ADVERTISEMENT

ಬಾಂಗ್ಲಾ ಮಹಿಳೆಗೆ ದೌರ್ಜನ್ಯ; ಕಾಂಗ್ರೆಸ್ ಕಾರ್ಯಕರ್ತೆ ಬಂಧನ

​ಪ್ರಜಾವಾಣಿ ವಾರ್ತೆ
Published 29 ಮೇ 2015, 20:10 IST
Last Updated 29 ಮೇ 2015, 20:10 IST

ಬೆಂಗಳೂರು: ಚಪ್ಪಲಿ ಬಿಲ್‌ ಪಾವತಿಸದ ನೆಪ ಮುಂದಿಟ್ಟುಕೊಂಡು ಬಾಂಗ್ಲಾದೇಶ ಮೂಲದ ಮಹಿಳೆಯನ್ನು ಬಟ್ಟೆ ಬಿಚ್ಚಿಸಿ ಥಳಿಸಿದ್ದಲ್ಲದೆ, 60 ಸಾವಿರ ನಗದು ಹಾಗೂ ಬಾಂಗ್ಲಾ ಕರೆನ್ಸಿ ದೋಚಿ ಪರಾರಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತೆ ಮಂಜುಳಾ (45) ಹೆಬ್ಬಗೋಡಿ ಪೊಲೀಸರ ಅತಿಥಿಯಾಗಿದ್ದಾರೆ.

ಈ ಸಂಬಂಧ ರಶೀದಾ ಬೇಗಂ (38) ಎಂಬುವರು ದೂರು ಕೊಟ್ಟಿದ್ದರು. ಹೆಬ್ಬಗೋಡಿ ನಿವಾಸಿಯಾದ ಮಂಜುಳಾ, ಸ್ಥಳೀಯವಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಸಮಾಜ ಸೇವಕಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದುದಾಗಿ ಪೊಲೀಸರು ಹೇಳಿದ್ದಾರೆ.

ಪತಿ ಮಹಮದ್ ಮುಜಾಬಿರ್‌ ಅವರ ಶಸ್ತ್ರಚಿಕಿತ್ಸೆಗಾಗಿ 15 ದಿನಗಳ ಹಿಂದೆ ನಗರಕ್ಕೆ ಬಂದಿದ್ದ ರಶೀದಾ, ಗಂಡ­ನನ್ನು ನಾರಾಯಣ ಹೃದಯಾ­ಲಯಕ್ಕೆ ದಾಖಲಿಸಿದ್ದರು. ಮೇ 25ರಂದು ಶಸ್ತ್ರಚಿಕಿತ್ಸೆ ನಡೆಯಿತು. ಆಗ ಪತಿಯ ಬಟ್ಟೆ ಬದಲಿಸುವಂತೆ ನರ್ಸ್‌ಗಳು ರಶೀದಾ ಅವರಿಗೆ ಸೂಚಿಸಿದ್ದರು. ಹೀಗಾಗಿ ಬಟ್ಟೆ, ಚಪ್ಪಲಿ ಮತ್ತಿತರ ಸಾಮಗ್ರಿಗಳನ್ನು ಖರೀ­ದಿಸಲು ಅವರು ಹತ್ತಿರದ ‘ಡಿ–ಮಾರ್ಟ್‌’ ಮಳಿಗೆಗೆ  ತೆರಳಿದ್ದರು.

ಅಗತ್ಯ ವಸ್ತುಗಳನ್ನು ಖರೀದಿಸಿದ ಅವರು, ತಮಗೂ ಒಂದು ಜತೆ ಚಪ್ಪಲಿ ಖರೀದಿಸಿ ಅಲ್ಲೇ ಕಾಲಿಗೆ ಹಾಕಿಕೊಂಡರು. ಮಳಿಗೆಯಿಂದ ಹೊರ ಹೋಗುವಾಗ ಅವರನ್ನು ತಡೆದ ಭದ್ರತಾ ಸಿಬ್ಬಂದಿ, ಬಿಲ್‌ ಪರಿಶೀಲಿಸಿದ್ದಾರೆ. ಆಗ ರಶೀದಾ ಅವರು ಚಪ್ಪಲಿಗೆ ಬಿಲ್‌ ಪಾವತಿಸಿಲ್ಲ ಎಂಬ ಸಂಗತಿ ಗೊತ್ತಾಗಿದೆ.

ಈ ಬಗ್ಗೆ ಮಳಿಗೆಯ ವ್ಯವಸ್ಥಾಪಕರು ಒಂದನೇ ಮಹಡಿಯಲ್ಲಿ ರಶೀದಾ ಅವರನ್ನು ವಿಚಾರಣೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಮಂಜುಳಾ, ‘ನಾನು ಹೆಡ್‌ ಕಾನ್‌ಸ್ಟೆಬಲ್’ ಎಂದು ಹೇಳಿಕೊಂಡಿ­ದ್ದಾರೆ.

‘ಮರೆತು ಬಿಲ್ ಕಟ್ಟಲಿಲ್ಲ. ಈ ಕೂಡಲೇ ಪಾವತಿಸುತ್ತೇನೆ’ ಎಂದು ರಶೀದಾ ಪರಿಪರಿಯಾಗಿ ಬೇಡಿ­ಕೊಂ­ಡರೂ ಒಪ್ಪದ ಮಂಜುಳಾ, ಸಿಬ್ಬಂದಿ­ಯನ್ನು ಹೊರಕಳುಹಿಸಿ ತಪಾಸಣೆ ನೆಪದಲ್ಲಿ ಅವರ ಬಟ್ಟೆ ಬಿಚ್ಚಿಸಿದ್ದರು. ಅಲ್ಲದೇ, ಪತಿಯ ಚಿಕಿತ್ಸೆಗೆ ತಂದಿದ್ದ ₨ 60 ಸಾವಿರ ಹಾಗೂ ಬಾಂಗ್ಲಾ ಕರೆನ್ಸಿ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನಂತರ ಮಳಿಗೆಯಿಂದ ಆಸ್ಪತ್ರೆಗೆ ತೆರಳಿದ ರಶೀದಾ, ನರ್ಸ್‌ಗಳ ಬಳಿ ನಡೆದ ಘಟನೆಯನ್ನು ವಿವರಿಸಿದ್ದರು. ಅವರ ನೆರವಿಗೆ ಬಂದ ಆಸ್ಪತ್ರೆಯ ಸಿಬ್ಬಂದಿ, ಮಳಿಗೆಗೆ ತೆರಳಿ ವ್ಯವಸ್ಥಾಪಕರನ್ನು ವಿಚಾರಿ­ಸಿದ್ದರು. ಆದರೆ, ತಮಗೇನೂ ಗೊತ್ತಿಲ್ಲ ಎಂದು ಅವರು ಹೇಳಿದ್ದರಿಂದ ಹೆಬ್ಬಗೋಡಿ ಠಾಣೆಯ ಮೆಟ್ಟಿಲೇರಿದ್ದರು.

ಮಂಜುಳಾ ರಾಜಕೀಯ ಪ್ರಭಾವ ಹೊಂದಿದ್ದ ಮಹಿಳೆ ಎಂಬ ಕಾರಣಕ್ಕೆ ಆರಂಭದಲ್ಲಿ ಪ್ರಕರಣ ದಾಖಲಿಸಿ­ಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಎಫ್‌ಐಆರ್ ದಾಖಲಿಸಿ, ಮಂಜುಳಾ ಅವರನ್ನು ಬಂಧಿಸಿದ್ದಾರೆ. ಮಂಜುಳಾ ನಡೆಸಿದ ದೌರ್ಜನ್ಯದ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.