ADVERTISEMENT

ಪ್ರತಿಭಟನೆ ನಡೆಸಿದರೆ ಜಾಮೀನುರಹಿತ ಪ್ರಕರಣ

ಜೂನ್ 4ರಂದು ಪೊಲೀಸರಿಗೆ ರಜೆ ಇಲ್ಲ: ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 27 ಮೇ 2016, 19:50 IST
Last Updated 27 ಮೇ 2016, 19:50 IST

ಬೆಂಗಳೂರು: ವೇತನ ತಾರತಮ್ಯ, ರಜೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ ಜೂನ್ 4ರಂದು ಪ್ರತಿಭಟನೆ ನಡೆಸಲು ಮುಂದಾಗಿರುವ ಬೆನ್ನಲೇ ಅಂದು ರಜೆ ನೀಡದಿರಲು ರಾಜ್ಯ ಪೊಲೀಸ್‌ ಇಲಾಖೆ ನಿರ್ಧರಿಸಿದೆ.

‘ಆ ದಿನ ರಜೆ ಬೇಕು’ ಎಂದು ಪೊಲೀಸರು ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಅವರು ಎಲ್ಲ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಓಂಪ್ರಕಾಶ್‌, ‘ರಜೆ ಅರ್ಜಿ ಸಲ್ಲಿಸಿದರೆ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಇತರೆ ಕಾರಣಕ್ಕಾಗಿ ರಜೆ ನೀಡದಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು  ಹೇಳಿದರು.

‘ಸಂವಿಧಾನದ ಅನ್ವಯ ಸಮಾಜದಲ್ಲಿ ಶಾಂತಿ ಹಾಗೂ ಸಾರ್ವಜನಿಕರ ಆಸ್ತಿ ಕಾಪಾಡುವುದು ನಮ್ಮ ಕೆಲಸ. ಆದ್ದರಿಂದ ಎಲ್ಲರೂ ಶ್ರದ್ಧೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಅದನ್ನು ಬಿಟ್ಟು ಪ್ರತಿಭಟನೆ ನಡೆಸಿದರೆ, ಅಂಥ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಜತೆಗೆ ಜಾಮೀನುರಹಿತ ಪ್ರಕರಣ ದಾಖಲಿಸಲಾಗುವುದು’ ಎಂದು ಅವರು ತಿಳಿಸಿದರು.

‘ಪ್ರತಿಭಟನೆ ಮುಂದಾಳತ್ವ ವಹಿಸಿದ್ದೇನೆ ಎಂದು ಹೇಳುವ ವಿ. ಶಶಿಧರ್‌ ಅವರಿಗೆ ಇಲಾಖೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಇತರೆ ರಾಜ್ಯಕ್ಕಿಂತ ಕರ್ನಾಟಕದ ಪೊಲೀಸರಿಗೆ ಹೆಚ್ಚಿನ ಸೌಲಭ್ಯಗಳಿವೆ. ಅದನ್ನು ಮೊದಲು ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ಅವರು ತಿಳಿಸಿದರು.

ಗೋಪ್ಯ ಸಭೆ: ಪೊಲೀಸ್‌ ಮಹಾಸಂಘದ ಕರೆ ಮೇರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿವೃತ್ತ ಪೊಲೀಸರು ಗೋಪ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮೇ 26, 27ರಂದು ತುಮಕೂರು, ಮೈಸೂರು, ಬೆಳಗಾವಿ, ಧಾರವಾಡ, ಮಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನೆ ರೂಪುರೇಷೆ ಬಗ್ಗೆ ಚರ್ಚಿಸಲಾಗಿದೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಸರ್ಕಾರಕ್ಕೆ ನೀಡಿದೆ.

ಪೊಲೀಸರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿದ್ದರೆ, ಅವರ ಕುಟುಂಬದವರು ಹಾಗೂ ನಿವೃತ್ತರು  ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಗಿದೆ  ಎಂಬುದು ಗೊತ್ತಾಗಿದೆ.

ಸಿವಿಲ್ ಪೊಲೀಸರು ಮಾತ್ರ ಭಾಗಿ: ಪ್ರತಿಭಟನೆಯಲ್ಲಿ ಸಿವಿಲ್ ಪೊಲೀಸರು ಮಾತ್ರ ಭಾಗಿಯಾಗುತ್ತಿದ್ದಾರೆ. ಉಳಿದಂತೆ ಸಶಸ್ತ್ರ ಮೀಸಲು ಪಡೆ, ನಗರ
ಮೀಸಲು ಪಡೆ, ಜಿಲ್ಲಾ ಮೀಸಲು ಸಿಬ್ಬಂದಿ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ.

ಮಾಹಿತಿ ಪ್ರಕಾರ ಬೆಂಗಳೂರಿನ 12 ಸಾವಿರ, ಮೈಸೂರು ವಿಭಾಗದ 3 ಸಾವಿರ, ಮಂಗಳೂರು  2 ಸಾವಿರ, ತುಮಕೂರು  900, ಗುಲ್ಬರ್ಗಾ   1500, ಬೆಳಗಾವಿ 1800 ನಾಗರಿಕ ಪೊಲೀಸರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಶಿಸ್ತು ಕ್ರಮದ ಕೈಪಿಡಿ ರವಾನೆ: ಪೊಲೀಸರು ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಕೈಗೊಳ್ಳಬೇಕಾದ ಶಿಸ್ತು ಕ್ರಮಗಳ ಬಗ್ಗೆ ತಿಳಿಸುವ ಮಾಹಿತಿಯುಳ್ಳ ಕೈಪಿಡಿಯ ಪ್ರತಿಯನ್ನು ರಾಜ್ಯದ ಎಲ್ಲ ಪೊಲೀಸರಿಗೆ ಕಳುಹಿಸಿಕೊಡಲಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಸಿದ್ಧಪಡಿಸಿರುವ ಏಳು ಪುಟಗಳ ಈ ಕೈಪಿಡಿಯಲ್ಲಿ, ‘ಪೊಲೀಸ್‌ ಪೋರ್ಸ್‌ ಕಾಯ್ದೆ-1966ರ ಅಡಿ ಪೊಲೀಸರು  ಯಾವುದೇ ಸಂಘ, ರಾಜಕೀಯ ಪಕ್ಷದ ಜತೆ ಗುರುತಿಸಿಕೊಳ್ಳುವುದು ಅಪರಾಧ’ ಎಂದು ಉಲ್ಲೇಖಿಸಲಾಗಿದೆ. 

ಅದನ್ನು ಉಲ್ಲಂಘಿಸಿದರೆ ಅಮಾನತು ಹಾಗೂ 2 ವರ್ಷದವರೆಗೆ ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿದೆ ಎಂದು ಕೈಪಿಡಿಯಲ್ಲಿ ತಿಳಿಸಲಾಗಿದೆ. 

ವೇತನ ತಾರತಮ್ಯ, ರಜೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ ಜೂನ್ 4ರಂದು ಪ್ರತಿಭಟನೆ ನಡೆಸಲು ಮುಂದಾಗಿರುವ ಬೆನ್ನಲೇ ಅಂದು ರಜೆ ನೀಡದಿರಲು ರಾಜ್ಯ ಪೊಲೀಸ್‌ ಇಲಾಖೆ ನಿರ್ಧರಿಸಿದೆ.

ಸಿ.ಎಂ ಭರವಸೆ ನೀಡಲಿ
‘ಬೇಡಿಕೆ ಈಡೇರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಖಿತ ಭರವಸೆ ನೀಡಿದರೆ ಪ್ರತಿಭಟನೆ  ಹಿಂದಕ್ಕೆ ಪಡೆಯುವ ಬಗ್ಗೆ ಚರ್ಚಿಸಲಾಗುವುದು’ ಎಂದು ಹೆಸರೇಳಲು ಬಯಸದ ಕೆಲ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ವೇತನ ತಾರತಮ್ಯ, ಭತ್ಯೆ ಬೇಡಿಕೆಗಳು ಹಣಕಾಸು ಇಲಾಖೆಗೆ ಸಂಬಂಧಪಟ್ಟವು. ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರತಿಕ್ರಿಯಿಸುವುದು ಅವಶ್ಯ’ ಎಂದು ಅವರು ಹೇಳಿದ್ದಾರೆ.

25 ಸಾವಿರ ಅರ್ಜಿ
‘ಜೂನ್‌ 4ರಂದು ರಜೆ ಕೋರಿ ರಾಜ್ಯದ 25 ಸಾವಿರ ಪೊಲೀಸರು ರಜೆ ಅರ್ಜಿ ಸಲ್ಲಿಸಲು ಸಜ್ಜಾಗಿದ್ದಾರೆ’ ಎಂದು ಪ್ರತಿಭಟನಾ ನೇತೃತ್ವ ವಹಿಸಿರುವ ನಿವೃತ್ತ ಪೊಲೀಸರೊಬ್ಬರು ತಿಳಿಸಿದರು. 

‘ಕೆಲವೆಡೆ ಈಗಾಗಲೇ ಪೊಲೀಸರು ಅರ್ಜಿ ಸಲ್ಲಿಸಿದ್ದು, ಅವರ್‌್ಯಾರಿಗೂ ರಜೆ ಮಂಜೂರು ಆಗಿಲ್ಲ. ಕೆಲವರು ಅರ್ಜಿ ಸಲ್ಲಿಕೆಗೆ ಕಾಯುತ್ತಿದ್ದಾರೆ’ ಎಂದು ಅವರು ತಿಳಿಸಿದರು.

*
ಪೊಲೀಸರು ರಜೆ ಅರ್ಜಿ ಸಲ್ಲಿಸಿರುವ ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲ. ಜತೆಗೆ ರಜೆ ಕೊಡುವುದರ ಬಗ್ಗೆ ಮಾತನಾಡುವುದು ಅಧಿಕಾರ ವ್ಯಾಪ್ತಿಗೆ ಮೀರಿದ್ದು
ಎನ್.ಎಸ್. ಮೇಘರಿಕ್ಬೆಂ
ಗಳೂರು ಪೊಲೀಸ್‌ ಕಮಿಷನರ್‌

*
ಹಿರಿಯ ಅಧಿಕಾರಿಗಳ ಕಿರುಕುಳದಿಂದ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ಉದಾಹರಣೆಗಳು ರಾಜ್ಯದಲ್ಲಿವೆ. ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಸರ್ಕಾರವೇ ಹೊಣೆ 
ವಿ. ಶಶಿಧರ್
ಅಧ್ಯಕ್ಷ, ಅಖಿಲ ಕರ್ನಾಟಕ ಪೊಲೀಸ್‌ ಮಹಾಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.