ADVERTISEMENT

ದುಬಾರಿಯಾಯಿತು ಟ್ಯಾಂಕರ್‌ ನೀರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:36 IST
Last Updated 24 ಮಾರ್ಚ್ 2018, 19:36 IST

ಬೆಂಗಳೂರು: ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ನೀರಿನ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಹೀಗಾಗಿ, ನೀರಿನ ಟ್ಯಾಂಕರ್‌ಗಳ ಮಾಲೀಕರು ಬೆಲೆಯನ್ನು ಹೆಚ್ಚಿಸಿದ್ದಾರೆ.

ಕೆ.ಆರ್‌.ಪುರದ ರಾಮಮೂರ್ತಿ ನಗರಕ್ಕೆ ಮೂರು ವರ್ಷಗಳ ಹಿಂದೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ, ಪೂರೈಕೆ ಮಾಡುತ್ತಿರುವ ನೀರು ಸಾಕಾಗುತ್ತಿಲ್ಲ.

ಜಲಮಂಡಳಿಯು ನೀರಿನ ಸಂಪರ್ಕ ಕಲ್ಪಿಸಿ, ಮೀಟರ್‌ ಅಳವಡಿಸಿದೆ. ಆದರೆ, ವಾರಕ್ಕೊಮ್ಮೆ ನೀರು ಬಿಡುತ್ತಿದೆ. ನೀರಿನ ಅಭಾವದಿಂದಾಗಿ ಖಾಸಗಿ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾಗಿದೆ ಎಂದು ಸ್ಥಳೀಯ ನಿವಾಸಿ ಆಂಜನಪ್ಪ ಅಳಲುತೋಡಿಕೊಂಡರು.

ADVERTISEMENT

ಜಲಮಂಡಳಿಯ ಪ್ರತಿ ಟ್ಯಾಂಕರ್‌ ನೀರಿಗೆ ₹400 ಇದ್ದರೆ, ಖಾಸಗಿ ಟ್ಯಾಂಕರ್‌ ನೀರಿಗೆ ₹600 ಬೆಲೆ ಇದೆ. ಏಪ್ರಿಲ್‌– ಮೇ ತಿಂಗಳಲ್ಲಿ ಟ್ಯಾಂಕರ್‌ ನೀರಿನ ಬೆಲೆ ಎರಡರಷ್ಟಾಗುತ್ತದೆ ಎಂದರು.

ಟಿನ್‌ ಫ್ಯಾಕ್ಟರಿ ಸಮೀಪದ ವಿಜಿನಾಪುರ ವಾರ್ಡ್‌ನಲ್ಲಿ ನೀರಿನ ಸರಬರಾಜು ಇದಕ್ಕಿಂತ ಭಿನ್ನವಾಗಿಲ್ಲ.

ನಾರಾಯಣಪುರ ವಾರ್ಡ್‌ನ ವೆಂಕಟಪ್ಪ ಕಾಲೊನಿಯಲ್ಲಿ ಸುಮಾರು 200 ಕುಟುಂಬಗಳು ವಾಸವಾಗಿವೆ. ಕಾವೇರಿ ಸಂಪರ್ಕ ಕಲ್ಪಿಸಿದ್ದರೂ ನೀರಿನ ಪೂರೈಕೆ ಮಾಡುತ್ತಿಲ್ಲ. ಇಲ್ಲಿನ ನಿವಾಸಿಗಳು ₹800 ಪಾವತಿಸಿ ಟ್ಯಾಂಕರ್‌ ನೀರು ಪಡೆಯುತ್ತಿದ್ದಾರೆ.

ಈ ಭಾಗಕ್ಕೆ ನೀರು ಬಿಡುತ್ತಿಲ್ಲ. ಜನರ ಅಸಹಾಯಕತೆಯನ್ನೇ ಟ್ಯಾಂಕರ್‌ ಮಾಲೀಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಟ್ಯಾಂಕರ್‌ ನೀರಿನ ಬೆಲೆ ₹1,000ಕ್ಕೆ ಏರಿಕೆ ಆಗಬಹುದು ಎಂದು ಗೌರಮ್ಮ ಹೇಳಿದರು.

ಹತ್ತಿರದ ಮನೆಗಳಿಗೆ ನೀರು ಪೂರೈಸಲು ₹450 ಪಡೆಯುತ್ತೇವೆ. ಆದರೆ, ದೂರದ ಮನೆಗಳಿಗೆ ₹600 ಮಾಡುತ್ತೇವೆ. ಬೇಡಿಕೆ ಹೆಚ್ಚಿದಂತೆ ಬೆಲೆಯನ್ನೂ ಹೆಚ್ಚಿಸಬೇಕಾದದ್ದು ಅನಿವಾರ್ಯ ಎಂದು ಮೈಲಾರಲಿಂಗೇಶ್ವರ ನೀರಿನ ಟ್ಯಾಂಕರ್‌ನ ಗಂಗರಾಜು ಹೇಳಿದರು.

‘ಕಾವೇರಿ ನೀರಿನ ಸಂಪರ್ಕ ಕಲ್ಪಿಸದ ಭಾಗಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ. ಕೊಳವೆ ಮಾರ್ಗ ಅಳವಡಿಸಿದ ಬಳಿಕ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾದರೆ ಮಾತ್ರ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತೇವೆ’ ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ (ನಿರ್ವಹಣೆ) ಎಚ್.ಎಂ.ರವೀಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.