ADVERTISEMENT

ಬಾರ್ ತೆಗೆಸಿ ಮಾಂಗಲ್ಯ ಉಳಿಸಿ: ಮಾರುತಿ ನಗರದ ಮಹಿಳೆಯರ ಮನವಿ

​ಪ್ರಜಾವಾಣಿ ವಾರ್ತೆ
Published 28 ಮೇ 2018, 6:30 IST
Last Updated 28 ಮೇ 2018, 6:30 IST
ಶಾಸಕರಿಗೆ ಮುತ್ತಿಗೆ ಹಾಕಿದ ಗ್ರಾಮದ ಮಹಿಳೆಯರು
ಶಾಸಕರಿಗೆ ಮುತ್ತಿಗೆ ಹಾಕಿದ ಗ್ರಾಮದ ಮಹಿಳೆಯರು   

ಬೆಂಗಳೂರು: ‘ಚಿಕ್ಕಬಾಣಾವರದ ಮಾರುತಿ ನಗರದಲ್ಲಿರುವ ಬಾರನ್ನು ಶೀಘ್ರ ಸ್ಥಳಾಂತರಿಸಿ, ನಮ್ಮ ಮಾಂಗಲ್ಯ ಉಳಿಸಿ’ ಎಂದು ಗ್ರಾಮದ ಮಹಿಳೆಯರು ದಾಸರಹಳ್ಳಿ ಶಾಸಕ ಆರ್.ಮಂಜುನಾಥ್‌ಗೆ ಕೋರಿದರು.

ಜೆಡಿಎಸ್ ಪಕ್ಷದ ಕಾರ್ಯಕರ್ತರು ಶಾಸಕರ ಗೆಲುವಿಗೆ ಗ್ರಾಮದ ಆಂಜನೇಯ ಸ್ವಾಮಿಗೆ ಹೊತ್ತಿದ್ದರು. ಹರಕೆ ತೀರಿಸಲು ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಲು ಬಂದಿದ್ದ ಶಾಸಕರಿಗೆ ಮುತ್ತಿಗೆ ಹಾಕಿದ ಮಹಿಳೆಯರು, ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿದರು.

‘ಗ್ರಾಮದ ಮಹಿಳೆಯರ ಸಾಕಷ್ಟು ವಿರೋಧದ ನಡುವೆಯೂ ಬಾರ್‌ ನಿರ್ಮಾಣವಾಗಿದೆ. ಬಂಡವಾಳಶಾಹಿಗಳು ಅಧಿಕಾರಿಗಳಿಗೆ ಹಣ ಆಮಿಷ ನೀಡಿ, ಬಾರ್‌ಗೆ ಅನುಮತಿ ಪಡೆದುಕೊಂಡಿದ್ದಾರೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಬಾರ್‌ನಿಂದಾಗಿ ಸಂಜೆ ವೇಳೆ ಈ ಭಾಗದಲ್ಲಿ ಮಹಿಳೆಯರು ಓಡಾಡುವುದು ಕಷ್ಟವಾಗಿದೆ. ಬೆಳಿಗ್ಗೆಯಿಂದ ದುಡಿದ ಗಂಡಸರು ಮನೆಗೆ ಬರುವ ಬದಲು ಬಾರಿಗೆ ಹೋಗುತ್ತಿದ್ದಾರೆ. ವಸತಿ ಪ್ರದೇಶದಲ್ಲಿರುವ ಈ ಬಾರನ್ನು ಬೇರೆ ಕಡೆಗೆ ಸ್ಥಳಾಂತರಿಸಿ’ ಎಂದು ಗ್ರಾಮದ ನಿವಾಸಿ ಮಹಾಲಕ್ಷ್ಮೀ ಕಣ್ಣೀರು ಹಾಕಿದರು.

ಶಾಸಕ ಆರ್. ಮಂಜುನಾಥ್ ಮಾತನಾಡಿ ‘ಶೀಘ್ರದಲ್ಲಿ ಈ ಕೆಲಸ ಮಾಡಿ ಕೊಡುತ್ತೇನೆ. ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ ಬಾರ್ ಸ್ಥಳಾಂತರ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.