ADVERTISEMENT

ಪತಿ ಜತೆಗಿದ್ದಾಗಲೇ ಗೃಹಿಣಿ ಮೇಲೆ ಲೈಂಗಿಕ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 19:48 IST
Last Updated 18 ಜನವರಿ 2017, 19:48 IST

ಬೆಂಗಳೂರು: ರಾಜೇಂದ್ರನಗರದ ಮಾರುಕಟ್ಟೆಯಲ್ಲಿ ಗೃಹಿಣಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಮೂವರನ್ನು ಆಡುಗೋಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ನಾಜೀನ್‌ಮುಲ್ಲಾ, ಅಲ್‌ಹಫೀದ್‌, ಸಾದಿಕ್‌ ಬಂಧಿತರು. ಅವರನ್ನು  ಪೊಲೀಸರು, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ‘35 ವರ್ಷದ ಗೃಹಿಣಿಯು ತಮ್ಮ ಪತಿಯೊಂದಿಗೆ ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ಮಹಿಳೆಯನ್ನು ಹಿಂಬಾಲಿಸಿದ್ದ ಆರೋಪಿಗಳು, ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು’

‘ಆಗ ಮಹಿಳೆ ಹಾಗೂ ಅವರ ಪತಿ, ಆರೋಪಿಗಳನ್ನು ಪ್ರಶ್ನಿಸಿದ್ದರು. ಅದಾದ ಬಳಿಕವೂ ಆರೋಪಿಗಳು, ಮಹಿಳೆಯನ್ನು  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆಗ ಪತಿ ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು’ ‘ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹೋದ ಸಬ್‌ ಇನ್‌ಸ್ಪೆಕ್ಟರ್‌, ಆರೋಪಿಗಳನ್ನು ಠಾಣೆಗೆ ಕರೆತಂದಿದ್ದರು. ಬಳಿಕ ಮಹಿಳೆ ನೀಡಿದ ದೂರಿನನ್ವಯ ಲೈಂಗಿಕ ದೌರ್ಜನ್ಯ (ಐಪಿಸಿ 354) ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಲಾಯಿತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ADVERTISEMENT

ಪತಿ ಅಪಹರಣ; ದೂರು ದಾಖಲು: ‘ನಾನು ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕಾಗಿ ನನ್ನ ಪತಿಯನ್ನು ಕಟ್ಟಡ ನಿರ್ಮಾಣದ ಗುತ್ತಿಗೆದಾರ ಮುಜುಂದಾರ್‌ ಹಾಗೂ ಆತನ ಸಹಚರರು ಅಪಹರಣ ಮಾಡಿದ್ದಾರೆ’ ಎಂದು ಆರೋಪಿಸಿ ಕೊಲ್ಕತ್ತಾ ಮೂಲದ ಮಹಿಳೆಯೊಬ್ಬರು ಬಾಣಸವಾಡಿ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ‘ಪತಿಯೊಂದಿಗೆ ಮಹಿಳೆ, ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.’

‘ಆ ಕಟ್ಟಡದ ಗುತ್ತಿಗೆದಾರನಾದ  ಮುಜುಂದಾರ್‌,  ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಮಹಿಳೆಯನ್ನು ಒತ್ತಾಯಿಸುತ್ತಿದ್ದ. ಅದನ್ನು ಮಹಿಳೆ ನಿರಾಕರಿಸಿದ್ದಕ್ಕಾಗಿ ಅವರ ಪತಿಯನ್ನೇ  ಜ. 11ರಂದು ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂದು ದೂರಿನಲ್ಲೇ ಆರೋಪಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಆರಂಭದಲ್ಲಿ ಪತಿ ಕಾಣೆಯಾದ ಬಗ್ಗೆ ಮಹಿಳೆಯು ದೂರು ನೀಡಿದ್ದರು. ಈಗ ಮತ್ತೊಂದು ದೂರು ಕೊಟ್ಟಿದ್ದು, ಅದರಲ್ಲಿ ಅಪಹರಣ ಬಗ್ಗೆ ಉಲ್ಲೇಖಿಸಿದ್ದಾರೆ. ಅದರನ್ವಯ ಮುಜುಂದಾರ್‌ ಹಾಗೂ ಸಂಜಯ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಪತಿ ಎಲ್ಲಿದ್ದಾರೆ? ಎಂಬ ಬಗ್ಗೆ  ಮಾಹಿತಿ ಸಿಕ್ಕಿಲ್ಲ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.