ADVERTISEMENT

ಪ್ರೀತಿಸಲ್ಲ ಎಂದ ಬಾಲಕಿಗೆ ಮುತ್ತಿಕ್ಕಿದ!

ಪೊಲೀಸರ ವಶಕ್ಕೆ ಮೂವರು ಬಾಲಕರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 20:22 IST
Last Updated 21 ಜುಲೈ 2017, 20:22 IST
ಗ್ರಾಫಿಕ್: ಭಾವು ಪತ್ತಾರ್
ಗ್ರಾಫಿಕ್: ಭಾವು ಪತ್ತಾರ್   

ಬೆಂಗಳೂರು: ವಿಜಿನಾಪುರದಲ್ಲಿ 11 ವರ್ಷದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮೂವರು ಬಾಲಕರನ್ನು ರಾಮಮೂರ್ತಿನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸರ್ಕಾರಿ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿರುವ ಸಂತ್ರಸ್ತೆ, ಜುಲೈ 10ರಂದು ತರಗತಿ ಮುಗಿಸಿಕೊಂಡು ಮನೆಗೆ ನಡೆದು ಹೋಗುತ್ತಿದ್ದಳು. ಈ ವೇಳೆ 14 ರಿಂದ 16 ವರ್ಷ ವಯೋಮಾನದ ನಾಲ್ವರು ಬಾಲಕರ ಗ್ಯಾಂಗ್ ಆಕೆಯನ್ನು ಅಡ್ಡಗಟ್ಟಿತ್ತು ಎಂದು ಪೊಲೀಸರು ಹೇಳಿದ್ದಾರೆ. ಒಬ್ಬಾತ ತನ್ನನ್ನು ಪ್ರೀತಿ ಮಾಡುವಂತೆ ಸಂತ್ರಸ್ತೆಗೆ ಬಲವಂತ ಮಾಡಿದ್ದ. ಅದಕ್ಕೆ ಒಪ್ಪದಿದ್ದಾಗ, ಆಕೆಯ ಕೆನ್ನೆಗೆ ಮುತ್ತು ಕೊಟ್ಟಿದ್ದ. ಇದರಿಂದ ಕೆರಳಿದ ಬಾಲಕಿ, ಆತನ ಕೆನ್ನೆಗೆ ಹೊಡೆದಿದ್ದಳು. ಆ ನಂತರ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದ ಬಾಲಕರು, ಲೈಂಗಿಕ ಕಿರಕುಳ ನೀಡಿದ್ದಲ್ಲದೆ ಮನಸೋಇಚ್ಛೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲಿಂದ ಮನೆಗೆ ತೆರಳಿದ ಬಾಲಕಿ, ಭಯದಿಂದಾಗಿ ಪೋಷಕರಿಗೆ ವಿಷಯ ತಿಳಿಸಿರಲಿಲ್ಲ. ಆದರೆ, ಗುರುವಾರ ಸಂಜೆ ವಿಪರೀತ ಜ್ವರ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದಳು. ತಪಾಸಣೆ ಸಂದರ್ಭದಲ್ಲಿ ಮೈಮೇಲಿನ ಗಾಯದ ಗುರುತುಗಳನ್ನು ಕಂಡ ವೈದ್ಯರು, ಅದರ ಬಗ್ಗೆ ವಿಚಾರಿಸಿದಾಗ ಜುಲೈ 10ರಂದು ನಡೆದಿದ್ದ ಘಟನೆ ಬಗ್ಗೆ ಹೇಳಿದ್ದಳು.

ADVERTISEMENT

ತಕ್ಷಣ ವೈದ್ಯರು ರಾಮಮೂರ್ತಿನಗರ ಠಾಣೆಗೆ ವಿಷಯ ತಿಳಿಸಿದ್ದಾರೆ. ಆಸ್ಪತ್ರೆಗೆ ತೆರಳಿದ ಪೊಲೀಸರು, ಬಾಲಕಿಯ ಹೇಳಿಕೆ ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಹಾಗೂ ಹಲ್ಲೆ ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಒಬ್ಬಾತ ಸೆರೆ
‘ಶುಕ್ರವಾರ ರಾತ್ರಿಯೇ ಬಾಲಕರ ಮನೆಗಳ ಮೇಲೆ ದಾಳಿ ನಡೆಸಿದೆವು. ಈ ವೇಳೆ ಇಬ್ಬರು ಸಿಕ್ಕಿಬಿದ್ದರು. ಅವರನ್ನು ವಿಚಾರಣೆ ನಡೆಸಿದಾಗ, ಮತ್ತಿಬ್ಬರು ಬಾಲಕರು ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋಗಿರುವುದಾಗಿ ಹೇಳಿದರು. ಆ ಮಾಹಿತಿ ಆಧರಿಸಿ ಶನಿವಾರ ಬೆಳಿಗ್ಗೆ ಅಲ್ಲಿಗೆ ತೆರಳಿದ ತಂಡ, ಮತ್ತೊಬ್ಬನನ್ನು ವಶಕ್ಕೆ ಪಡೆದಿದೆ. ಇನ್ನೊಬ್ಬನ ಬಂಧನಕ್ಕೆ ಶೋಧ ಮುಂದುವರಿದಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.