ADVERTISEMENT

ನಗರದಲ್ಲಿ ಲೆಕ್ಕಕ್ಕೆ ಸಿಗದ ಅರ್ಧದಷ್ಟು ಕಾವೇರಿ ನೀರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:34 IST
Last Updated 29 ಜುಲೈ 2015, 19:34 IST

ಬೆಂಗಳೂರು: ‘ನಗರದಲ್ಲಿ ಲೆಕ್ಕಕ್ಕೆ ಸಿಗದ ಕಾವೇರಿ ನೀರಿನ ಪ್ರಮಾಣ ಶೇಕಡಾ 48ರಷ್ಟು ಇದೆ. ಒಂದು ತಿಂಗಳೊಳಗೆ ಲೆಕ್ಕಕ್ಕೆ ಸಿಗದ ಕಾವೇರಿ ನೀರಿನ ಪ್ರಮಾಣವನ್ನು ಕನಿಷ್ಠ ಶೇ 10ರಷ್ಟು ಇಳಿಸಬೇಕು’ ಎಂದು ಜಲಮಂಡಳಿ ಅಧ್ಯಕ್ಷ ಅಂಜುಮ್‌ ಪರ್ವೇಜ್‌ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಲಮಂಡಳಿಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ   ಸಭೆಯಲ್ಲಿ ಅವರು ಮಾತನಾಡಿದರು. ‘ಪ್ರತಿ ಉಪ ವಿಭಾಗದ ಅಧಿಕಾರಿಗಳಿಗೆ ತಮ್ಮ  ಪ್ರದೇಶಕ್ಕೆ  ಪೂರೈಕೆಯಾಗುವ  ನೀರಿಗೆ ಉತ್ತರದಾಯಿತ್ವ ಇರಬೇಕು. ಅವರು ಪೂರೈಕೆಯಾಗುವ ನೀರಿನ  ನಿಖರ ಮಾಹಿತಿ ಹೊಂದಿರಬೇಕು. ಎಲ್ಲ  ಉಪ ವಿಭಾಗಗಳಲ್ಲಿ ತಿಂಗಳೊಳಗೆ ನೀರಿನ ಒಳ ಹರಿವು ಮತ್ತು ಹೊರಹರಿವಿನ ಪಾಯಿಂಟ್‌ಗಳಿಗೆ ಕಡ್ಡಾಯವಾಗಿ ಬಲ್ಕ್ ಫ್ಲೊ ಮೀಟರ್‌ಗಳನ್ನು  ಅಳವಡಿಸಿಕೊಳ್ಳಬೇಕು’ ಎಂದು ಅವರು ಸೂಚಿಸಿದರು.

‘ಒಂದು ಸಲ ತಮ್ಮ ವ್ಯಾಪ್ತಿಗೆ ಬರುವ ನೀರಿನ ಮಾಹಿತಿ ಲಭ್ಯವಾದರೆ ಮುಂಬರುವ  ತಿಂಗಳಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು  ಕಡಿಮೆ ಮಾಡಲು ಸಾಧ್ಯ. ಸಾರ್ವಜನಿಕ ನಲ್ಲಿಗಳು,  ಕೊಳೆಗೇರಿ ಪ್ರದೇಶಗಳಿಗೆ  ನೀಡಲಾಗುತ್ತಿರುವ ನೀರಿನ ಪ್ರಮಾಣದ  ಮಾಹಿತಿಯೂ ಅಗತ್ಯ.  ನಗರದಲ್ಲಿನ ಕೊಳೆಗೇರಿ ಪ್ರದೇಶಗಳನ್ನು  ಗುರುತಿಸಿ   ಡಿಸ್ಟಿಕ್ಟ್ ಮೀಟರಿಂಗ್ ವ್ಯವಸ್ಥೆ (ಡಿಎಂಎ)   ರೂಪಿಸಿ ಮೀಟರ್ ಅಳವಡಿಸಬೇಕು’ ಎಂದರು.

‘ಮುಂದಿನ ಎರಡು ತಿಂಗಳ ಅವಧಿಯಲ್ಲಿ ಶೇ 50 ರಷ್ಟು ಕೊಳೆಗೇರಿ ಪ್ರದೇಶಗಳ ದಾಖಲೀಕರಣ ಆಗಬೇಕು. ತಿಂಗಳೊಳಗೆ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು  ಕನಿಷ್ಠ ಶೇ 10 ರಷ್ಟು ಕಡಿಮೆ ಮಾಡಬೇಕು.  ಪ್ರತಿ ವಿಭಾಗದ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು’ ಎಂದರು.

‘ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.  ಒಂದು ವರ್ಷದ ಅವಧಿಯಲ್ಲಿ  ನೀರಿನ ಸಂಪರ್ಕ ನೀಡಲಾಗಿರುವ 30x40  ಮತ್ತು ಮೇಲ್ಪಟ್ಟು  ಗಾತ್ರದ ನಿವೇಶನದ ಕಟ್ಟಡಗಳ  ಪಟ್ಟಿ ಮಾಡಬೇಕು. ಅವುಗಳಲ್ಲಿ ಎಷ್ಟು ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ವಿಚಕ್ಷಣ ದಳ ರಚನೆ: ‘ಮಂಡಳಿಯ ಆದಾಯ ಸೋರಿಕೆ ತಡೆಗಟ್ಟಲು ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲು 18 ತಂಡಗಳನ್ನು ರಚಿಸಲಾಗಿದೆ. ಈ ವಿಚಕ್ಷಣಾ ತಂಡಗಳು  ನೀರಿನ ಮೀಟರ್ ರೀಡಿಂಗ್, ಅನಧಿಕೃತ ಸಂಪರ್ಕ ಇತ್ಯಾದಿಗಳ ತಪಾಸಣೆಯನ್ನು  ಮಾಡಲಿವೆ. ಆಗಸ್ಟ್ ತಿಂಗಳಿಂದ ಕಾರ್ಯಾಚರಣೆ ಆರಂಭವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.