ADVERTISEMENT

ನೀರಿನ ಡ್ರಂನಲ್ಲಿ ಯುವಕನ ಶವ ಪತ್ತೆ

ಕೊಲೆ ಮಾಡಿ ದಂಪತಿ ಪರಾರಿ: ಪೊಲೀಸ್ ಶಂಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 19:54 IST
Last Updated 20 ಡಿಸೆಂಬರ್ 2014, 19:54 IST

ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆ ವಡೇರಹಳ್ಳಿಯ ಮನೆಯೊಂದರಲ್ಲಿ ಶನಿವಾರ ಬ್ರಿಜೇಶ್‌ಕುಮಾರ್‌ (24) ಎಂಬುವರ ಶವ ನೀರಿನ ಡ್ರಂನಲ್ಲಿ ಪತ್ತೆಯಾಗಿದೆ.

ಹಣೆ ಮತ್ತು ತಲೆಗೆ ಕಬ್ಬಿಣದ ಸರಳಿ­ನಿಂದ ಹೊಡೆದು, ನಂತರ ನೀರಿನಲ್ಲಿ ಮುಳು­ಗಿಸಿ ಬ್ರಿಜೇಶ್‌ ಅವರನ್ನು ಕೊಲೆ ಮಾಡಲಾಗಿದೆ. ಆ ಮನೆಯಲ್ಲಿ ವಾಸ­ವಿದ್ದ ಜಾರ್ಖಂಡ್‌ ಮೂಲದ ಮೇರಿ ಹಾಗೂ ಸಂತೋಷ್‌ ದಂಪತಿ, ಡಿ.17 ರಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ ಅವರೇ ಈ ಕೃತ್ಯ ಎಸಗಿರುವ ಬಗ್ಗೆ ಪೊಲೀ­ಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಬ್ರಿಜೇಶ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಲಕ್ಷ್ಮೀಪುರ ಕ್ರಾಸ್‌ನಲ್ಲಿ ನೆಲೆ­ಸಿದ್ದ ಅವರು, ಸಮೀಪದ ಬಟ್ಟೆ ಡೈಯಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮೇರಿ ಸಹ ಅಲ್ಲೇ ಉದ್ಯೋಗಿ ಯಾಗಿದ್ದರು.

‘ಡಿ.17ರಂದು ಬ್ರಿಜೇಶ್‌, ಮೇರಿ ಅವರ ಮನೆಗೆ ಹೋಗಿದ್ದನ್ನು ಸ್ಥಳೀಯರು ನೋಡಿದ್ದಾರೆ. ಅದೇ ದಿನ ರಾತ್ರಿ ಅವರ ಕೊಲೆ ನಡೆದಿರುವ ಸಾಧ್ಯತೆ ಇದೆ. ಡಿ.18 ರಂದು ಠಾಣೆಗೆ ಬಂದಿದ್ದ ಮೃತರ ಭಾವ ಅವದೇಶ್, ಬ್ರಿಜೇಶ್ ಕಾಣೆಯಾಗಿರುವ ಬಗ್ಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಬ್ಬಂದಿ, ಭಾವಚಿತ್ರ ತಂದು ಕೊಡುವಂತೆ ತಿಳಿಸಿ­ದ್ದರು. ಅದ­ರಂತೆ ಅವರು, ಶನಿವಾರ ಬೆಳಿಗ್ಗೆ ಬ್ರಿಜೇಶ್‌ರ ಭಾವಚಿತ್ರ ತಂದು­ಕೊಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅವದೇಶ್ ಸಹ ಮೃತರು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲೇ ವ್ಯವ­ಸ್ಥಾ­ಪಕರಾಗಿದ್ದಾರೆ. ಅವರೊಟ್ಟಿಗೆ ಕಾರ್ಖಾನೆಗೆ ತೆರಳಿ ಸಹೋದ್ಯೋಗಿಗಳ ವಿಚಾರಣೆ ನಡೆಸಲಾಯಿತು. ಈ ವೇಳೆ ಮೇರಿ ಎರಡು ದಿನಗಳಿಂದ ಕೆಲಸಕ್ಕೆ ಬಂದಿಲ್ಲ ಎಂಬ ಸಂಗತಿ ಗೊತ್ತಾಯಿತು. ನಂತರ ಅವರ ಮನೆಗೆ ಹೋದಾಗ ಬೀಗ ಹಾಕಿತ್ತು. ಕಿಟಕಿ ಮೂಲಕ ನೋಡಿದಾಗ ನೀರಿನ ಡ್ರಂನಲ್ಲಿ ವ್ಯಕ್ತಿಯ ಕಾಲುಗಳು ಕಾಣಿಸುತ್ತಿದ್ದವು’ ಎಂದು ವಿವರಿಸಿದರು.

‘ಬೀಗ ಮುರಿದು ಒಳಗೆ ಹೋದ ಸಿಬ್ಬಂದಿ, ಡ್ರಂನಿಂದ ಶವವನ್ನು ಹೊರತೆಗೆ­ದರು. ಆಗ ಅದು ಬ್ರಿಜೇಶ್‌ನ ಮೃತ­ದೇಹ ಎಂಬುದು ಖಾತ್ರಿಯಾಯಿತು. ನಂತರ ಕೊಲೆ ಪ್ರಕರಣ ದಾಖಲಿಸಿ­ಕೊಂಡು, ದಂಪತಿಯ ಪತ್ತೆಗೆ ವಿಶೇಷ ತಂಡ ರಚಿಸಲಾಯಿತು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಟೈಲರ್ ಆತ್ಮಹತ್ಯೆ: ಸುಬ್ರಹ್ಮಣ್ಯನಗರ ಸಮೀಪದ ರಾಮ್‌ಮೋಹನ್‌ಪುರದಲ್ಲಿ ಶುಕ್ರವಾರ ಮಂಜುನಾಥ್ (40) ಎಂಬ ಟೈಲರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿಯಿಂದ ದೂರವಾಗಿ ಪ್ರತ್ಯೇಕ­ವಾಗಿ ನೆಲೆಸಿದ್ದ ಮಂಜುನಾಥ್, ಸಂಜೆ ಐದು ಗಂಟೆ ನಂತರ ಮಳಿಗೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಮಳಿಗೆ ಮಾಲೀ­ಕರು ರಾತ್ರಿ 9.30ರ ಸುಮಾರಿಗೆ ಶೆಟರ್ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಂಜುನಾಥ್ ಅವರ ಪೋಷಕರು ಸಹ ನಗರದಲ್ಲೇ ನೆಲೆಸಿ­ದ್ದಾರೆ.

ಹೃದಯ ಸಂಬಂಧಿ ಕಾಯಿಲೆ­ಯಿಂದ ಬಳಲುತ್ತಿದ್ದ ಅವರ ತಂದೆಯನ್ನು ಇತ್ತೀಚೆಗೆ ಆಸ್ಪ­ತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು, ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದಿದ್ದರು. ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ಹೋಗಿ ತಂದೆಯ ಯೋಗಕ್ಷೇಮ ವಿಚಾ­ರಿ­ಸಿದ್ದ  ಮಂಜುನಾಥ್, ಸಂಜೆ ಮಳಿಗೆಗೆ ಹಿಂದಿರುಗಿ ಆತ್ಮಹತ್ಯೆ ಮಾಡಿಕೊಂಡಿ­ದ್ದಾರೆ. ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.