ADVERTISEMENT

ನಾಯಿ ಸಾಕಲು ಬೇಕು ಪರವಾನಗಿ!

ಕೆ.ಎಂ.ಸಂತೋಷಕುಮಾರ್
Published 3 ಡಿಸೆಂಬರ್ 2017, 19:57 IST
Last Updated 3 ಡಿಸೆಂಬರ್ 2017, 19:57 IST
ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಶ್ವಾನಪ್ರದರ್ಶನದಲ್ಲಿ ಗಮನ ಸೆಳೆದ ಮುಧೋಳ ತಳಿ –ಪ್ರಜಾವಾಣಿ ಚಿತ್ರ
ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಶ್ವಾನಪ್ರದರ್ಶನದಲ್ಲಿ ಗಮನ ಸೆಳೆದ ಮುಧೋಳ ತಳಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜನರು ಮನೆಗಳಲ್ಲಿ ಮುದ್ದಿನ ನಾಯಿಗಳನ್ನು ಸಾಕಬೇಕೆಂದರೆ ಬಿಬಿಎಂಪಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯುವ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ.

‘ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ 2013ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಪರವಾನಗಿ ಶುಲ್ಕ ಮತ್ತು ನಿಯಮ ಉಲ್ಲಂಘಿಸಿದವರಿಗೆ ವಿಧಿಸುವ ದಂಡದ ಮೊತ್ತದ ಬಗ್ಗೆ ಇಲಾಖೆ ವಿವರಣೆ ಕೇಳಿತ್ತು. ಪರಿಷ್ಕೃತ ಪ್ರಸ್ತಾವವನ್ನು 4 ತಿಂಗಳ ಹಿಂದೆ ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರದಲ್ಲಿ ಒಪ್ಪಿಗೆ ಸಿಗುವ ವಿಶ್ವಾಸ ಇದೆ’ ಎಂದು ಪಾಲಿಕೆಯ ಪಶುಪಾಲನಾ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಕುಪ್ರಾಣಿ ಪ್ರಿಯರು ಪರವಾನಗಿ ಪಡೆಯಲು ಪಾಲಿಕೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಆನ್‌ಲೈನ್‌ ಪರವಾನಗಿ ನೀಡುವ ಚಿಂತನೆ ಇದೆ. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ, ಶುಲ್ಕವನ್ನು ಇ– ‍ಪಾವತಿ ಮಾಡಿ, ಸುಲಭವಾಗಿ ಪರವಾನಗಿ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ’ ಎನ್ನುತ್ತಾರೆ ಅವರು.

ADVERTISEMENT

‘ಪರವಾನಗಿ ಶುಲ್ಕ ಮತ್ತು ನವೀಕರಣ ಶುಲ್ಕ ₹250 ನಿಗದಿಪಡಿಸಲಾಗಿತ್ತು ಎನ್ನುವ ಕಾರಣಕ್ಕೆ 2013ರಲ್ಲಿ ಪ್ರಸ್ತಾವವನ್ನು ತಿರಸ್ಕರಿಸಲಾಗಿತ್ತು. ಅಲ್ಲದೆ, ಕೆಲವು ಅಪಾಯಕಾರಿ ನಾಯಿಗಳನ್ನು ಸಾಕಲು ಅನುಮತಿ ಕೊಡಬಾರದು ಎನ್ನುವ ಅಂಶ ಪ್ರಸ್ತಾವದಲ್ಲಿತ್ತು. ಇಂತಹ ನಿಯಮ ಜಾರಿಗೊಳಿಸುವುದರಿಂದ ಪಾಲಿಕೆಗೆ ಏನು ಲಾಭ ಎನ್ನುವ ಬಗ್ಗೆ ಸ್ಪಷ್ಟನೆ ಕೇಳಿದ್ದೆವು’ ಎಂದು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಸಾಕು ಪ್ರಾಣಿಗಳನ್ನು ಅಪಾಯಕಾರಿ ಅಲ್ಲ ಅಥವಾ ಅಪಾಯಕಾರಿ ವರ್ಗವಾಗಿ ವಿಂಗಡಿಸಿಲ್ಲ. ಸಾಕು ಪ್ರಾಣಿಗಳೆಲ್ಲವೂ ಮನುಷ್ಯ ಸ್ನೇಹಿಯೇ ಆಗಿವೆ. ಹಾಗಾಗಿ ಯಾವುದೇ ತಳಿಯ ನಾಯಿಗಳ ಸಾಕಾಣಿಕೆಗೆ ಪ್ರಸ್ತಾವದಲ್ಲಿ ನಿರ್ಬಂಧ ವಿಧಿಸಿಲ್ಲ. ಇಂತಹ ನಿರ್ಬಂಧ ಹೇರಲು ಭಾರತೀಯ ಪ್ರಾಣಿಗಳ ಕ್ಷೇಮಾಭಿವೃದ್ಧಿ ಮಂಡಳಿ ನಿಯಮಗಳಲ್ಲೂ ಅವಕಾಶವಿಲ್ಲ’ ಎನ್ನುತ್ತಾರೆ ಪಶುಪಾಲನೆ ವಿಭಾಗದ ಅಧಿಕಾರಿಗಳು.

ರೇಬಿಸ್‌ ಮುಕ್ತ ವಲಯ: ನಗರವನ್ನು ‘ರೇಬಿಸ್‌ ಫ್ರಿ ಜೋನ್‌’ (ರೆಬಿಸ್‌ ಮುಕ್ತ ವಲಯ) ಮಾಡುವ ಗುರಿ ‌ಹೊಂದಿದ್ದೇವೆ. ಇದಕ್ಕಾಗಿಯೇ ನಗರದ 8 ವಲಯಗಳಲ್ಲಿ ಎಬಿಸಿ (ಸಂತಾನಶಕ್ತಿ ಹರಣ ಚಿಕಿತ್ಸೆ) ಕೇಂದ್ರ ಮತ್ತು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ ಪ್ರತಿ ತಿಂಗಳು 600 ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಅಲ್ಲದೆ, ಪ್ರತಿ ತಿಂಗಳು ಕನಿಷ್ಠ 300 ನಾಯಿಗಳಿಗೆ ರೇಬಿಸ್‌ ನಿರೋಧಕ ಚುಚ್ಚುಮದ್ದು (ಎಆರ್‌ವಿ) ಹಾಕಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

‘ನಗರದಲ್ಲಿ ಪ್ರತಿ ತಿಂಗಳು 3ರಿಂದ 4 ಸಾವಿರ ಜನರು ನಾಯಿ ಕಡಿತಕ್ಕೆ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದಾರೆ. ನಾಯಿ ಸಾಕಣೆ ಪರವಾನಗಿ ಕಡ್ಡಾಯಗೊಳಿಸಿದರೆ ಮಾತ್ರ ರೇಬಿಸ್‌ ಫ್ರಿ ಜೋನ್‌ ಮಾಡಲು ಸಾಧ್ಯ’ ಎಂದು ಪಶುಪಾಲನಾ ವಿಭಾಗದ ಉಪನಿರ್ದೇಶಕ ಡಾ.ಶ್ರೀರಾಮ್‌ ತಿಳಿಸಿದರು.

ನಾಯಿಗಳ ನೆರವಿಗೆ ಆಂಬುಲೆನ್ಸ್: ಅಪಘಾತ, ಹಲ್ಲೆ ಹಾಗೂ ಒಂದಕ್ಕೊಂದು ಕಚ್ಚಾಡಿ ಗಾಯಗೊಂಡ ಬೀದಿ ನಾಯಿಗಳನ್ನು ರಕ್ಷಿಸಿ, ಪುನಶ್ಚೇತನ ಕೇಂದ್ರಗಳಿಗೆ ಸಾಗಿಸಲು ಮೂರು ಆಂಬುಲೆನ್ಸ್‌ಗಳ ಖರೀದಿಗೆ ಕಳೆದ ಬಜೆಟ್‌ನಲ್ಲಿ ₹35 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಆಂಬುಲೆನ್ಸ್‌ ಖರೀದಿಗೆ ಹಣಕಾಸು ಇಲಾಖೆಯ ಒಪ್ಪಿಗೆಗಾಗಿ ಕಡತ ಸಲ್ಲಿಸಲಾಗಿದೆ. ಒಪ್ಪಿಗೆ ಸಿಕ್ಕಿದ ನಂತರ ತಲಾ ₹ 8 ಲಕ್ಷ ಬೆಲೆಯ ಮೂರು ಆಂಬುಲೆನ್ಸ್‌ಗಳನ್ನು ಖರೀದಿಸಲಾಗುತ್ತಿದೆ. ಈ ಆಂಬುಲೆನ್ಸ್‌ನಲ್ಲಿ ನಾಯಿ ಮಲಗಿಸುವ ಟೇಬಲ್‌, ಒಬ್ಬರು ಪಶುವೈದ್ಯರು, ಒಬ್ಬರು ಸಹಾಯಕರು ಹಾಗೂ ಪ್ರಥಮ ಚಿಕಿತ್ಸಾ ಕಿಟ್‌ ಇರಲಿದೆ. ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ನಡೆಸಲು ಬೇಕಾದ ಸೌಲಭ್ಯ ಇರಲಿದೆ ಎಂದು ಹೇಳಿದರು.

ನಾಯಿ ಸಾಕಲು ಪರವಾನಗಿ ಶುಲ್ಕ ₹110

* ಪರವಾನಗಿ ನವೀಕರಿಸಲು ವಾರ್ಷಿಕ ₹100 ಶುಲ್ಕ

* ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಮೂರು ನಾಯಿಗಳಿಗಿಂತ ಹೆಚ್ಚು ಸಾಕುವಂತಿಲ್ಲ

* ನಾಯಿಗಳಿಗೆ ಕಾಲಕಾಲಕ್ಕೆ ಚುಚ್ಚುಮದ್ದು (ಆ್ಯಂಟಿ ರೇಬಿಸ್‌ ವ್ಯಾಕ್ಸಿನೇಷನ್‌) ಹಾಕಿಸದಿದ್ದರೆ ಪರವಾನಗಿ ನವೀಕರಣ ಇಲ್ಲ

* ಪರವಾನಗಿ ಇಲ್ಲದೆ ನಾಯಿ ಸಾಕಿದರೆ ₹500 ದಂಡ

* ಪರವಾನಗಿ ನವೀಕರಿಸದಿದ್ದರೂ ₹500 ದಂಡ

* ಬೆಂಗಳೂರು ಕೇಂದ್ರ (ಕೋರ್‌ ಏರಿಯಾ) ಭಾಗದಲ್ಲಿ ನಾಯಿ ತಳಿ ಸಂವರ್ಧನ ಕೇಂದ್ರ (ಡಾಗ್‌ ಬ್ರೀಡಿಂಗ್‌ ಸೆಂಟರ್‌) ನಡೆಸುವಂತಿಲ್ಲ

* ನಾಯಿ ತಳಿ ಸಂವರ್ಧನ ಕೇಂದ್ರಗಳನ್ನು ಪರವಾನಗಿ ಪಡೆದು ನಗರದ ಹೊರವಲಯಗಳಲ್ಲಿ ಮಾತ್ರ ನಡೆಸಬೇಕು

ನಾಯಿ ಸಾಕಲು ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರಲಿಲ್ಲ. ಇದಕ್ಕೆ ಕಾನೂನು ಸ್ವರೂಪ ನೀಡಲು ಮೇಯರ್‌ ಮತ್ತು ಆಯುಕ್ತರ ಮೇಲೆ ಒತ್ತಡ ಹೇರುತ್ತೇವೆ.
–ಲಕ್ಷ್ಮಿನಾರಾಯಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.