ADVERTISEMENT

ನಿದ್ರಾವಸ್ಥೆಯಲ್ಲಿ ಪಾಲಿಕೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 19:34 IST
Last Updated 21 ಆಗಸ್ಟ್ 2017, 19:34 IST
ನಿದ್ರಾವಸ್ಥೆಯಲ್ಲಿ ಪಾಲಿಕೆ ಅಧಿಕಾರಿಗಳು
ನಿದ್ರಾವಸ್ಥೆಯಲ್ಲಿ ಪಾಲಿಕೆ ಅಧಿಕಾರಿಗಳು   

ಬೆಂಗಳೂರು: ‘ಸರ್ಕಾರಿ ಭೂಮಿ ಕಬಳಿಸಿ ಮತ್ತು ನಕ್ಷೆ ಮಂಜೂರಾತಿ ಉಲ್ಲಂಘಿಸಿ ಬಿಲ್ಡರ್‌ಗಳು ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಬಿಬಿಎಂಪಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಎನ್‌.ಸ್ವಾಮಿ ಆರೋಪಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ರಮ ಕಟ್ಟಡಗಳು ತಲೆಎತ್ತುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿಕೊಂಡಿರುವುದನ್ನು ನೋಡಿದರೆ ಅವರಿಗೆ ಯಾರದೋ ಭಯ ಇರಬೇಕು.ಇಲ್ಲವೇ ನಿದ್ರಾವಸ್ಥೆಯಲ್ಲಿರಬೇಕು’ ಎಂದು ಕಿಡಿಕಾರಿದರು.

‘ನಗರದಲ್ಲಿ ವಾಣಿಜ್ಯ ಹಾಗೂ ವಸತಿ ಸಮುಚ್ಚಯಗಳನ್ನು ನಿರ್ಮಿಸುತ್ತಿರುವ ಬಿಲ್ಡರ್‌ಗಳು ನಕ್ಷೆ ಮಂಜೂರಾತಿ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನಾಗರಿಕರಿಂದಲೂ ದೂರುಗಳು ಬಂದಿವೆ. ಸ್ಥಳ ಪರಿಶೀಲಿಸಲು ನಕ್ಷೆ ಮಂಜೂರಾತಿ ಮತ್ತು ಸಂಬಂಧಿಸಿದ ಕಡತಗಳನ್ನು ಕೇಳಿದರೆ ಅಧಿಕಾರಿಗಳು ಒದಗಿಸುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರೂ ಸಹಕಾರ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ನಗರ ಜಿಲ್ಲಾಡಳಿತ ಬೈರತಿಹಳ್ಳಿಯಲ್ಲಿ ಡೇರಿ ಮತ್ತು ಕೋಳಿ ಫಾರಂಗೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಸಲಾರಪುರಿಯಾ ಗೋಲ್ಡ್‌ ಸಮಿತ್‌ ಸಂಸ್ಥೆ ಕಬಳಿಸಿ, ಬಹುಮಹಡಿ ಕಟ್ಟಡ ನಿರ್ಮಿಸುತ್ತಿದೆ. ಮಹಾವೀರ್‌ ರೆಡ್ಡಿ ಸ್ಟ್ರೆಚ್ಚರ್‌ ಸಂಸ್ಥೆ ಕೋಡಿಚಿಕ್ಕನಹಳ್ಳಿಯಲ್ಲಿ 1 ಎಕರೆ 24 ಗುಂಟೆ ಸರ್ಕಾರಿ ಖರಾಬು ಜಾಗ ಮತ್ತು ರಾಜಕಾಲುವೆ ಒತ್ತುವರಿ ಮಾಡಿ, ಬಹುಮಡಿ ಕಟ್ಟಡ ಕಟ್ಟುತ್ತಿದೆ. ದಾಸರಹಳ್ಳಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮದಲ್ಲಿ 4.24 ಎಕರೆ ಜಾಗವನ್ನು ಬಹುಮಹಡಿ ಕಟ್ಟಡಕ್ಕೆ ಜಿ.ಎಂ.ಇನ್ಫೊನೈಟ್‌ ಅತಿಕ್ರಮಿಸಿದೆ. 192ನೇ ವಾರ್ಡ್‌ನಲ್ಲಿ ಪ್ರಭಾವತಿ ಬಿಲ್ಡರ್‌ ಸಂಸ್ಥೆಯವರು ಸರ್ಕಾರಿ ಭೂಮಿಯಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಿಸಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಸ್ಥಳ ಮತ್ತು ದಾಖಲೆ ಪರಿಶೀಲಿಸಿದಾಗ, ಪಾಲಿಕೆ ಅಧಿಕಾರಿಗಳು ಬಿಲ್ಡರ್‌ಗಳ ಜತೆ ಸೇರಿ ಕಾನೂನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದರು.

‘ಲಗ್ಗೆರೆಯ ಬೆಥೆಲ್‌ ಎಜುಕೇಷನ್‌ ಟ್ರಸ್ಟ್‌ ಜಿ+3 ಕಟ್ಟಡಕ್ಕೆ ನಕ್ಷೆ ಮಂಜೂರಾತಿ ಪಡೆದು, ಜಿ+5 ಕಟ್ಟಡ ಕಟ್ಟುತ್ತಿದೆ. ಸ್ಥಾಯಿ ಸಮಿತಿ ಸದಸ್ಯರು ಸ್ಥಳ ಪರಿಶೀಲಿಸಿದಾಗ, ಟ್ರಸ್ಟ್‌ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಸಂಬಂಧಿಸಿದ ವಲಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಆಯುಕ್ತರು ಮತ್ತು ಮೇಯರ್‌ ತಕ್ಷಣ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪಾಲಿಕೆಯ ಕೌನ್ಸಿಲ್‌ ಒಪ್ಪಿಗೆ ಇಲ್ಲದೆ, ನಗರದಲ್ಲಿ 74 ಸ್ಕೈವಾಕ್‌ಗಳನ್ನು ನಿರ್ಮಿಸಲು ಅಧಿಕಾರಿಗಳು ಮಂಜೂರಾತಿ ನೀಡಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಸಚಿವ ಕೆ.ಜೆ.ಜಾರ್ಜ್‌ ಅವರ ಸೂಚನೆಯಂತೆ ಮಂಜೂರಾತಿ ನೀಡಲಾಗಿದೆ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಹಾಗಾದರೆ, ಸ್ಥಾಯಿ ಸಮಿತಿಗಳನ್ನು ರಚಿಸುವುದು ಏಕೆ. ಈ ಬಗ್ಗೆ ಮೇಯರ್‌ ಮತ್ತು ಆಯುಕ್ತರು ಉತ್ತರ ನೀಡಬೇಕು’ ಎಂದು ಮಂಜುಳಾ ಎನ್‌.ಸ್ವಾಮಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.