ADVERTISEMENT

ಬಿಜೆಪಿಗೆ ಒಲಿದ ಹೆಬ್ಬಗೋಡಿ ನಗರಸಭೆ

​ಪ್ರಜಾವಾಣಿ ವಾರ್ತೆ
Published 23 ಮೇ 2016, 19:32 IST
Last Updated 23 ಮೇ 2016, 19:32 IST

ಆನೇಕಲ್‌: ತಾಲ್ಲೂಕಿನ ಹೆಬ್ಬಗೋಡಿ ನಗರಸಭೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪುಷ್ಪಲತಾ ಉಮೇಶ್ ಅಧ್ಯಕ್ಷರಾಗಿ ಹಾಗೂ ಶ್ರೀನಿ ವಾಸ್‌ ರೆಡ್ಡಿ ಉಪಾಧ್ಯಕ್ಷರಾಗಿ ಚುನಾಯಿತ ರಾಗುವ ಮೂಲಕ ತಾಲ್ಲೂಕಿನ ಏಕೈಕ ನಗರಸಭೆಯ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಪುಷ್ಪಲತಾ ಉಮೇಶ್ ಹಾಗೂ ಕಾಂಗ್ರೆಸ್‌ನ ಜಯಂತಿ ನಾಗರಾಜು ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ 19 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ನ ಜಯಂತಿ ನಾಗರಾಜು 15 ಮತಗಳನ್ನು ಪಡೆದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ರೀನಿವಾಸ್ ರೆಡ್ಡಿ 19 ಮತಗಳು ಹಾಗೂ ಕಾಂಗ್ರೆಸ್‌ನ ಮಂಜುನಾಥ್ 15 ಮತಗಳನ್ನು ಪಡೆದರು. ನಗರಸಭೆಯ 31 ಸ್ಥಾನ ಗಳಲ್ಲಿ ಬಿಜೆಪಿ 17, ಕಾಂಗ್ರೆಸ್‌ ಪಕ್ಷ 13 ಹಾಗೂ ಪಕ್ಷೇತರ ಸದಸ್ಯ 1 ಸ್ಥಾನದಲ್ಲಿ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ 17ಸದಸ್ಯರ ಜತೆಗೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಹಾಗೂ ಪಕ್ಷೇತರ ಸದಸ್ಯ ಮತ ಚಲಾಯಿಸಿದ್ದರಿಂದ 19 ಮತಗಳು ಬಿಜೆಪಿಯ ಪರವಾಗಿ ಚಲಾವಣೆಯಾದವು.

ಕಾಂಗ್ರೆಸ್‌ನ 13 ಮತಗಳ ಜೊತೆಗೆ ಶಾಸಕ ಬಿ.ಶಿವಣ್ಣ, ಸಂಸದ ಡಿ.ಕೆ.ಸುರೇಶ್ ಮತ ಚಲಾಯಿಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗಳು 15 ಮತ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.