ADVERTISEMENT

ನೋಟಿಸ್‌ ಜಾರಿಗೆ ಆದೇಶ

ಹೆಚ್ಚಿನ ಶುಲ್ಕ ವಸೂಲಿ ಆರೋಪ

​ಪ್ರಜಾವಾಣಿ ವಾರ್ತೆ
Published 1 ಜೂನ್ 2016, 20:19 IST
Last Updated 1 ಜೂನ್ 2016, 20:19 IST

ಬೆಂಗಳೂರು: ‘ನಗರದಲ್ಲಿ ಕೆಲವು ಶಾಲೆಗಳು ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ’ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ಬುಧವಾರ ವಿಚಾರಣೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ನಿರ್ದೇಶಕರು, ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪ್ರತಿವಾದಿಗಳಾದ ಶಾಲಾ ಆಡಳಿತ ಮಂಡಳಿಗಳಿಗೆ ನೋಟಿಸ್‌ ಜಾರಿಗೆ ಆದೇಶಿಸಿದೆ.

‘ಶಾಲೆಗಳು ವಿಧಿಸಿರುವ ಶುಲ್ಕದಲ್ಲಿ ಸದ್ಯಕ್ಕೆ ಶೇಕಡ 40ರಷ್ಟು ಹಣವನ್ನು ಪೋಷಕರು ಪಾವತಿಸಬೇಕು. ಆದಾಗ್ಯೂ ಇದು ಪ್ರಕರಣದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ನ್ಯಾಯಪೀಠವು ತಿಳಿಸಿದೆ.

ಅರ್ಜಿ ವಿಲೇವಾರಿ:ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ  (ಆರ್‌ಟಿಇ) ನೋಂದಣಿಯಾಗಿರುವ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಮೊತ್ತವನ್ನು ಪರಿಷ್ಕರಿಸುವಂತೆ ಹೈಕೋರ್ಟ್‌ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.

ಈ ಸಂಬಂಧ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ (ಕ್ಯಾಮ್ಸ್‌) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ  ಪೀಠವು ಬುಧವಾರ ವಿಲೇವಾರಿ ಮಾಡಿತು.

ಈ ಸಂಬಂಧ ಕ್ಯಾಮ್ಸ್‌ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ನ್ಯಾಯಪೀಠವು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ.
‘ಆರ್‌ಟಿಇ ಅಡಿಯಲ್ಲಿ ಸೇರ್ಪಡೆಯಾದ ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಮೊತ್ತವನ್ನು 2012ರಿಂದ ಈತನಕ ಪರಿಷ್ಕರಣೆ ಮಾಡಿಲ್ಲ’ ಎಂದು ಆರೋಪಿಸಿ ಕ್ಯಾಮ್ಸ್‌ ಈ ಅರ್ಜಿ ಸಲ್ಲಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.