗೆ ಒಳಗಾಗಿದ್ದೂ ಇದೆ.

ಬಸ್‌ನಲ್ಲಿ ಪಟಾಕಿ
ದೀಪಾವಳಿಗೆ ಊರಿಗೆ ಹೋಗುವ ಸಾರ್ವಜನಿಕರು ಬಸ್‌ನಲ್ಲೇ ಪಟಾಕಿ ಕೊಂಡೊಯ್ಯುತ್ತಾರೆ. ಪಟಾಕಿಯನ್ನು ಬಸ್‌ನ ಅಡಿ ಭಾಗದ ಡಿಕ್ಕಿಯಲ್ಲಿ ಇಡಲಾಗುತ್ತದೆ. ಇದರ ಹತ್ತಿರದಲ್ಲೇ ಡೀಸೆಲ್‌ ಟ್ಯಾಂಕ್‌ ಕೂಡ ಇರುತ್ತದೆ. ಕೆಲವು ಖಾಸಗಿ ಬಸ್‌ಗಳು ಸುರಕ್ಷತಾ ಕ್ರಮಗಳನ್ನು ಸರಿಯಾಗಿ ತೆಗೆದುಕೊಳ್ಳುವುದಿಲ್ಲ. ಇಂಥ ಸಂದರ್ಭದಲ್ಲಿ ಒಂದು ಕಿಡಿ ತಾಗಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.