ADVERTISEMENT

ಫ್ಲ್ಯಾಟ್‌ ಹಂಚಿಕೆ ಬಳಿಕವೇ ಹೊಸ ಕಾಮಗಾರಿ

ಬೇಡಿಕೆ ಕುಸಿತಗೊಂಡ ಬಳಿಕ ಎಚ್ಚೆತ್ತುಕೊಂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಪ್ರವೀಣ ಕುಮಾರ್ ಪಿ.ವಿ.
Published 22 ಮೇ 2017, 19:35 IST
Last Updated 22 ಮೇ 2017, 19:35 IST
ಬೆಂಗಳೂರು: ವಸತಿ ಸಮುಚ್ಚಯಗಳ ಫ್ಲ್ಯಾಟ್‌ಗಳಿಗೆ ನಿರೀಕ್ಷಿಸಿದಷ್ಟು ಬೇಡಿಕೆ ಬಾರ­ದಿರುವುದರಿಂದ ಎಚ್ಚೆತ್ತು ಕೊಂಡಿ­ರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ­ವು (ಬಿಡಿಎ),  ಈಗಾಗಲೇ ನಿರ್ಮಾಣ­ವಾಗಿರುವ ಎಲ್ಲ ಫ್ಲ್ಯಾಟ್‌ಗಳು ಹಂಚಿಕೆ ಆದ ಬಳಿಕವೇ ಪ್ರಸ್ತಾವಿತ ವಸತಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. 
 
 ಬಿಡಿಎ ಇತ್ತೀಚೆಗೆ ಒಟ್ಟು 3,512 ಫ್ಲ್ಯಾಟ್‌­ಗಳ ಹಂಚಿಕೆಗೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಕೇವಲ 800 ಅರ್ಜಿಗಳು ಬಂದಿದ್ದವು.  ಈ ಫ್ಲ್ಯಾಟ್‌ಗಳ ಹಂಚಿಕೆ ಪ್ರಕ್ರಿಯೆ ಇನ್ನೂ ಪೂರ್ಣ­ಗೊಂಡಿಲ್ಲ. ಇವುಗಳಲ್ಲದೇ  3,500 ಫ್ಲ್ಯಾಟ್‌ಗಳು  ನಿರ್ಮಾಣ ಹಂತದಲ್ಲಿವೆ. ಅರ್ಜಿ ಸಲ್ಲಿಸಿದವರಿಗೆಲ್ಲ ಹಂಚಿಕೆ ಮಾಡಿದ ಬಳಿಕವೂ ಬಿಡಿಎ ಬಳಿ 6,200 ಫ್ಲ್ಯಾಟ್‌ಗಳು ಲಭ್ಯವಿರುತ್ತವೆ.
 
‘ಬೆಂಗಳೂರಿನ ವಸತಿ ಬವಣೆ ನೀಗಿಸಲು ಒಟ್ಟು 30 ಸಾವಿರ ಫ್ಲ್ಯಾಟ್‌­ಗಳನ್ನು ನಿರ್ಮಿಸಲು 2010–11ರಲ್ಲಿ ಸರ್ಕಾರ ನಿರ್ಧರಿಸಿತ್ತು.  ವರ್ಷದಲ್ಲಿ 2,000­ದಿಂದ 3,000 ದಷ್ಟು ಫ್ಲ್ಯಾಟ್‌ಗಳನ್ನು ನಿರ್ಮಿಸುವಂತೆ ಗುರಿ ನಿಗದಿಪಡಿಸಲಾಗುತ್ತದೆ.
 
ನಾವು ಪ್ರತಿ­ವರ್ಷವೂ ಶೇಕಡಾ 80ರಷ್ಟು  ಗುರಿ ಸಾಧನೆ ಮಾಡುತ್ತಾ ಬಂದಿದ್ದೇವೆ. 2016–17ನೇ ಸಾಲಿನಲ್ಲಿ 2,000 ಹಾಗೂ 2017–18ರಲ್ಲಿ 3,000 ಫ್ಲ್ಯಾಟ್‌ಗಳನ್ನು ನಿರ್ಮಿಸುವ ಪ್ರಸ್ತಾವ­ವಿತ್ತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  
 
ಬಿಡಿಎ ಆಡಳಿತ ಮಂಡಳಿಯೇ  ಪ್ರಸ್ತಾವಿತ ವಸತಿ ಯೋಜನೆಗಳನ್ನು ಮುಂದುವರಿಸದಿರಲು ನಿರ್ಧರಿಸಿ ರುವುದರಿಂದ ಹೊಸ ಫ್ಲ್ಯಾಟ್‌ ನಿರ್ಮಾಣ­ಗೊಳ್ಳುವುದು ಅನುಮಾನ.    
 
ಪ್ರಚಾರ ತಂತ್ರ ಬದಲು: ಫ್ಲ್ಯಾಟ್‌ಗಳಿಗೆ ಬೇಡಿಕೆ ಕುಸಿಯುತ್ತಿರುವುದನ್ನು ಬಿಡಿಎ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಏಪ್ರಿಲ್‌ 16ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿತ್ತು.
 
ಖಾಸಗಿ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಗ್ರಾಹಕರನ್ನು ಸೆಳೆಯಲು ಅನುಸರಿಸುತ್ತಿರುವ ಪ್ರಚಾರ ತಂತ್ರಗಳನ್ನು ಬಿಡಿಎ ಕೂಡಾ ಅನುಸರಿಸ ಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
 
‘ಬಿಡಿಎ ಫ್ಲ್ಯಾಟ್‌ಗಳಿಗೆ ಬೇಡಿಕೆ ಕುಸಿ ಯುವುದಕ್ಕೆ ಅನೇಕ ಕಾರಣಗಳಿವೆ. ದೊಡ್ಡ ಮುಖಬೆಲೆಯ ನೋಟು ರದ್ದತಿಯ ಬಳಿಕ   ಫ್ಲ್ಯಾಟ್‌ಗಳ ಮಾರು ಕಟ್ಟೆ ಕುಸಿದಿದೆ. ಖಾಸಗಿಯವರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ತಾತ್ಕಾಲಿಕ ಹಿನ್ನಡೆ ಮಾತ್ರ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.  
 
‘ಈಗಲೂ 3 ಬಿಎಚ್‌ಕೆ ಫ್ಲ್ಯಾಟ್‌ ಹಾಗೂ 1 ಬಿಎಚ್‌ಕೆ ಫ್ಲ್ಯಾಟ್‌ಗಳಿಗೆ ಬೇಡಿಕೆ ಇದೆ. ಆದರೆ, 2 ಬಿಎಚ್‌ಕೆ ಫ್ಲ್ಯಾಟ್‌­­ಗಳಿಗೆ  ಬೇಡಿಕೆ ಸ್ವಲ್ಪ ಕಡಿಮೆ ಆಗಿದೆ. ಹೊಸ ಕಾಮಗಾರಿ ಕೈಗೆತ್ತಿ­ಕೊಳ್ಳಬೇಕೋ ಬೇಡವೋ ಎಂದು ಆಡಳಿತ ಮಂಡಳಿ ಹಾಗೂ ಸರ್ಕಾರ ನಿರ್ಧರಿ­ಸುತ್ತದೆ. ಅವರ ಆದೇಶವನ್ನು ಪಾಲಿಸುವುದಷ್ಟೇ ನಮ್ಮ ಕೆಲಸ. ಸದ್ಯಕ್ಕೆ ನಮಗಿನ್ನೂ ಈ ಬಗ್ಗೆ ಸೂಚನೆ ಬಂದಿಲ್ಲ’ ಎಂದರು. 
 
‘ಜನರಿಂದ ಬೇಡಿಕೆ ಬಾರದಿದ್ದರೂ ಬಿಡಿಎ ಅನಗತ್ಯವಾಗಿ ಫ್ಲ್ಯಾಟ್‌ಗಳನ್ನು ನಿರ್ಮಿಸುತ್ತಿತ್ತು. ಆಡಳಿತ ಮಂಡಳಿ ಈಗಲಾದರೂ ಎಚ್ಚೆತ್ತುಕೊಂಡು 
ಫ್ಲ್ಯಾಟ್‌ ನಿರ್ಮಾಣಕ್ಕೆ ಕಡಿವಾಣ ಹಾಕಿರುವುದು ಒಳ್ಳೆಯ ಬೆಳವಣಿಗೆ.  ಜನರಿಗೆ ಅಗತ್ಯವಿರುವ ಕೆಲಸಗಳ ಬಗ್ಗೆ ಬಿಡಿಎ ಆದ್ಯತೆ ನೀಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಒತ್ತಾಯಿಸಿದರು.  
****
ಹಂಚಿಕೆ ಆದರೂ ಹಸ್ತಾಂತರವಾಗದ ಫ್ಲ್ಯಾಟ್‌ಗಳು
ಗುಂಜೂರಿನಲ್ಲಿ ಬಿಡಿಎ ನಿರ್ಮಿಸಿರುವ  ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಿ ಎರಡು ವರ್ಷಗಳೇ ಉರುಳಿವೆ. ಆದರೆ, ಬಿಡಿಎ ಅವುಗಳನ್ನು ಇನ್ನೂ ಮಾಲೀಕರಿಗೆ ಹಸ್ತಾಂತರಿಸಿಲ್ಲ.

‘ಫ್ಲ್ಯಾಟ್‌ ಹಂಚಿಕೆ ಮಾಡುವಾಗ ಅದರ ಕೆಲಸ ೂರ್ಣವಾಗಿರುವುದಿಲ್ಲ. ಹಂಚಿಕೆ ಬಳಿಕವೂ ಹಣ ಪಾವತಿಗೆ ನಾಲ್ಕು ತಿಂಗಳು ಕಾಲಾವಕಾಶ ಇರುತ್ತದೆ. ಪೂರ್ಣ ಪ್ರಮಾಣದಲ್ಲಿ ಹಣ ಪಾವತಿ ಆದ ಬಳಿಕವಷ್ಟೇ ಹಸ್ತಾಂತರ ಮಾಡಲಾಗುತ್ತದೆ.
 
ಗುಂಜೂರಿನ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರು ಕೆಲಸ ಬಾಕಿ ಉಳಿಸಿಕೊಂಡರು. ಅವರಿಗೆ ನೀಡಿದ್ದ ಟೆಂಡರ್‌ ರದ್ದುಪಡಿಸಿ, ಮರು ಟೆಂಡರ್‌ ಕರೆಯಬೇಕಾಗಿ ಬಂದಿದ್ದರಿಂದ ಈ ಕಾಮಗಾರಿ ಬಾಕಿ ಆಗಿದೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿ ಎನ್‌.ಜಿ.ಗೌಡಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಈಗ ಬೇರೆ ಗುತ್ತಿಗೆದಾರರಿಗೆ ಕಾಮಗಾರಿಯ ಟೆಂಡರ್‌ ನೀಡಿದ್ದೇವೆ. ಬಾಕಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ  ಫ್ಲ್ಯಾಟ್‌ಗಳನ್ನು ಮಾಲೀಕರಿಗೆ  ಹಸ್ತಾಂತರಿಸುತ್ತೇವೆ’ ಎಂದರು.
****
‘ಹಂಚಿಕೆ ವಿಧಾನವೇ ಸರಿ ಇಲ್ಲ’
‘ಬಿಡಿಎ ಫ್ಲ್ಯಾಟ್‌ಗಳ ಹಂಚಿಕೆ ವಿಧಾನವೇ ಸರಿ ಇಲ್ಲ. ಇದರಿಂದಾಗಿ ಗ್ರಾಹಕರು ಅನುಕೂಲಕ್ಕೆ ತಕ್ಕ  ಫ್ಲ್ಯಾಟ್‌ ಖರೀದಿಸಲು ಸಾಧ್ಯವಾಗು ತ್ತಿಲ್ಲ. ಇವು ಬೇಡಿಕೆ ಕಳೆದುಕೊಳ್ಳು ವುದಕ್ಕೆ ಇದು ಕೂಡಾ  ಕಾರಣ’ ಎಂದು ದೂರುತ್ತಾರೆ ಸಾಯಿದತ್ತ.

‘ಅರ್ಜಿ ಸಲ್ಲಿಸಿದ ಬಳಿಕ ಫ್ಲ್ಯಾಟ್‌ ಕೈಸೇರಲು ಗ್ರಾಹಕರು ವರ್ಷಗಟ್ಟಲೆ  ಕಾಯಬೇಕಿದೆ. ಕನಿಷ್ಠ ಪಕ್ಷ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲು ಫ್ಲ್ಯಾಟ್‌ ಹಂಚಿಕೆ ಮಾಡಬೇಕು.  ಅವರು ಬಯಸಿದ ಫ್ಲ್ಯಾಟ್‌ ಆಯ್ಕೆ ಮಾಡುವ ಅವಕಾಶ ಒದಗಿಸಬೇಕು.

ಮನೆ ಖರೀದಿಸುವ ಮುನ್ನ ವಾಸ್ತು, ಅದರ  ಪ್ರವೇಶ ಯಾವ ದಿಕ್ಕಿನಲ್ಲಿದೆ ಎಂಬ ಅಂಶಗಳನ್ನೂ ಜನ ಪರಿಗಣಿಸುತ್ತಾರೆ. ಬೇಡಿಕೆ ಹೆಚ್ಚ ಬೇಕಾದರೆ ಈ ಅಂಶಗಳತ್ತಲೂ . ಪ್ರಚಾರ ತಂತ್ರ ಬದಲಾಯಿಸಿ ಫ್ಲ್ಯಾಟ್‌ ಮಾರಾಟ ಮಾಡಲು ಸಾಧ್ಯವಾಗದು’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.