ADVERTISEMENT

ದುಡ್ಡು ಕೊಡ್ತೀವಿ, ನೀವೇ ಕಟ್ಟಿಕೊಡಿ

ಶಿವಾನಂದ ಉಕ್ಕಿನ ಮೇಲ್ಸೇತುವೆ: ಅರ್ಜಿದಾರರಿಗೆ ಬಿಬಿಎಂಪಿ ಸವಾಲು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 20:30 IST
Last Updated 5 ಡಿಸೆಂಬರ್ 2017, 20:30 IST
ದುಡ್ಡು ಕೊಡ್ತೀವಿ, ನೀವೇ ಕಟ್ಟಿಕೊಡಿ
ದುಡ್ಡು ಕೊಡ್ತೀವಿ, ನೀವೇ ಕಟ್ಟಿಕೊಡಿ   

ಬೆಂಗಳೂರು: ‘ನಾವು ದುಡ್ಡು ಕೊಡ್ತೀವಿ. ಬೇಕಾದ್ರೆ ನೀವೆ ಉಕ್ಕಿನ ಮೇಲ್ಸೇತುವೆ ಕಟ್ಟಿಕೊಡಿ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ಹಿರಿಯ ವಕೀಲ ಡಿ.ಎನ್‌.ನಂಜುಂಡ ರೆಡ್ಡಿ ಮೇಲ್ಸೇತುವೆ ವಿರೋಧಿಸುತ್ತಿರುವ ಅರ್ಜಿದಾರರಿಗೆ ಸವಾಲು ಹಾಕಿದರು.

ಈ ಕುರಿತಂತೆ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್ ಮತ್ತು 19 ಜನ ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ಮುಂದುವರಿಸಿತು.

‘ಮೇಲ್ಸೇತುವೆ ಇಳಿಕೆ ಮಾರ್ಗದಲ್ಲಿ ಅಪಘಾತ ಸಂಭವಿಸಿದರೆ ಯಾರು ಜವಾಬ್ದಾರರು, ಈ ವಿಷಯದಲ್ಲಿ ನೀವು ಸಾರ್ವಜನಿಕರ ಹಿತರಕ್ಷಣೆ ರಾಜಿ ಮಾಡಿಕೊಂಡಿದ್ದೀರಾ, ರೈಲ್ವೆ ಸೇತುವೆ ಬಳಿ ಮತ್ತೆ ಸಂಚಾರ ದಟ್ಟಣೆ ಉಂಟಾಗುವುನ್ನು ಹೇಗೆ ತಡೆಯುತ್ತೀರಿ, ಇಳಿಯುವ ಮಾರ್ಗದ ಎತ್ತರವನ್ನು ಇನ್ನಷ್ಟು ಕಡಿಮೆ ಮಾಡಬಹುದೇ ಹೇಗೆ’ ಎಂಬ ನ್ಯಾಯಪೀಠದ ಪ್ರಶ್ನೆಗಳಿಗೆ ನಂಜುಂಡ ರೆಡ್ಡಿ ಉತ್ತರಿಸಿದರು.

ADVERTISEMENT

‘ಈ ಮಾರ್ಗದಲ್ಲಿ ವಾಹನ ಸಂಚಾರಗಳ ವೇಗ ಗರಿಷ್ಠ 40 ಕಿ.ಮೀ. ಇರುತ್ತದೆ. ರೈಲ್ವೆ ಇಲಾಖೆ ಅನುಮತಿ ನೀಡಿದ್ದೇ ಆದರೆ ರೈಲ್ವೆ ಸೇತುವೆ ಕೆಳಗೆ ಇನ್ನೂ ಎರಡು ಮಾರ್ಗಗಳನ್ನು ನಿರ್ಮಿಸಲು ಬಿಬಿಎಂಪಿ ಸಿದ್ಧವಿದೆ. ಈಗಿನ ಯೋಜನೆಯ ಪ್ರಕಾರ 4.5 ಮೀಟರ್‌ ಎತ್ತರದಿಂದ ಯಾವುದೇ ಅಪಾಯವಿಲ್ಲ’ ಎಂದರು.

‘ಭಾರತೀಯ ರೋಡ್ ಕಾಂಗ್ರೆಸ್‌ ನಿಯಮಾವಳಿಗೆ ಅನುಸಾರವಾಗಿಯೇ ಲೋಕೋಪಯೋಗಿ ಇಲಾಖೆ ಈ ಯೋಜನೆಗೆ ಕೈಜೋಡಿಸಿದೆ. 5.5 ಮೀಟರ್ ಎತ್ತರ ಸಾಧ್ಯವಿಲ್ಲದ ಮಾತು. ಬೇಕಿದ್ದರೆ ಅರ್ಜಿದಾರರಿಗೆ ಬಿಬಿಎಂಪಿ ಹಣ ಕೊಡುತ್ತದೆ ಅವರೇ ಕಟ್ಟಿಕೊಡಲಿ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ನೀವು ಮುಂದಿನ 100 ವರ್ಷದ ಆಲೋಚನೆ ಮಾಡಿ ಯಾವುದೇ ಯೋಜನೆ ಜಾರಿಗೆ ತನ್ನಿ’ ಎಂದು ನಂಜುಂಡ ರೆಡ್ಡಿ ಅವರಿಗೆ ಸಲಹೆ ನೀಡಿತು.

‘ಮೇಲ್ಸೇತುವೆಯಿಂದ ಕೆಳಗೆ ಇಳಿಯುವ ತುದಿಯಲ್ಲಿ ಯಾವುದೇ ಸಂಚಾರ ದಟ್ಟಣೆ, ಅಪಘಾತ ಆಗುವುದಿಲ್ಲ ಎಂಬ ಬಗ್ಗೆ ಖಾತ್ರಿ ನೀಡುವ ಸಕ್ಷಮ ಪ್ರಾಧಿಕಾರದ ಪ್ರಮಾಣ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಿ’ ಎಂದು ವಿಚಾರಣೆಯನ್ನು ಬುಧವಾರಕ್ಕೆ (ಡಿ.6) ಮುಂದೂಡಿತು.

**

ಮೇಲ್ಸೇತುವೆ ಮೇಲೆ ಮತ್ತೊಂದು ಸೇತುವೆ

‘ಈಗ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಮೇಲೆ ಜನಾರ್ದನ ಹೋಟೆಲ್‌ ಕಡೆಯಿಂದ ಚಿತ್ರಕಲಾ ಪರಿಷತ್‌ ಕಡೆ ಸಾಗುವ ಮಾರ್ಗದಲ್ಲಿ ಇನ್ನೊಂದು ಉಕ್ಕಿನ ಮೇಲ್ಸೇತುವೆ ನಿರ್ಮಸಲಾಗುವುದು’ ಎಂದು ನಂಜುಂಡ ರೆಡ್ಡಿ ಇದೇ ವೇಳೆ ನ್ಯಾಯಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.