ADVERTISEMENT

ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ಸಿ.ಎಂ ಭರವಸೆ ನೀಡಿದ್ದು ತಪ್ಪು

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:49 IST
Last Updated 21 ಜೂನ್ 2017, 19:49 IST

ಬೆಂಗಳೂರು: ‘ವೀರಶೈವ (ಲಿಂಗಾಯತ) ಸಮುದಾಯಕ್ಕೆ ಧರ್ಮದ ಸ್ವತಂತ್ರ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿರುವುದು ತಪ್ಪು’ ಎಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ  ಅಭಿಪ್ರಾಯಪಟ್ಟರು.

‘ಮೀಸಲಾತಿಗಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲ ಮುಖಂಡರು ಮಾಡುತ್ತಿದ್ದಾರೆ. ವೀರಶೈವ ಸಮುದಾಯವು ಇತರ ಜಾತಿಗಳಂತೆ ಹಿಂದೂ ಧರ್ಮದ ಒಂದು ಶಾಖೆ’ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

‘1904ರಲ್ಲಿ ನಡೆದ ವೀರಶೈವ ಮಹಾಸಭೆಯಲ್ಲಿ ವೀರಶೈವರು ಹಿಂದೂಗಳು ಎಂಬ ನಿರ್ಣಯ ತೆಗೆದುಕೊಳ್ಳಲಾಗಿತ್ತು. 1940 ರಲ್ಲಿ ನಡೆದ ಮತ್ತೊಂದು ಮಹಾಸಭೆಯಲ್ಲಿ ವೀರಶೈವರು ಹಿಂದೂಗಳಲ್ಲ ಎಂಬ ನಿರ್ಣಯ ತೆಗೆದುಕೊಳ್ಳಲಾ ಗಿತ್ತು. ಈ ವಿಚಾರದಲ್ಲಿ ಅವರಲ್ಲೇ ದ್ವಂದ್ವ ನಿಲುವು ಇದೆ’ ಎಂದರು.
‘ಮೀಸಲಾತಿ ಆಸೆಗಾಗಿ ಮತ್ತೆ ಅಂಥದ್ದೇ ಬೇಡಿಕೆ ಇಟ್ಟಿರುವುದು ಅಪಾಯಕಾರಿ ನಡೆ’ ಎಂದು ಅವರು ಅಭಿಪ್ರಾಯ ಪಟ್ಟರು.

ADVERTISEMENT

‘1995ರ ಸುಪ್ರೀಂಕೋರ್ಟ್ ತೀರ್ಪೊಂದರಂತೆ ಹಿಂದೂ ಧರ್ಮದ ಸ್ವರೂಪವನ್ನು ವೀರಶೈವ ಪಂಥ ಒಳಗೊಂಡಿದೆ. ಹಿಂದೂ ವಿವಾಹ ಕಾಯ್ದೆಯಲ್ಲೂ ಅವರನ್ನು ಹಿಂದೂಗಳ ಪಟ್ಟಿಗೆ ಸೇರಿಸಲಾಗಿದೆ.  ಹಿಂದೂ ಧರ್ಮದಿಂದ ಲಿಂಗಾಯತರನ್ನು ಬೇರ್ಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ  ತಿರುಕನ ಕನಸು ಕಾಣುತ್ತಿ ದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಈ ರೀತಿಯ ಬೇಡಿಕೆಗಳು ಬ್ರಿಟಿಷರ ಒಡೆದು ಆಳುವ ನೀತಿಯ ಪರಿಣಾಮದಂತಿದೆ. ಬ್ರಾಹ್ಮಣರು  ಜನಿವಾರ ಧರಿಸು ವಂತೆ ನಾವು ಲಿಂಗ ಧಾರಣೆ ಮಾಡು ತ್ತೇವೆ. ಅಂದ ಮಾತ್ರಕ್ಕೆ ವೀರಶೈವ ಪ್ರತ್ಯೇಕ ಧರ್ಮವಲ್ಲ. ಒಕ್ಕಲಿಗ, ಕುರುಬ ಇತರ ಜಾತಿಗಳು ಧರ್ಮಕ್ಕೆ ಬೇಡಿಕೆ ಇಟ್ಟರೆ, ಹಿಂದೂ ಧರ್ಮವೇ ಅಲ್ಪಸಂಖ್ಯಾತ ಧರ್ಮವಾಗುತ್ತದೆ’ ಎಂದು ಚಿದಾನಂದ ಮೂರ್ತಿ ಅವರು ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಶಾಮನೂರು ಶಿವಶಂಕರಪ್ಪ  ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವಂತೆ ಆಗ್ರಹಿಸಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.